ಕರಾವಳಿ, ಮಲೆನಾಡು ಸೇರಿದಂತೆ ಒಳನಾಡು ಜಿಲ್ಲೆಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಶುಕ್ರವಾರ ಮತ್ತು ಶನಿವಾರವೂ ಮಳೆ ಮುಂದುವರೆಯಲಿದೆ.

ಬೆಂಗಳೂರು (ಆ.08): ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರೆಯಲಿದೆ. ಆದರೆ ಭಾನುವಾರದಿಂದ ಮಳೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ, ಮಲೆನಾಡು ಸೇರಿದಂತೆ ಒಳನಾಡು ಜಿಲ್ಲೆಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಶುಕ್ರವಾರ ಮತ್ತು ಶನಿವಾರವೂ ಮಳೆ ಮುಂದುವರೆಯಲಿದೆ. ಕರಾವಳಿಯ ಮೂರು ಜಿಲ್ಲೆಗಳಿಗೆ ಶುಕ್ರವಾರ ಆರೆಂಜ್‌ ಅಲರ್ಟ್‌, ಶನಿವಾರ ಯೆಲ್ಲೋ ಅಲರ್ಟ್‌ ಎಚ್ಚರಿಕೆ ನೀಡಿದೆ.

ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌, ಬೀದರ್‌, ಗದಗ, ಕಲಬುರಗಿ, ರಾಯಚೂರು, ವಿಜಯಪುರ, ಧಾರವಾಡ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾಸನ, ಕೊಪ್ಪಳ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಕರಾವಳಿ ಹೊರತುಪಡಿಸಿ ಭಾನುವಾರದಿಂದ ರಾಜ್ಯದಲ್ಲಿ ಹಗುರ ಮಳೆ ಮುಂದುವರೆಯಲಿದೆ.

ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಹವಾಮಾನ ಇಲಾಖೆಯ ವರದಿ ಪ್ರಕಾರ, ಕೊಪ್ಪಳದ ಕುಕನೂರಿನಲ್ಲಿ ಅತಿ ಹೆಚ್ಚು 7 ಸೆಂ.ಮೀ. ಮಳೆಯಾಗಿದೆ. ಬದಾಮಿ, ಕುಷ್ಟಗಿಯಲ್ಲಿ ತಲಾ 5, ದೇವದುರ್ಗ, ಮುದ್ದೇಬಿಹಾಳ, ಗುಳೇದಗುಡ್ಡ, ನಾಗಮಂಗಲ, ಬೆಂಗಳೂರಿನಲ್ಲಿ ತಲಾ 3 ಸೆಂ.ಮೀ. ಮಳೆಯಾಗಿದೆ. ಕಾರ್ಕಳ, ಬೀದರ್‌, ನರಗುಂದ, ಆಗುಂಬೆಯಲ್ಲಿ ತಲಾ 2 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬೆಳೆ ನಾಶ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗಿನ ಜಾವ ಸುರಿದ ಭಾರಿ ಮಳೆಗೆ ಅಪಾರ ಹಾನಿಯಾಗಿದೆ. ಕೆಲವು ಮನೆಗಳು ಕುಸಿದಿದ್ದರೆ, ಹತ್ತಿ, ದಾಳಿಂಬೆ ಬೆಳೆ ನೀರುಪಾಲಾಗಿದೆ. ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳದ ದಂಡೆಯ ಹತ್ತಿರ ಇರುವ ಜಮೀನಿನಲ್ಲಿರುವ ದಾಳಿಂಬೆ, ಹತ್ತಿ, ತೊಗರಿ, ಸಜ್ಜೆ ಇತರ ಬೆಳೆಗಳು ಜಲಾವೃತವಾಗಿವೆ.

ಎಲ್ಲೆಲ್ಲಿ ಹಾನಿ?: ಕುಷ್ಟಗಿ ತಾಲೂಕಿನ ಟಕ್ಕಳಕಿ ಗ್ರಾಮದ ಶರಣಮ್ಮ ಭೀಮನಗೌಡ್ರ ಅವರ ಮೂರು ಎಕರೆ ದಾಳಿಂಬೆ, ಒಂದು ಎಕರೆ ಹತ್ತಿ, ಸುರೇಶ ಭೀಮನಗೌಡ್ರ ಅವರ ಮೂರು ಎಕರೆ ದಾಳಿಂಬೆ ಹಾಗೂ ಒಂದು ಎಕರೆ ಹತ್ತಿ, ಮಾಟೂರು ಗ್ರಾಮದ ಮಹಾಂತೇಶ ಮೇಟಿ ಅವರ ಮೂರು ಎಕರೆಯ ಹತ್ತಿ, ಬೆಳೆ ಹಾಗೂ ಬಾವಿಯಲ್ಲಿನ ಮೂರು ಪಂಪ್‌ಸೆಟ್‌ಗಳು ಹಾಳಾಗಿವೆ. ಮಣ್ಣಕಲಕೇರಿ ಗ್ರಾಮದ ಈರಪ್ಪ ಬೆಳಗಲ್, ಮಾಳಮ್ಮ ಬೆಳಗಲ್ ಅವರಿಗೆ ಸೇರಿದ 5 ಎಕರೆಯ ಜಮೀನಿನಲ್ಲಿ ಬೆಳೆಯಲಾದ ಹತ್ತಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ವಣಗೇರಿ, ಬ್ಯಾಲಿಹಾಳ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿನ ಜಮೀನುಗಳಲ್ಲಿ ನೀರು ಹೊಕ್ಕು ನೂರಾರು ಎಕರೆಯ ಬೆಳೆಗಳು ಹಾಳಾಗಿದೆ.

ಹತ್ತಕ್ಕೂ ಅಧಿಕ ಮನೆಗಳಿಗೆ ಹಾನಿ: ಕುಷ್ಟಗಿ ತಾಲೂಕಿನ ಹಿರೆಗೊಣ್ಣಾಗರ, ಯಲಬುರ್ತಿ, ಹುಲಗೇರಿ ಗ್ರಾಮಗಳಲ್ಲಿ ಹತ್ತಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕಿನ ಮುದುಟಗಿ ಸೀಮಾದ ಜಮೀನಿನಲ್ಲಿ ಕಟ್ಟಲಾಗಿದ್ದ ಹುಲಿಗೆಮ್ಮ ಯಮನಪ್ಪ ಅವರಿಗೆ ಸೇರಿರುವ ಆಕಳೊಂದು ಸಿಡಿಲಿಗೆ ಮೃತಪಟ್ಟಿದೆ.