ಆನ್‌ಲೈನ್‌ ಬೆಟ್ಟಿಂಗ್‌ ಹಾಗೂ ಮನಿ ಗೇಮಿಂಗ್‌ ಹಗರಣದಲ್ಲಿ ಬಂಧಿತರಾಗಿರುವ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರಿಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) 3ನೇ ಬಾರಿಗೆ ದಾಳಿ ಮಾಡಿದೆ.

ಚಳ್ಳಕೆರೆ : ಆನ್‌ಲೈನ್‌ ಬೆಟ್ಟಿಂಗ್‌ ಹಾಗೂ ಮನಿ ಗೇಮಿಂಗ್‌ ಹಗರಣದಲ್ಇ ಬಂಧಿತರಾಗಿರುವ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರಿಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) 3ನೇ ಬಾರಿಗೆ ದಾಳಿ ಮಾಡಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರ ಬ್ಯಾಂಕ್‌ಗಳಿಗೆ ಇ.ಡಿ. ಅಧಿಕಾರಿಗಳ ತಂಡ ಶನಿವಾರ ಬೆಳಗ್ಗೆ ಭೇಟಿ, ಪಪ್ಪಿಗೆ ಅವರಿಗೆ ಸೇರಿದ ಲಾಕರ್‌ನಲ್ಲಿದ್ದವು ಎನ್ನಲಾದ ಅಮೂಲ್ಯ ವಸ್ತುಗಳಿದ್ದ 2 ಬಟ್ಟೆ ಚೀಲಗಳನ್ನು ತೆಗೆದುಕೊಂಡು ಹೋಗಿದೆ. ಇದರಲ್ಲಿ ಚಿನ್ನ ಇತ್ತೋ ಅಥವಾ ದಾಖಲೆಗಳಿದ್ದವೋ ಎನ್ನುವುದು ಇನ್ನಷ್ಟೇ ಖಚಿತವಾಗಬೇಕಿದೆ. ಆದಾಗ್ಯೂ ಲಾಕರ್‌ಗಳಲ್ಲಿ ಚಿನ್ನ ಸಿಕ್ಕಿರುವುದನ್ನು ಬಲ್ಲ ಮೂಲಗಳು ಖಚಿತಪಡಿಸಿವೆ.

ಪಪ್ಪಿ ಕಳೆದ 15 ದಿನದಿಂದ ಬೆಟ್ಟಿಂಗ್‌ ಕೇಸಿನಲ್ಲಿ ಇ.ಡಿ. ವಶದಲ್ಲಿದ್ದಾರೆ. ಪ್ರಕರಣದ ತನಿಖೆಯ ಭಾಗವಾಗಿ ಶನಿವಾರ ಬೆಳಗ್ಗೆ ಆರಂಭವಾದ ಪರಿಶೀಲನಾ ಕಾರ್ಯ ಸಂಜೆಗೆ ಮುಕ್ತಾಯವಾಗಿದ್ದು, ಕೋಟಕ್ ಮಹೇಂದ್ರ ಬ್ಯಾಂಕ್, ಫೆಡರಲ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಹಾಗೂ ವೀರಶೈವ ಸೌಹಾರ್ದ ಪತ್ತಿನ ಸಹಕಾರಿ ಸಂಘಕ್ಕೆ ಇ.ಡಿ. ಅಧಿಕಾರಿಗಳು ಭೇಟಿ ನೀಡಿ ಪಪ್ಪಿಗೆ ಸೇರಿದ ಲಾಕರ್‌ಗಳನ್ನು ಬ್ಯಾಂಕ್‌ನ ವ್ಯವಸ್ಥಾಪಕರ ಸಮ್ಮುಖದಲ್ಲಿ ಪರಿಶೀಲಿಸಿದರು.

ಎಲ್ಲಾ ಬ್ಯಾಂಕ್‌ಗಳ ಲಾಕರ್‌ಗಳಲ್ಲಿ ಪಪ್ಪಿಗೆ ಸೇರಿದ ಅಪಾರವಾದ ಚಿನ್ನಾಭರಣ ಚೀಲಗಳು ಪತ್ತೆಯಾಗಿವೆ ಎನ್ನಲಾಗಿದೆ. ಒಟ್ಟು 4 ಬ್ಯಾಂಕ್‌ಗಳಿಂದ ಇ.ಡಿ. ಅಧಿಕಾರಿಗಳು ಲಾಕರ್‌ನಲ್ಲಿ ದೊರೆತ ಚಿನ್ನದ ಆಭರಣಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ, ಎಷ್ಟು ಪ್ರಮಾಣ ಅದರ ಮೌಲ್ಯದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಈಗಾಗಲೇ ಬೆಂಗಳೂರಿನ ಜನಪ್ರತಿನಿಧಿ ನ್ಯಾಯಾಲಯ ಎರಡು ಬಾರಿ ಇ.ಡಿ. ವಶಕ್ಕೆ ನೀಡಿದೆ. ಸೆ.೮ರಂದು ಮತ್ತೆ ಪಪ್ಪಿಯನ್ನು ನ್ಯಾಯಾಲಯಕ್ಕೆ ಕೋರ್ಟಿಗೆ ಹಾಜರು ಪಡಿಸಬೇಕಾಗಿದೆ.

ಇದಕ್ಕೂ ಮುನ್ನ ಮಂಗಳವಾರ ಸೆ.೨ರಂದು ಪಪ್ಪಿಗೆ ಸೇರಿದ ಒಟ್ಟು ೬ ಕಾರುಗಳನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಇ.ಡಿ. ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದರು.

ಮನೆ ಮಂದೆ ಮೌನ:

ನಗರದಲ್ಲೆಲ್ಲಾ ಇ.ಡಿ. ಅಧಿಕಾರಿಗಳ ಪರಿಶೀಲನೆಯ ಬಗ್ಗೆ ನಿರಂತರ ಚರ್ಚೆಗಳು ನಡೆಯುತ್ತಿವೆ, ಕೆ.ಸಿ.ವೀರೇಂದ್ರ (ಪಪ್ಪಿ)ಯ ಮೂವರು ಸಹೋದರರು ಸಹ ಚಳ್ಳಕೆರೆ ನಗರದ ಹಳೇಟೌನ್‌ನಲ್ಲಿ ವಾಸವಿದ್ದು, ಮನೆಯ ಮುಂಭಾಗದಲ್ಲಿ ಯಾವುದೇ ಚಟುವಟಿಕೆಗಳಿಲ್ಲ,

ಪಪ್ಪಿಗೆ ಇ.ಡಿ. ತನಿಖಾ ಬಿಸಿ

- ಪಪ್ಪಿ ಕಳೆದ 15 ದಿನದಿಂದ ಮನಿ ಗೇಮಿಂಗ್‌ ಅಕ್ರಮ ಬೆಟ್ಟಿಂಗ್‌ ಕೇಸಿನಲ್ಲಿ ಇ.ಡಿ. ವಶದಲ್ಲಿ

- ಇದರ ನಡುವೆ, ಮಂಗಳವಾರ ಪಪ್ಪಿ ಆಸ್ತಿಪಾಸ್ತಿ ಮೇಲೆ ದಾಳಿ. 55 ಕೋಟಿ ರು. ಆಸ್ತಿ ಜಪ್ತಿ

- ಅಂದೇ ಆನ್‌ಲೈನ್‌ ಬೆಟ್ಟಿಂಗಿಂದ ಪಪ್ಪಿ ₹2000 ಕೋಟಿ ಸಂಪಾದಿಸಿದ್ದರೆಂದು ಇ.ಡಿ. ಹೇಳಿತ್ತು

- ನಿನ್ನೆ ಪಪ್ಪಿ ಖಾತೆ ಇರುವ ಚಳ್ಳಕೆರೆಯ 4 ಬ್ಯಾಂಕ್‌ಗಳಲ್ಲಿ ತನಿಖಾಧಿಕಾರಿಗಳ ಪರಿಶೀಲನೆ

- ಲಾಕರ್‌ಗಳಲ್ಲಿದ್ದ ಚಿನ್ನ ಸೇರಿ ಹಲವು ಅಮೂಲ್ಯ ವಸ್ತು ವಶ ಶಂಕೆ. ಮೌಲ್ಯದ ಮಾಹಿತಿ ಇಲ್ಲ