ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಪ್ರಕರಣದ ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಸ್ತಿಪಂಜರ ಮತ್ತು ಮಣ್ಣಿನ ವಿಶ್ಲೇಷಣಾ ವರದಿಗಳು ಬಂದ ನಂತರವೇ ತನಿಖೆ ಮುಂದುವರಿಯಲಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ. ದೂರುದಾರರು ತೋರಿಸಿದ ಜಾಗಗಳಲ್ಲಿ ಉತ್ಖನನ ನಡೆಯಲಿದೆ.

ಬೆಂಗಳೂರು (ಆ.18): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಕೇಸಿನ ಅಸಲಿ ತನಿಖೆಯೇ ಆರಂಭವಾಗಿಲ್ಲ. ಈಗ ಸಿಕ್ಕಿರುವ ಅಸ್ತಿಪಂಜರದ ವರದಿಗಳು ಹಾಗೂ ಮಣ್ಣಿನಲ್ಲಿ ಮೂಳೆ ಕರಗಿವೆಯೇ ಎಂಬ ರಾಸಾಯನಿಕ ವಿಶ್ಲೇಷಣಾ ವರದಿಗಳು ಬರುವವರೆಗೂ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.

ವಿಧಾನ ಮಂಡಲ ಮಳೆಗಾಲದ ಅಧಿವೇಶನದಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಸುತ್ತಲೂ ಆತ ತೋರಿಸಿದ ಜಾಗವನ್ನು ಮ್ಯಾಪ್ ಮಾಡಿಕೊಂಡು, ಜಿಲ್ಲಾ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಅಸ್ತಿಪಂಜರಗಳಿಗಾಗಿ ಉತ್ಖನನ ಮಾಡಲಾಗುತ್ತದೆ. ಸುಮಾರು ಜಾಗಗಳಲ್ಲಿ ಭೂಮಿ ಅಗೆದು ನೋಡಿದಾಗ 2 ಜಾಗಗಳಲ್ಲಿ ಮೂಳೆಗಳು ಸಿಗುತ್ತವೆ. ಅವುಗಳನ್ನು ಎಫ್‌ಎಸ್‌ಎಲ್ ವರದಿಗೆ ಕಳುಹಿಸಲಾಗುತ್ತದೆ. ಉಳಿದ ಜಾಗದಲ್ಲಿ ಲ್ಯಾಟರೈಟ್ ಮಣ್ಣು ಇದ್ದು, ಯಾವುದೇ ವಸ್ತುಗಳಿದ್ದರೂ ಬೇಗನೇ ಕೊಳೆತು ಕರಗಿ ಹೋಗುತ್ತದೆ ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಅಗೆದ ಮಣ್ಣನ್ನು ಪರೀಕ್ಷೆಗೆ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈವರೆಗೆ ಅಸ್ತಿಪಂಜರ ಸಿಕ್ಕಿದ ಜಾಗಗಳ ಹಾಗೂ ಮೂಳೆಗಳ ಬಗ್ಗೆ ವಿಶ್ಲೇಷಣೆ ಆಗಬೇಕಿದೆ. ಈವರೆಗೆ ತನಿಖೆಯೇ ಆರಂಭ ಆಗಿಲ್ಲ. ಇದೆಲ್ಲವೂ ತನಿಖೆಯ ಪೂರ್ವ ಭಾಗವಾಗಿದೆ. ಅಸ್ತಿಪಂಜರದ ವರದಿಗಳು, ಮಣ್ಣಿನ ಪರೀಕ್ಷಾ ವರದಿಗಳು ಹಾಗೂ ವಿಶ್ಲೇಷಣಾ ವರದಿಗಳು ಬಂದ ನಂತರವೇ ಅಸಲಿ ತನಿಖೆ ಆರಂಭ ಆಗಲಿದೆ. ಇನ್ನುಮುಂದೆ ತನಿಖೆ ತುಂಬಾ ಗಂಭೀರವಾಗಿ ನಡೆಯುತ್ತದೆ. ಪಾರದರ್ಶಕವಾಗಿ, ಯಾರದೇ ಒತ್ತಡಕ್ಕೆ ಮಣಿಯದ ರೀತಿಯಲ್ಲಿ, ತನಿಖೆಯ ದಿಕ್ಕನ್ನು ತಪ್ಪಿಸಲು ಅವಕಾಶ ಇಲ್ಲದ ರೀತಿಯಲ್ಲಿ ತನಿಖೆಯನ್ನು ನಡೆಸಲಾಗುತ್ತಿದೆ. ದೂರುದಾರ ವ್ಯಕ್ತಿ ತೋರಿಸಿದ ಕಡೆಗಳಲ್ಲಿ ಅಗಿಯಲಾಗುತ್ತದೆ. ಅವನು ಇಡೀ ಧರ್ಮಸ್ಥಳವನ್ನು ಅಗೆಯಲು ಹೇಳಿದರೆ ಅದನ್ನು ಮಾಡುವುದಿಲ್ಲ. ಆದರೆ, ಕೆಲವೊಂದು ಜಾಗಗಳಲ್ಲಿ ತೀರಾ ಅನುಮಾನ ಇದ್ದಲ್ಲಿ ಅಗೆದು ಶೋಧ ಮಾಡಲಾಗುತ್ತದೆ ಎಂದರು.

ಮಣ್ಣಿನ ಮಾದರಿಯನ್ನು ವಿಶ್ಲೇಷಣೆ ಮಾಡಿದಾಗ ರಾಸಾಯನಿಕ ಅಂಶಗಳಲ್ಲಿ ಮನುಷ್ಯನ ಮೂಳೆಗಳು ಕರಗಿರುವ ಬಗ್ಗೆ ವರದಿ ಇದೆಯೇ ಎಂಬುದನ್ನು ಕಾಯಬೇಕಿದೆ. ಆವರೆಗೆ ಎಸ್‌ಐಟಿ ತನಿಖೆಯನ್ನು ಸ್ಥಗಿತ ಮಾಡಲಾಗುತ್ತದೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದರು.