ಧರ್ಮಸ್ಥಳದಲ್ಲಿ ಶವಗಳನ್ನು ಹೂತುಹಾಕಿದ ಆರೋಪದ ತನಿಖೆ ವೇಳೆ 13 ವರ್ಷಗಳ ಹಿಂದೆ ಕಾಣೆಯಾಗಿದ್ದ ಬಂಟ್ವಾಳದ ಯುವತಿಯ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಎಸ್ಐಟಿ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ರಾಜಕೀಯ ಆರೋಪ-ಪ್ರತ್ಯಾರೋಪಗಳು ಕೇಳಿಬಂದಿವೆ.
ಮಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತುಹಾಕಿದ ಆರೋಪ ಗಂಭೀರ ಚರ್ಚೆಗೆ ಕಾರಣವಾಗಿದ್ದು, ಪ್ರಕರಣವು ರಾಜ್ಯ ಮಟ್ಟದಷ್ಟೇ ಅಲ್ಲದೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿದೆ. ಅನಾಮಿಕ ದೂರುದಾರನ ಮಾಹಿತಿಯ ಮೇರೆಗೆ ಎಸ್ಐಟಿ (ವಿಶೇಷ ತನಿಖಾ ತಂಡ) ಸ್ಥಳಕ್ಕೆ ಭೇಟಿ ನೀಡಿ ಭೂಮಿ ಅಗೆಯುವ ಕಾರ್ಯಾಚರಣೆ ಆರಂಭಿಸಿತ್ತು. ಪ್ರಾಥಮಿಕ ಹಂತದಲ್ಲಿ ಭೂಮಿ ಅಗೆಯುವ ಕೆಲಸ ಪೂರ್ಣಗೊಂಡಿದ್ದು, ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಇಂದು ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ.
ಮಂಗಳೂರು ತಾಲೂಕಿನ ಬಂಟ್ವಾಳ ಉಪವಿಭಾಗದಲ್ಲಿ 13 ವರ್ಷಗಳಿಂದ ಕಾಣೆಯಾಗಿದ್ದ ಯುವತಿಯ ನಾಪತ್ತೆ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಧರ್ಮಸ್ಥಳ ಶವ ಹೂತು ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ, ಬಂಟ್ವಾಳ ತಾಲೂಕಿನ ಕಾವಲ ಮುಡೂರು ಗ್ರಾಮದ ಹೇಮಾವತಿ ಎಂಬ ಯುವತಿಯ ಸಹೋದರ ನಿತಿನ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಎಸ್ಐಟಿ ಅಧಿಕಾರಿಗಳ ಮೊರೆ ಹೋಗಿ ಅಧಿಕೃತ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಠಾಣೆಯ ಪೊಲೀಸರು ಮೊದಲಿಗೆ 2012ರಲ್ಲಿ ಯಾವುದೇ ದೂರು ದಾಖಲಾಗಿದೆಯೇ ಎಂದು ದೃಢಪಡಿಸಿಕೊಳ್ಳಲು ಹಳೆಯ ಕಡತಗಳ ಪರಿಶೀಲನೆ ನಡೆಸಿದರು.
ಕಡತ ಹುಡುಕಾಟದ ವೇಳೆ, 13 ವರ್ಷದ ಹಿಂದೆ ದೂರು ದಾಖಲಾಗಿಲ್ಲ ಎಂಬುದು ಬಹುತೇಕ ಖಚಿತವಾದರೂ, ಪ್ರಕರಣವನ್ನು ಸ್ವೀಕರಿಸಲು ಅಗತ್ಯ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಎಲ್ಲ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸುತ್ತಿದ್ದು, ಹೇಮಾವತಿಯ ಕೊನೆಯ ಸುಳಿವುಗಳು, ಆಕೆಯನ್ನು ಕರೆದೊಯ್ದ ಮಹಿಳೆಯ ವಿವರಗಳು, ಮತ್ತು ಆಕೆಯೊಂದಿಗೆ ಸಂಬಂಧ ಹೊಂದಿದ ಇತರ ವ್ಯಕ್ತಿಗಳ ವಿಚಾರಣೆ ನಡೆಸಲು ಸಿದ್ಧರಾಗಿದ್ದಾರೆ. ಎಸ್ಐಟಿ ಅಧಿಕಾರಿಗಳು ಸಹ ಈ ನಾಪತ್ತೆ ಪ್ರಕರಣವನ್ನು ಧರ್ಮಸ್ಥಳ ಶವ ಹೂತು ಪ್ರಕರಣದ ತನಿಖೆಯೊಂದಿಗೇ ಸಂಪರ್ಕಿಸಿ ಪರಿಶೀಲಿಸುವ ಸಾಧ್ಯತೆ ಇದೆ.
ಸ್ಥಳ ಪರಿಶೋಧನೆ ಮತ್ತು ಎಸ್ಐಟಿ ಕಾರ್ಯವೈಖರಿ
ಧರ್ಮಸ್ಥಳದ ನಿರ್ದಿಷ್ಟ ಜಾಗದಲ್ಲಿ ಸ್ಪಾಟ್ ಮಹಜರ್ ನಡೆಸಿದ ಅಧಿಕಾರಿಗಳು, ಮುಸುಕು ದಾರಿ ದೂರುದಾರನ ಹೇಳಿಕೆಯಂತೆ ಇಲ್ಲಿ ಅನೇಕ ಭಿಕ್ಷುಕರ ಸಾವಿನ ಘಟನೆ ನಡೆದಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ಈಗ ತನಿಖಾ ತಂಡ ಮೇಲಧಿಕಾರಿಗಳ ಸೂಚನೆಗಾಗಿ ಕಾಯುತ್ತಿದ್ದು, ಶನಿವಾರ ಮುಂದಿನ ಕಾರ್ಯಾಚರಣೆ ನಡೆಯಬೇಕೇ ಎಂಬುದರ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ. ತನಿಖೆಯ ಭಾಗವಾಗಿ ಬ್ರೈನ್ ಮ್ಯಾಪಿಂಗ್ ಸೇರಿದಂತೆ ವೈಜ್ಞಾನಿಕ ವಿಧಾನಗಳನ್ನೂ ಬಳಸುವ ಕುರಿತು ಚರ್ಚೆ ನಡೆಯುತ್ತಿದೆ.
ಬಿಜೆಪಿ ವಿರುದ್ಧ ಸಚಿವರ ಆರೋಪ
ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾಧ್ಯಮಗಳೊಂದಿಗೆ ಮಾತನಾಡಿ, “ಬಿಜೆಪಿ ಯಾವಾಗಲೂ ಧಾರ್ಮಿಕ ವಿಷಯಗಳನ್ನು ರಾಜಕೀಯ ಲಾಭಕ್ಕಾಗಿ ಉಪಯೋಗಿಸುವ ಪಾರ್ಟಿ. ಮೊದಲ ಹತ್ತು ದಿನ ಯಾರು ಮಾತಾಡಲಿಲ್ಲ, ಎಸ್ಐಟಿ ರಚಿಸಬೇಕು ಎಂದು ಅವರೇ ಒತ್ತಾಯಿಸಿದ್ದರು. ಈಗ ವಿಷಯ ಹೊರಬಂದಂತೆ ಅದನ್ನು ರಾಜಕೀಯವಾಗಿ ಹೇಗೆ ಬಳಸಿಕೊಳ್ಳಬೇಕು ಎಂಬ ಲೆಕ್ಕಾಚಾರ ಮಾಡುತ್ತಿದ್ದಾರೆ. ನಮಗೆ ನಿಜಾಂಶ ಹೊರಬರಬೇಕೇ ಹೊರತು ಲಾಭ-ನಷ್ಟದ ಲೆಕ್ಕಾಚಾರ ಇಲ್ಲ” ಎಂದು ಹೇಳಿದ್ದಾರೆ.
ಅವರು ಮತ್ತಷ್ಟು ವಿವರಿಸುತ್ತಾ, ಅನೇಕ ಸಂಘಟನೆಗಳು, ವ್ಯಕ್ತಿಗಳು ಹಾಗೂ ಎಡಪಂಥೀಯ ಸಂಘಟನೆಗಳು ಒತ್ತಡ ಹೇರಿದ್ದರಿಂದಲೇ ಎಸ್ಐಟಿ ರಚನೆ ಮಾಡಲಾಗಿದೆ ಎಂದರು. “ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರೂ ಸಹ ಎಸ್ಐಟಿ ಒಳ್ಳೆಯದು ಎಂದು ಹೇಳಿದ್ದಾರೆ. ನಾನು ಆರಂಭದಲ್ಲಿ ನಮ್ಮ ಜಿಲ್ಲಾ ಪೊಲೀಸರು ಒಳ್ಳೆಯ ತನಿಖೆ ನಡೆಸುತ್ತಾರೆ, ಎಸ್ಐಟಿ ಅಗತ್ಯವಿಲ್ಲವೆಂದು ಹೇಳಿದ್ದರೂ, ಕೊನೆಯಲ್ಲಿ ಎಸ್ಐಟಿ ರಚನೆ ಸರಿಯಾದ ನಿರ್ಧಾರವಾಯಿತು. ಇದರಲ್ಲಿ ಮುಚ್ಚಿಡಬೇಕಾದದ್ದೇನೂ ಇಲ್ಲ, ಯಾರ ಪರ-ವಿರೋಧ ಎಂಬ ಪ್ರಶ್ನೆ ಇಲ್ಲ. ದರ್ಶನ್ ಪ್ರಕರಣವಾಗಲಿ, ಪ್ರಜ್ವಲ್ ರೇವಣ್ಣ ಪ್ರಕರಣವಾಗಲಿ, ಯಾವ ಪ್ರಕರಣವಾದರೂ ಸತ್ಯ ಹೊರ ಬರಬೇಕು, ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು, ಅಮಾಯಕರಿಗೆ ತೊಂದರೆ ಆಗಬಾರದು” ಎಂದರು.
ಬಿಜೆಪಿ ವಿರುದ್ಧ ಅಪಪ್ರಚಾರದ ಆರೋಪ
ಸಚಿವರು ಬಿಜೆಪಿ ಹಳೆಯ ಸ್ಟ್ರಾಟರ್ಜಿಯಂತೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುವುದಾಗಿ ಆರೋಪಿಸಿದರು. “ಪರೇಶ್ ಮೇಶ್ತಾ ಪ್ರಕರಣದಲ್ಲಿ ಕರಾವಳಿ ಮತ್ತು ರಾಜ್ಯದ ಮಟ್ಟದಲ್ಲಿ ಅಪಪ್ರಚಾರ ಮಾಡಿದರು. ಇವರು ಮಾಡಿದರೆ ತೊಂದರೆ ಇಲ್ಲ, ಆದರೆ ಇನ್ನೊಬ್ಬರು ಮಾಡಿದರೆ ಮಾತ್ರ ತೊಂದರೆ. ಸಣ್ಣ ಸುದ್ದಿ ತೆಗೆದುಕೊಂಡು ಅದನ್ನು ದೊಡ್ಡದು ಮಾಡಿ ಕೋಮು ಬಣ್ಣ ಹಚ್ಚುವುದು ಇವರ ಪದ್ದತಿ” ಎಂದು ಟೀಕಿಸಿದರು.
ಗೃಹ ಸಚಿವರ ನಿಲುವು, ಪಾರದರ್ಶಕ ತನಿಖೆ
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ರಾಜ್ಯ ಗೃಹ ಸಚಿವರು ಸಹ ಪ್ರಕರಣದ ಕುರಿತು ನಿಲುವು ವ್ಯಕ್ತಪಡಿಸಿದ್ದಾರೆ. “ಎಸ್ಐಟಿ ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ, ಯಾರ ಒತ್ತಡಕ್ಕೂ ಮಣಿಯದೆ ನಿಜಾಂಶ ಪತ್ತೆ ಹಚ್ಚುವಂತೆ ಕೆಲಸ ಮಾಡುತ್ತಿದೆ. ಸೋಮವಾರ ನಾನು ಈ ಕುರಿತು ಸದನದಲ್ಲಿ ಉತ್ತರ ನೀಡುತ್ತೇನೆ. ಎಲ್ಲವೂ ಸದನದಲ್ಲಿ ಹೊರಬರಲಿದೆ” ಎಂದು ಗೃಹ ಸಚಿವರು ತಿಳಿಸಿದ್ದಾರೆ. ಮುಂದುವರೆದು ಮಾತನಾಡಿ “ಗಂಭೀರ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ. ಮುಂದೇನು ಮಾಡಬೇಕು, ಯಾವ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಅಧಿಕಾರಿಗಳು ತೀರ್ಮಾನಿಸಲಿದ್ದಾರೆ. ನಮ್ಮ ಉದ್ದೇಶ ಜನರ ಮುಂದೆ ನಿಖರ ಸತ್ಯಾಂಶ ಇಡುವುದು. ಷಡ್ಯಂತ್ರ ನಡೆದಿದೆಯೇ ಎಂಬುದನ್ನೂ ತಿಳಿದುಕೊಳ್ಳಲಾಗುತ್ತದೆ. ಸ್ಥಳ ಪರಿಶೋಧನೆ ಸುಲಭದ ಕೆಲಸವಲ್ಲ, ಪೊಲೀಸರು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದಾರೆ” ಎಂದರು.
ಧರ್ಮಸ್ಥಳ ಶವ ಹೂತು ಪ್ರಕರಣ ಈಗ ಕೇವಲ ತನಿಖೆಯಷ್ಟೇ ಅಲ್ಲ, ರಾಜಕೀಯ ಮತ್ತು ಸಾಮಾಜಿಕ ಮಟ್ಟದಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ. ಎಸ್ಐಟಿ ತನಿಖೆ ಮುಂದುವರೆದಿರುವಾಗ, ಸರ್ಕಾರ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತತೆಯ ಭರವಸೆ ನೀಡಿದೆ. ಆದರೆ, ರಾಜಕೀಯ ಆರೋಪ-ಪ್ರತಾರೋಪಗಳ ನಡುವೆಯೇ ಜನರು ಸತ್ಯಾಂಶ ಹೊರಬರುವ ನಿರೀಕ್ಷೆಯಲ್ಲಿ ಕಾದಿದ್ದಾರೆ.
