ಜಮೀನಿನಲ್ಲಿರುವ ನಿವೇಶನಗಳನ್ನು ಗ್ರಾಹಕರು ಖರೀದಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ವಹಿವಾಟುಗಳನ್ನುನಿಯಂತ್ರಿಸಲು ಸಮಗ್ರ ಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಬೆಂಗಳೂರು (ಅ.10): ಮಂಜೂರಾದ ನಕ್ಷೆಗಳ ಭಾಗವಾಗಿರದ ಪರಿವರ್ತಿತ ಜಮೀನಿನಲ್ಲಿರುವ ನಿವೇಶನಗಳನ್ನು ಗ್ರಾಹಕರು ಖರೀದಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ವಹಿವಾಟುಗಳನ್ನುನಿಯಂತ್ರಿಸಲು ಸಮಗ್ರ ಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ತಮ್ಮ ಆಸ್ತಿಗೆ ಸಂಬಂಧಿಸಿ ಇ-ಖಾತಾ ನೀಡಲು ಹೊಳಲ್ಕೆರೆ ಟೌನ್ ಪಂಚಾಯಿತಿಗೆ ನಿರ್ದೇಶಿಸಬೇಕು ಎಂದು ಕೋರಿ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ನಂದಿಹಳ್ಳಿಯ ಯು.ಮಮತಾ ಸಲ್ಲಿಸಿದ್ದ ತಕರಾರು ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಶಂಕರ ಎಸ್.ಮಗದುಂ ಅವರ ಪೀಠ ಈ ಸೂಚನೆ ನೀಡಿದೆ. ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯದ ಬಡಾವಣೆಗಳ ನಿವೇಶನಗಳಿಗೆ ಸಂಬಂಧಿಸಿ ಇ-ಖಾತಾ ನೀಡುವುದನ್ನು ಸರ್ಕಾರದ ಮಾರ್ಗಸೂಚಿಗಳು ಮತ್ತು ನಿಯಮಗಳು ಸ್ಪಷ್ಟವಾಗಿ ನಿಷೇಧಿಸುತ್ತದೆ ಎಂದು ಪೀಠ ಹೇಳಿದೆ.
ನಾಗರಿಕ ಮೂಲಸೌಕರ್ಯ ಮತ್ತು ಪಟ್ಟಣಗಳ ಯೋಜಿತ ಬೆಳವಣಿಗೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು, ನಗರ ಪ್ರದೇಶಗಳ ಕ್ರಮಬದ್ಧ ಅಭಿವೃದ್ಧಿ ಮಾಡಲು, ನಾಗರಿಕ ಸೌಲಭ್ಯಗಳನ್ನು ಸರಿಯಾಗಿ ಒದಗಿಸಲು ಮತ್ತು ಅಕ್ರಮ ಬಡಾವಣೆಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುವುದನ್ನು ತಡೆಯಲು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಸೆಕ್ಷ ನ್ 17(2ಬಿ) ಅನ್ನು ಸರ್ಕಾರ ರೂಪಿಸಿದೆ. ಸಾರ್ವಜನಿಕ ಮೂಲಸೌಕರ್ಯಕ್ಕೆ ಹೊರೆಯಾಗುವ ರೀತಿ ಅಕ್ರಮ ಬಡಾವಣೆಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ.
ಸಮಗ್ರ ಯೋಜನೆ
ಮಂಜೂರಾದ ನಕ್ಷೆಗಳ ಭಾಗವಲ್ಲದ ಪರಿವರ್ತಿತ ಜಮೀನಿನಲ್ಲಿನ ನಿವೇಶನಗಳನ್ನು ಗ್ರಾಹಕರು ಖರೀದಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಯಾವುದೇ ಮಂಜೂರಾದ ಬಡಾವಣೆಗಳ ಭಾಗವಾಗಿರದ ಪರಿವರ್ತನೆಗೊಂಡ ಜಮೀನಿನಲ್ಲಿ, ಭೂಮಿ/ನಿವೇಶನ ಖರೀದಿಗೆ ಸಂಬಂಧಿಸಿದ ವಹಿವಾಟು ನಿಯಂತ್ರಿಸಲು ಸಮಗ್ರ ಯೋಜನೆ ರೂಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಅಂತಿಮವಾಗಿ ಅರ್ಜಿದಾರರು ಖರೀದಿಸಿದ ನಿವೇಶನವನ್ನು ಪರಿವರ್ತಿಸಿದ ಭೂಮಿಯಿಂದ ಬಡಾವಣೆಯಲ್ಲಿ ರಚಿಸಲಾಗಿದೆ. ಆ ಬಡಾವಣೆ ರಚನೆಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದಿಲ್ಲ. ಇದರಿಂದ ಅರ್ಜಿದಾರರ ನಿವೇಶನಕ್ಕೆ ಇ-ಖಾತ ನೀಡಬೇಕೆಂಬ ಮನವಿ ಪರಿಗಣಿಸಲಾಗದು ಎಂದು ತಿಳಿಸಿದ ಪೀಠ ಅರ್ಜಿ ವಜಾಗೊಳಿಸಿದೆ.
