ಹಾಸನದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಹಲವು ಅವಾಂತರಗಳು ನಡೆದಿದೆ. ಯೆಡೆಕುಮರಿ ಬಳಿ ಗುಡ್ಡ ಕುಸಿದು ರೈಲ್ವೇ ಹಳಿ ಮೇಲೆ ಬಿದ್ದಿದೆ. ಇದರಿಂದ ಬೆಂಗಳೂರು-ಮಂಗಳೂರು ರೈಲ್ವೇ ಸಂಚಾರದಲ್ಲಿ ವ್ಯತ್ಯಯವಾಗಿದೆ.

ಹಾಸನ (ಆ.16) ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇತ್ತ ಹಾಸನ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಪರಿಣಾಮ ಹಲವು ಪ್ರದೇಶಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಭಾರಿ ಮಳೆಯಿಂದೆ ಯೆಡೆಕುಮರಿ ಬಳಿ ಗುಡ್ಡ ಕುಸಿತವಾಗಿದೆ. ಗುಡ್ಡ ಕುಸಿತಗೊಂಡು ಬೆಂಗಳೂರು ಮಂಗಳೂರು ಸಂಪರ್ಕಿಸುವ ರೈಲ್ವೇ ಹಳಿ ಮೇಲೆ ಬಿದ್ದಿದೆ. ಇದರ ಪರಿಣಾಮ ಈ ಮಾರ್ಗದಲ್ಲಿ ಸಂಚರಿಸುವ ರೈಲ್ವೇ ಸೇವೆಯಲ್ಲಿ ವ್ಯತ್ಯಯವಾಗಿದೆ. ಒಂದೆಡೆ ಪ್ರಯಾಣಿಕರು ಪರದಾಡುವಂತಾಗಿದ್ದರೆ, ಇತ್ತ ಹಳಿ ಮೇಲೆ ಕುಸಿದಿರುವ ಮಣ್ಣ ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ.

ರೈಲ್ವೇ ಹಳಿ 68/800ರಲ್ಲಿ ಕುಸಿದ ಗುಡ್ಡ

ಹಾಸನದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಬೆಂಗಳೂರು-ಮಂಗಳೂರು ಸಂಪರ್ಕಿಸುವ ರೈಲು ಹಳಿಗಳ ಮೇಲೆ ನೀರು ಹರಿಯುತ್ತಿದೆ. ಭಾರಿ ಮಳೆಯಿಂದ ಸಣ್ಣ ಸಣ್ಣ ಗುಡ್ಡುಗಳು ಕುಸಿದಿದೆ. ಇದರ ನಡುವೆ ಯೆಡೆಕುಮರಿ ಗುಡ್ಡ ಕುಸಿದು ರೈಲ್ವೇ ಹಳಿ ಮೇಲೆ ಬಿದ್ದಿದೆ. ಹೀಗಾಗಿ ರೈಲು ಸಂಚಾರ ವ್ಯತ್ಯಯಗೊಂಡಿದೆ. ಯಡೆಕುಮರಿ ರೈಲ್ವೇ ಹಳಿ 68/800 ರ ಬಳಿ ಕುಸಿತವಾಗಿರುವ ಪರಿಣಾಮ ಕಾರ್ಯಾಚರಣೆ ನಡೆಯುತ್ತಿದೆ.

ರೈಲು ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು-ಮಂಗಳೂರು ನಡುವಿನ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಿದೆ. ಪ್ರಮುಖವಾಗಿ ರೈಲು ಸಂಖ್ಯೆ 07378 ಮಂಗಳೂರು ವಿಜಯವಾಡ ಎಕ್ಸ್‌ಪ್ರೆಸ್ ರೈಲನ್ನು ಬಂಟ್ವಾಳದಲ್ಲಿ ತಡೆಹಿಡಿಯಲಾಗಿದೆ. ಮಣ್ಣು ಸರಿಸಿದ ಬಳಿಕವಷ್ಟೇ ಸೇವೆ ಪುನರ್ ಆರಂಭಗೊಳ್ಳಲಿದೆ. ಕಳೆದ ಕೆಲ ಗಂಟೆಗಳಿಂದ ರೈಲು ಸಂಚಾರ ಸ್ಥಗಿತಗೊಂಡಿದೆ.

ಇನ್ನು ಮುರುಡೇಶ್ವರ ಬೆಂಗಳೂರು ಎಕ್ಸ್‌ಪ್ರೆಸ್ ರೈಲು 16586 ಸೇವೆಯಲ್ಲಿ ವ್ಯತ್ಯಯವಾಗಿದೆ. ಈ ರೈಲು ಮಂಗಳೂರು ರೈಲು ನಿಲ್ದಾಣಕ್ಕೆ ಸಂಜೆ 6.11ಕ್ಕೆ ಆಗಮಿಸಿದೆ. ಆದರೆ ರೈಲು ಹಳಿ ಮೇಲಿನ ಮಣ್ಣು ತೆರವು ಕಾರ್ಯಾಚರಣೆಯಿಂದ ಮಂಗಳೂರು ನಿಲ್ದಾಣದಲ್ಲೇ ನಿಲ್ಲಿಸಲಾಗಿದೆ.

ಕಣ್ಣೂರು - SMVT ಬೆಂಗಳೂರು ಎಕ್ಸ್‌ಪ್ರೆಸ್ ರೈಲು No. 16512, ಕಾರವಾರ ಕೆಎಸ್ಆರ್ ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ರೈಲು No. 16596, ಕೆಎಸ್ಆರ್ ಬೆಗಳೂರು ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ರೈಲು No. 16595, SMVT ಬೆಂಗಳೂರು ಕಣ್ಣೂರು ಎಕ್ಸ್‌ಪ್ರೆಸ್ ರೈಲು No. 16511 ಸೇವೆಯಲ್ಲೂ ವ್ಯತ್ಯಯವಾಗುವ ಸಾಧ್ಯತೆ ಇದೆ.

ತುರ್ತು ಅಗತ್ಯವಿದ್ದಲ್ಲಿ ರೈಲು ಇಲಾಖೆ ಸಂಪರ್ಕಿಸಲು ಸೂಚನೆ

ಮಂಗಳೂರು-ಬೆಂಗಳೂರು ರೈಲು ಸಂಚಾರ ಮಾರ್ಗದಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು ರೈಲು ವ್ಯತ್ಯಯದಿಂದ ಪರದಾಡುವಂತಾಗಿದೆ. ಇದರ ನಡುವೆ ದಕ್ಷಿಣ ರೈಲ್ವೇ ವಿಭಾಗ ಮಹತ್ವದ ಸೂಚನೆ ನೀಡಿದೆ. ಯಾವುದೇ ಸಂದರ್ಭದಲ್ಲಿ ರೈಲು ಪ್ರಯಾಣಿಕರಿಗೆ ತುರ್ತು ಅಗತ್ಯವಿದ್ದಲ್ಲಿ ಸಂಪರ್ಕಿಸಲು ಸೂಚಿಸಿದೆ.