ಮುಸುಕುಧಾರಿ ಚಿನ್ನಯ್ಯನ ಮಾತಿನಂತೆ ಧರ್ಮಸ್ಥಳ ಗ್ರಾಮದಲ್ಲಿ ಶವಗಳ ಮೂಳೆಗಳಿಗಾಗಿ ವಿಶೇಷ ತನಿಖಾ ದಳ (ಎಸ್‌ಐಟಿ) ಉತ್ಖನನ ನಡೆಸುವ ವೇಳೆ ಯೂಟ್ಯೂಬ್‌ರ್‌ಗಳು ಧರ್ಮಸ್ಥಳ ಕ್ಷೇತ್ರವನ್ನು ಗುರಿಯಾಗಿಸಿ ತೇಜೋವಧೆ ಮಾಡಿದ್ದರು.

ಮಂಗಳೂರು (ಸೆ.03): ‘ಧರ್ಮಸ್ಥಳ ಗ್ರಾಮದಲ್ಲಿ ಅತ್ಯಾ8ರಕ್ಕೆ ಒಳಗಾಗಿ ಕೊಲೆಗೀಡಾದ ನೂರಾರು ಶವ ಹೂಳಲಾಗಿದೆ’ ಎಂದು ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಆರೋಪ ಮಾಡಿ ಸಂಚಲನ ಸೃಷ್ಟಿಸಿದ್ದ ‘ಬುರುಡೆ ಪ್ರಕರಣ’ಕ್ಕೆ ಈಗ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕೃತವಾಗಿ ಪ್ರವೇಶಿಸಿದೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲು ವಿದೇಶದಿಂದ ಹಣ ಸಂದಾಯವಾಗಿತ್ತು ಎನ್ನುವ ಆರೋಪದ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ಆರಂಭಿಸಿದೆ. ಯುಟ್ಯೂಬರ್‌ಗಳು, ಹೋರಾಟಗಾರರು ಮತ್ತು ಸರ್ಕಾರೇತರ ಸಂಸ್ಥೆಗಳ (ಎನ್‌ಜಿಒ) ಹಣದ ಮೂಲ ಪತ್ತೆಗೆ ಮುಂದಾಗಿದೆ. ಈ ಕಾರ್ಯದಲ್ಲಿ ಮೊದಲ ಹಂತವಾಗಿ ಬ್ಯಾಂಕ್‌ಗಳಿಂದ ಯುಟ್ಯೂಬರ್ಸ್‌ಗಳು, ಹೋರಾಟಗಾರರು ಮತ್ತು ಎರಡು ಎನ್‌ಜಿಒಗಳ ಹಣದ ವ್ಯವಹಾರದ ವಿವರ ಬಯಸಿ ಕೆಲವು ಪ್ರಮುಖ ಬ್ಯಾಂಕ್‌ಗಳಿಗೆ ಇ.ಡಿ. ಪತ್ರ ಬರೆದಿದೆ.

ಇ.ಡಿ. ತನಿಖೆ ಏಕೆ?: ಮುಸುಕುಧಾರಿ ಚಿನ್ನಯ್ಯನ ಮಾತಿನಂತೆ ಧರ್ಮಸ್ಥಳ ಗ್ರಾಮದಲ್ಲಿ ಶವಗಳ ಮೂಳೆಗಳಿಗಾಗಿ ವಿಶೇಷ ತನಿಖಾ ದಳ (ಎಸ್‌ಐಟಿ) ಉತ್ಖನನ ನಡೆಸುವ ವೇಳೆ ಯೂಟ್ಯೂಬ್‌ರ್‌ಗಳು ಧರ್ಮಸ್ಥಳ ಕ್ಷೇತ್ರವನ್ನು ಗುರಿಯಾಗಿಸಿ ತೇಜೋವಧೆ ಮಾಡಿದ್ದರು. ಎಂಬ ಆರೋಪ ಕೇಳಿಬಂದಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ವಿದೇಶಿ ಫಂಡಿಂಗ್‌ ಸಾಧ್ಯತೆ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಸುರೇಶ್‌ ಗೌಡ ಅವರು ಕೇಂದ್ರ ಸರ್ಕಾರಕ್ಕೆ ತನಿಖೆಗಾಗಿ ಪತ್ರ ಬರೆದಿದ್ದರು. ಈ ಪತ್ರಗಳನ್ನು ಕೇಂದ್ರವು ಇ.ಡಿ.ಗೆ ವರ್ಗಾಯಿಸಿತ್ತು.

ಈ ನಡುವೆ ಬಿಜೆಪಿ, ಜೆಡಿಎಸ್‌ ಮತ್ತಿತರ ಮುಖಂಡರು ಕೂಡ ಇ.ಡಿ. ಹಾಗೂ ಎನ್ಐಎ ತನಿಖೆಗೆ ಆಗ್ರಹಿಸಿದ್ದರು. ಈಗ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಪ್ರಾಥಮಿಕ ತನಿಖೆಗೆ (ಪ್ರಿಲಿಮಿನರಿ ಇನ್‌ವೆಸ್ಟಿಗೇಷನ್) ಇಳಿದಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಈ ಬಗ್ಗೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿಯಲ್ಲಿ ಪ್ರಾಥಮಿಕ ತನಿಖೆ ಆರಂಭಿಸಲಾಗಿದೆ ಎಂದು ಗೊತ್ತಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಸತ್ವ ಕಂಡು ಬಂದರೆ ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಳ್ಳುವುದು ಇ.ಡಿ.ಯ ನಿಯಮವಾಗಿದೆ.

2 ಎನ್‌ಜಿಒಗಳ ತನಿಖೆ: ಎರಡು ಎನ್‌ಜಿಒ ಸಂಸ್ಥೆಗಳ ಬಗ್ಗೆ ಇ.ಡಿ. ತನಿಖೆ ನಡೆಸಲಿದೆ. ಧರ್ಮಸ್ಥಳ ವಿರುದ್ಧ ಷಡ್ಯಂತರ ಮತ್ತು ಅಪಪ್ರಚಾರ ನಡೆಸಲು ವಿದೇಶದಿಂದ ಅಕ್ರಮವಾಗಿ ಹಣಕಾಸು ನೆರವು ಪಡೆದಿದ್ದಾರೆ ಎಂಬ ದೂರುದಾರರ ಆರೋಪಕ್ಕೆ ಸಂಬಂಧಿಸಿ ತನಿಖೆ ನಡೆಯಲಿದೆ ಎಂದು ಮೂಲಗಳು ಹೇಳಿವೆ. ಎನ್‌ಜಿಒಗಳು ಮತ್ತು ಹೋರಾಟಕ್ಕೆ ಸಂಬಂಧಿಸಿದವರ ಕಳೆದ ಐದು ವರ್ಷಗಳ ಬ್ಯಾಂಕ್‌ ಖಾತೆಗಳ ವಿವರ, ಹಣಕಾಸು ವಹಿವಾಟು, ಪಾನ್‌ ಕಾರ್ಡ್‌ ಮಾಹಿತಿ ಸೇರಿದಂತೆ ಎಲ್ಲ ವಿವರ ನೀಡುವಂತೆ ಬ್ಯಾಂಕ್‌ಗಳಿಗೆ ಇ.ಡಿ. ಅಧಿಕಾರಿಗಳು ಪತ್ರ ಬರೆದಿದ್ದಾರೆ. ಈಗಾಗಲೇ ಧರ್ಮಸ್ಥಳ ಬಗ್ಗೆ ಯೂಟ್ಯೂಬರ್‌ಗಳು ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಿ ವಿವಿಧ ಪೊಲೀಸ್‌ ಠಾಣೆಗಳಲ್ಲೂ ಕೇಸು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಯೂಟ್ಯೂಬರ್‌ ಸಮೀರ್‌ ಮೂರು ಬಾರಿ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಹಾಜರಾಗಿದ್ದರು.

ಇ,ಡಿ. ತನಿಖೆ ಏಕೆ?
- ಧರ್ಮಸ್ಥಳ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಶವಗಳ ಮೂಳೆಗಳಿಗೆ ಉತ್ಖನನ ನಡೆದಿತ್ತು

- ಆ ವೇಳೆ ಯೂಟ್ಯೂಬ್‌ನಲ್ಲಿ ವ್ಯಾಪಕ ಸುದ್ದಿಗಳು ಧರ್ಮಸ್ಥಳ ಕ್ಷೇತ್ರದ ವಿರುದ್ಧ ಹರಿದಾಡಿದ್ದವು

- ಈ ಅಪಪ್ರಚಾರಕ್ಕೆ ವಿದೇಶಗಳಿಂದ ಫಂಡ್‌ ಹರಿದುಬಂದಿದೆ ಎಂದು ಬಿಜೆಪಿ, ಭಕ್ತರ ಆಕ್ರೋಶ

- ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇರಿ ಕೆಲವರಿಂದ ಈ ಬಗ್ಗೆ ಕೇಂದ್ರಕ್ಕೆ ದೂರು

- ಈ ದೂರುಗಳನ್ನು ಪರಿಶೀಲನೆಗಾಗಿ ಇ.ಡಿ.ಗೆ ವರ್ಗಾಯಿಸಿದ್ದ ಕೇಂದ್ರ ಗೃಹ ಸಚಿವಾಲಯ

- ಇದನ್ನು ಆಧರಿಸಿ ಇ.ಡಿ.ಯಿಂದ ಪ್ರಾಥಮಿಕ ತನಿಖೆ (ಪ್ರಿಲಿಮಿನರಿ ಇನ್‌ಕ್ವೈರಿ) ಆರಂಭ

- ಯೂಟ್ಯೂಬರ್‌ಗಳು, ಹೋರಾಟಗಾರರ ಖಾತೆಗಳ ತಲಾಶೆ ಆರಂಭಿಸಿದ ತನಿಖಾ ಸಂಸ್ಥೆ

- ಅದಕ್ಕೆಂದೆ 5 ವರ್ಷಗಳ ಬ್ಯಾಂಕ್‌ ವಹಿವಾಟುಗಳ ವಿವರ ಕೇಳಿ ದ.ಕ. ಬ್ಯಾಂಕ್‌ಗಳಿಗೆ ಪತ್ರ

- ಪ್ರಾಥಮಿಕ ತನಿಖೆಯಲ್ಲಿ ಸತ್ವ ಕಂಡುಬಂದರೆ ಮುಂದೆ ಅಧಿಕೃತವಾಗಿ ಪ್ರಕರಣ ದಾಖಲು