ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿರುವ ಈ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಗೆ ರಸಗೊಬ್ಬರಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಿ ಎಂದು ಕೃಷಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಸೂಚಿಸಿದರು.

ದೇವನಹಳ್ಳಿ (ಆ.07): ಜಿಲ್ಲಾದ್ಯಂತ ಉತ್ತಮ ಮಳೆ ಆಗುತ್ತಿದ್ದು ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿರುವ ಈ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಗೆ ರಸಗೊಬ್ಬರಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಿ ಎಂದು ಕೃಷಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಸೂಚಿಸಿದರು. ತಾಪಂ ಸಭಾಂಗಣದಲ್ಲಿ ನಡೆದ ೩ನೇ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ವಾರ್ಷಿಕ 804 ಮಿ.ಮೀ. ಮಳೆ ಅಂದಾಜಿಸಲಾಗಿದ್ದು, ಪ್ರಸ್ತುತ 383 ಮಿ.ಮೀ ಮಳೆ ಆಗಿದೆ.

ಮಳೆಯಾಶ್ರಿತ ಬೆಳೆಗಳಾದ ರಾಗಿ, ಹುರುಳಿ, ತೊಗರಿ ಇತರ ಬೆಳೆಗಳು 17,720 ಹೆಕ್ಟೇರಷ್ಷ್ಟು ಅಂದರೆ ಶೇಕಡ 90ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. ಯೂರಿಯಾ, ಡಿಎಪಿ ಗೊಬ್ಬರಕ್ಕೆ ಹೆಚ್ಚು ಬೇಡಿಕೆ ಇದೆ. ರಸಗೊಬ್ಬರ ದಾಸ್ತಾನು ಅಂಗಡಿ ಮಳಿಗೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಮಾಹೆಯ ಅಂತ್ಯದಿಂದ ಆಗಸ್ಟ್ ಮಾಹೆಯಲ್ಲಿ ಬಿತ್ತನೆ ಕಾರ್ಯಗಳು ಗರಿಗೆದರುತ್ತವೆ. ರೈತರಿಗೆ ಸಮರ್ಪಕ ಬಿತ್ತನೆ ಬೀಜ, ರಸಗೊಬ್ಬರ ಸಿಗಬೇಕು. ಯಾವ ರೈತನು ಕೂಡ ಅಂಗಡಿ, ಮಳಿಗೆಗಳ ಮುಂದೆ ಸರದಿಯಲ್ಲಿ ನಿಲ್ಲಬಾರದು. ರೈತರಿಗೆ ರಸಗೊಬ್ಬರ ಸಿಗಲಿಲ್ಲ ಎಂದು ದೂರು ಬರಬಾರದು ಎಂದು ಅಧಿಕಾರಿಗಳಿಗೆ ಖಡಕ್ ಸೂಚಿಸಿದರು.

ಕೃಷಿ, ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಲು ರೈತರಿಗೆ ಅರಿವು ಮೂಡಿಸಿ, ಪ್ರಕೃತಿ ವಿಕೋಪಗಳಿಂದ ಸಂಭವಿಸುವ ಬೆಳೆ ನಷ್ಟಕ್ಕೆ ವಿಮೆ ಪರಿಹಾರ ಸಿಗಲಿದೆ. ವಿಮೆ ಪರಿಹಾರದಿಂದ ರೈತರಿಗೆ ಅಲ್ಪ ಪ್ರಮಾಣದ ಆರ್ಥಿಕ ಹೊರೆ ತಗ್ಗಲಿದೆ. ಹಾಗೆಯೇ ತಮ್ಮ ಇಲಾಖೆಗಳಲ್ಲಿ ಸಿಗುವ ಸರ್ಕಾರದ ಯೋಜನೆಗಳ ಬಗ್ಗೆ ಪ್ರತಿ ರೈತರಿಗೆ ಕರಪತ್ರಗಳನ್ನು ಹಂಚಿ ಪ್ರಚಾರ ನೀಡಿ ಎಂದು ಹೇಳಿದರು.ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ಬಾಬು ಜಗಜೀವನರಾಂ, ಡಾ.ಬಿ.ಆರ್ ಅಂಬೇಡ್ಕರ್ ಭವನಗಳು ಕೆಲವುಗಳ ಕಾಮಗಾರಿ ಪೂರ್ಣಗೊಂಡಿದ್ದು, ಕೆಲವು ಭವನಗಳಲ್ಲಿ ಕಾಮಗಾರಿಗಳು ಅಪೂರ್ಣವಾಗಿ ಉಳಿದಿದೆ. ಅನುದಾನ ಬಿಡುಗಡೆ ಆಗಿರುವ ಭವನಗಳನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಿ ಎಂದು ಹೇಳಿದರು.

ವಿಜಯಪುರ ಹೋಬಳಿಯ ಧರ್ಮಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಭೂ ಒತ್ತುವರಿಯಿಂದ ರೈತರಿಗೆ ಬಹಳಷ್ಟು ತೊಂದರೆ ಆಗಿದೆ. ಆ ಭಾಗದಲ್ಲಿ ರೈತರು ನೂರಾರು ವರ್ಷಗಳಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಸಾಗುವಳಿ ಚೀಟಿ ಕೂಡ ವಿತರಿಸಲಾಗಿದೆ. ಆದರೆ ಏಕಾಏಕಿ ಅರಣ್ಯ ಇಲಾಖೆ ಭೂಮಿ ಎಂದು ಗಿಡ ನೆಡಲು ಬಂದಿದ್ದು ತಕ್ಷಣವೇ ಇದನ್ನು ನಿಲ್ಲಿಸಲಾಗಿದೆ. ತಹಸೀಲ್ದಾರ್, ಸರ್ವೇ ಇಲಾಖೆ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆಯವರು ಧರ್ಮಪುರಕ್ಕೆ ಜಂಟಿ ಭೇಟಿ ನೀಡಿ ರೈತರ ಜಮೀನುಗಳಿಗೆ ಮೊದಲು ಹದ್ದುಬಸ್ತು ಮಾಡಿ ಎಂದರು.

ಪೋಡಿ ಮುಕ್ತ ತಾಲೂಕು, ನಿವೇಶನ ಹಂಚಿಕೆ, ವಸತಿ ಹಂಚಿಕೆ, ಗ್ರಾಮಗಳಲ್ಲಿ ಸ್ಮಶಾನ ಹಂಚಿಕೆಗೆ ಅಗತ್ಯ ಕ್ರಮ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಈ ಬಾರಿ ಉತ್ತಮ ಫಲಿತಾಂಶ ಬರಲು ಕ್ರಮ ವಹಿಸಬೇಕು. ವಿದ್ಯಾರ್ಥಿ ನಿಲಯಗಳಲ್ಲಿ ಗುಣಮಟ್ಟದ ಮೂಲ ಸೌಕರ್ಯಗಳೊಂದಿಗೆ ಗುಣಮಟ್ಟದ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೊತ್ಸಾಹ ನೀಡಿ ಎಂದರು. ಸಭೆಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಟನ ಸಮಿತಿಯ ತಾಲೂಕು ಅಧ್ಯಕ್ಷ ಜಗನ್ನಾಥ, ತಹಸೀಲ್ದಾರ್ ಅನಿಲ್ ಎಂ, ಇಒ ಶ್ರೀನಾಥ್ ಗೌಡ, ಸಚಿವರ ಆಪ್ತ ಕಾರ್ಯದರ್ಶಿ ನಟರಾಜ್, ತಾಲೂಕು ಮಟ್ಟದ ಅಧಿಕಾರಿಗಳು, ಕೆಡಿಪಿ ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.