ದುಬೈನಲ್ಲಿ ಕನ್ನಡಿಗರಿಗಾಗಿ ಕನ್ನಡಿಗರೇ ಕಟ್ಟಿರುವ ಪರ್ವ ರಿಯಲ್ ಎಸ್ಟೇಟ್ ಕಂಪನಿ ಹಾಗೂ ಬೆಂಗಳೂರಿನ ಗ್ಲೋಬಲ್ ಕಾರ್ಪೋರೇಷನ್ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ.

ಬೆಂಗಳೂರು (ಸೆ.03): ದುಬೈನಲ್ಲಿ ಮನೆ ಖರೀದಿಸುವವರಿಗೆ 100% ಸಾಲ ಕೊಡಲು ಒಂದಾಗಿವೆ ಕನ್ನಡಿಗರ ಎರಡು ಕಂಪನಿಗಳು. ದುಬೈನಲ್ಲಿ ಕನ್ನಡಿಗರಿಗಾಗಿ ಕನ್ನಡಿಗರೇ ಕಟ್ಟಿರುವ ಪರ್ವ ರಿಯಲ್ ಎಸ್ಟೇಟ್ ಕಂಪನಿ ಹಾಗೂ ಬೆಂಗಳೂರಿನ ಗ್ಲೋಬಲ್ ಕಾರ್ಪೋರೇಷನ್ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ. ಪರ್ವ ರಿಯಲ್ ಎಸ್ಟೇಟ್ ಮೂಲಕ ದುಬೈನಲ್ಲಿ ಮನೆ ಖರೀದಿಸಲು ಮುಂದಾಗುವವರಿಗೆ ಸಾಲ ಸೌಲಭ್ಯವನ್ನು ಗೋಲ್ ಕಾರ್ಪೋರೇಷನ್ ಒದಗಿಸುವುದು ಈ ಒಪ್ಪಂದದ ಪ್ರಮುಖ ಅಂಶ. ದುಬೈನಲ್ಲಿ ಯಾವುದೇ ಆಸ್ತಿ ಖರೀದಿಗೆ ಶೇ.100 ರಷ್ಟು ಸಾಲ ಸೌಲಭ್ಯ ಒದಗಿಸುವುದು ಒಪ್ಪಂದದ ಎರಡನೇ ಪ್ರಮುಖಾಂಶ ಎಂದು ಪರ್ವ ರಿಯಲ್ ಎಸ್ಟೇಟ್ ಸಹ ಸಂಸ್ಥಾಪಕ ಶಶಿಧರ್ ನಾಗರಾಜಪ್ಪ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ನಿರ್ಮಾಣ ಹಂತದಲ್ಲಿರುವ ಫ್ಲಾಟ್, ವಿಲ್ಲಾಗಳ ಖರೀದಿಗೆ ಶೇ. 40 ರಷ್ಟು ಹಣವನ್ನು ಮುಂಗಡವಾಗಿ ಕಟ್ಟಬೇಕಾಗುತ್ತದೆ. ಈ ಸಂಪೂರ್ಣ ಮುಂಗಡ ಹಣವನ್ನು ಗೋಲ್ ಕಾರ್ಪೋರೇಷನ್ ಒದಗಿಸಲಿದೆ. ಅಲ್ಲದೇ, ನಿರ್ಮಾಣ ಪೂರ್ಣಗೊಂಡ ಮೇಲೆ ಉಳಿದ ಶೇ. 60 ರಷ್ಟು ಹಣವನ್ನೂ ಸಾಲದ ರೂಪದಲ್ಲಿ ಗೋಲ್ ಕಾರ್ಪೋರೇಷನ್ ಒದಗಿಸಲಿದೆ. ಅಂದರೆ, ಆಸ್ತಿ ಸಂಪೂರ್ಣ ಮೌಲ್ಯವನ್ನು ಸಾಲದ ರೂಪದಲ್ಲೇ ಪಡೆದು ನೀವು ದುಬೈನಲ್ಲಿ ಮನೆ ಕೊಳ್ಳಬಹುದು. ಇದಲ್ಲದೇ ನಿರ್ಮಾಣ ಪೂರ್ಣಗೊಂಡಿರುವ ಮನೆಗಳ ಖರೀದಿಗೆ ಶೇ. 100ರಷ್ಟು ಸಾಲವನ್ನೂ ಗೋಲ್ ಕಾರ್ಪೋರೇಷನ್ ಒದಗಿಸಲಿದೆ. ದುಬೈನಲ್ಲಿ ಕನ್ನಡಿಗರಿಗೆ ಇಂತಹ ಸಾಲ ಸೌಲಭ್ಯವನ್ನು ಗೋಲ್ ಕಾರ್ಪೋರೇಷನ್ ಪರ್ವ ರಿಯಲ್ ಎಸ್ಟೇಟ್ ಮೂಲಕ ಮಾತ್ರ ಒದಗಿಸಲಿದೆ ಎಂದೂ ಶಶಿಧರ್ ನಾಗರಾಜಪ್ಪ ವಿವರಿಸಿದ್ದಾರೆ.

ಭಾರತದಲ್ಲಿ ಗೃಹಸಾಲದ ಮೇಲಿನ ಬಡ್ಡಿ ಶೇ.7 ರಿಂದ ಶೇ. 9ರವರೆಗೂ ಇದೆ. ದುಬೈನಲ್ಲಿ ಮನೆ ಖರೀದಿಸುವ ಸಾಲಕ್ಕೆ ಗೋಲ್ ಕಾರ್ಪೋರೇಷನ್ ಶೇ.5 ರಿಂದ ಶೇ. 6 ರಷ್ಟು ಬಡ್ಡಿ ವಿಧಿಸಲಿದೆ. ಭಾರತದಲ್ಲಿ ಮನೆಯ ಬಾಡಿಗೆ ಶೇ.5 ರಷ್ಟು ಇದ್ದರೆ, ದುಬೈನಲ್ಲಿ ಶೇ.8 ರಷ್ಟಿದೆ. ಹೀಗಾಗಿ ಜೇಬಿನಿಂದ ಒಂದೂ ಪೈಸೆ ಖರ್ಚು ಮಾಡದೇ ನಮ್ಮ ಕೆಲಸ, ಆದಾಯದ ಗ್ಯಾರಂಟಿ ಮೂಲಕ ದುಬೈನಲ್ಲಿ ಆಸ್ತಿ ಕೊಳ್ಳುವ ಅವಕಾಶವನ್ನು ಪರ್ವ ರಿಯಲ್ ಎಸ್ಟೇಟ್ ಹಾಗೂ ಗೋಲ್ ಕಾರ್ಪೋರೇಷನ್ ಒದಗಿಸಲು ಕೆಲಸ ಆರಂಭಿಸಿವೆ ಎರಡೂ ಕಂಪನಿಗಳು.

ಗೋಲ್ ಕಾರ್ಪೋರೇಷನ್ 15 ವರ್ಷಗಳ ಹಿಂದೆ ಸ್ಥಾಪನೆಯಾಗಿ ಸಕ್ರಿಯವಾಗಿ ಹಣಕಾಸು ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. ನನಗೆ ಈ ಕ್ಷೇತ್ರದಲ್ಲಿ 20 ವರ್ಷದ ಅನುಭವ ಇದೆ. ಗೋಲ್ ಕಾರ್ಪೋರೇಷನ್ ಭಾರತದ 68 ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಹಣಕಾಸು ಸೇವೆಯಲ್ಲಿ ತೊಡಗಿದೆ. ಈಗ ಪರ್ವ ಜೊತೆ ಮಾಡಿಕೊಂಡಿರುವ ಒಪ್ಪಂದ ಸಂಪೂರ್ಣ ಗ್ರಾಹಕ ಸ್ನೇಹಿಯಾಗಿದೆ. ಬ್ಯಾಂಕುಗಳ ಹಣ ಹಾಕಿ, ಗ್ರಾಹಕ ಲಾಭ ಮಾಡಿಕೊಳ್ಳುವ ಯೋಜನೆಯಾಗಿದೆ. ಬ್ಯಾಂಕ್‌ ಸಾಲದ ಬಡ್ಡಿಯನ್ನು ತುಂಬುವಷ್ಟು ಹಣ ದುಬೈನ ಬಾಡಿಗೆಯಿಂದ ಬರಲಿದೆ. ರಿಯಲ್ ಎಸ್ಟೇಟ್‌ನ ವಾರ್ಷಿಕ ದರ ಏರಿಕೆ ಲಾಭ ಸಂಪೂರ್ಣವಾಗಿ ಹೂಡಿಕೆದಾರರಿಗೆ ದೊರೆಯಲಿದೆ.

ಸಾಲ ತುಂಬುವ ಶಕ್ತಿ ತೋರಿಸಿ, ಬ್ಯಾಂಕಿನ ಹಣ ಹಾಕಿ ದುಬೈನಲ್ಲಿ ಆಸ್ತಿ ಮಾಡಬಹುದು ಎಂದು ಗೋಲ್ ಕಾರ್ಪೋರೇಷನ್ನಿನ ಸಂಸ್ಥಾಪಕ ಅಧ್ಯಕ್ಷ ಎ.ಆರ್ ನಾಯಕ್ ವಿವರಿಸಿದರು. ಗೋಲ್ ಕಾರ್ಪೋರೇಷನ್ ಭಾರತದಾದ್ಯಂತ 22 ಶಾಖೆಗಳನ್ನು ಹೊಂದಿದೆ. 68 ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆ ಜೊತೆಗೂಡಿ ಕೆಲಸ ಮಾಡುತ್ತಿದೆ. ಪರ್ವ ಜೊತೆಗಿನ ವ್ಯವಹಾರದ ಮೂಲಕ ಗೋಲ್ ಕಾರ್ಪೋರೇಷನ್‌ಗೆ ಗ್ಲೋಬಲ್ ರೆಕ್ಕೆ ಸಿಕ್ಕಂತಾಗಿದೆ. ಮುಂದಿನ ದಿನಗಳಲ್ಲಿ ದುಬೈನ ಬ್ಯಾಂಕುಗಳ ಜೊತೆಗೂ ಒಡಂಬಡಿಕೆ ಮಾಡಿಕೊಳ್ಳಲಿದ್ದೇವೆ ಎನ್ನುತ್ತಾರೆ ಎ.ಆರ್ ನಾಯಕ್.

ಕನ್ನಡಿಗರಿಗಾಗಿ ಕನ್ನಡಿಗರೇ ಕಟ್ಟಿರುವ ಪರ್ವ ಗ್ರೂಪ್ ಜೊತೆ ಮತ್ತೊಂದು ಕನ್ನಡಿಗರ ಕಂಪನಿ ಗೋಲ್ ಕಾರ್ಪೋರೇಷನ್ ಕೈ ಜೋಡಿಸಿರೋದು ನಮ್ಮ ಶಕ್ತಿ ಹೆಚ್ಚಿಸಿದೆ. ಬೆಂಗಳೂರು ಬೆಲೆಯಲ್ಲೇ ದುಬೈನಲ್ಲಿ ಮನೆ ಕೊಳ್ಳಬಹುದು ಎಂಬ ಘೋಷವಾಕ್ಯದೊಂದಿಗೆ ಹೊರಟಿರುವ ಪರ್ವ ರಿಯಲ್ ಎಸ್ಟೇಟ್ ಜೊತೆ ಗೋಲ್ ಕಾರ್ಪೋರೇಷನ್ ಸೇರಿಕೊಂಡಿದೆ. ಇದರಿಂದ ಕನ್ನಡಿಗರು ಸ್ವಂತ ದುಡ್ಡಿಲ್ಲದೆಯೂ ದುಬೈನಲ್ಲಿ ಮನೆ ಕೊಳ್ಳಬಹುದು. ಶೇ.100 ರಷ್ಟು ಸಾಲದ ಹಣದಲ್ಲೇ ದುಬೈನಲ್ಲಿ ಮನೆ ಮಾಲೀಕರಾಗಬಹುದು.
- ನೀಲೇಶ್, ಸಂಸ್ಥಾಪಕರು, ಪರ್ವ ಗ್ರೂಪ್ಸ್, ದುಬೈ