ಕೃತಕ ಬುದ್ಧಿಮತ್ತೆ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಸಮೀರ್ ಮನೆಗೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಕೋರ್ಟ್ ಸರ್ಚ್ ವಾರಂಟ್‌ನೊಂದಿಗೆ ಪೊಲೀಸರು ಕಂಪ್ಯೂಟರ್, ಮೊಬೈಲ್‌ಗಳನ್ನು ಪರಿಶೀಲಿಸಿದ್ದಾರೆ. ಸಮೀರ್ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರು/ಆನೇಕಲ್ (ಸೆ.04): ಕೃತಕ ಬುದ್ಧಿಮತ್ತೆ (AI) ವಿಡಿಯೋ ಒಂದಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಗಾಗಿ, ಬೆಳ್ತಂಗಡಿ ಪೊಲೀಸರು ಯೂಟ್ಯೂಬರ್ ಸಮೀರ್ ಅವರ ಬೆಂಗಳೂರಿನ ಮನೆಗೆ ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದುಕೊಂಡು ಪರಿಶೀಲನೆ ನಡೆಸಿದ್ದಾರೆ.
ಶನಿವಾರ ಬೆಳಿಗ್ಗೆ ಬನ್ನೇರುಘಟ್ಟ ಸಮೀಪವಿರುವ ಸಮೀರ್ ಅವರ ಬಾಡಿಗೆ ಮನೆಗೆ ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದ ತಂಡ ಮತ್ತು ಎಫ್.ಎಸ್.ಎಲ್ (FSL) ವಿಭಾಗದ ಸಿಬ್ಬಂದಿ ತೆರಳಿದ್ದಾರೆ. ಮೊದಲಿಗೆ ಪೊಲೀಸರು ಮನೆ ಬಾಗಿಲು ಬಡಿದರೂ, ಯಾರೂ ಬಾಗಿಲು ತೆಗೆದಿಲ್ಲ. ಇದರಿಂದಾಗಿ ಮನೆಯಲ್ಲಿ ಯಾರೂ ಇಲ್ಲ ಎಂದು ಭಾವಿಸಿ ಪೊಲೀಸರು ವಾಪಸ್ ಹೋಗಲು ಸಿದ್ಧರಾಗಿದ್ದರು. ಆದರೆ, ನಂತರ ಸಮೀರ್ ಅವರಿಗೆ ದೂರವಾಣಿ ಕರೆ ಮಾಡಿ ಪೊಲೀಸರು ವಿಚಾರಿಸಿದಾಗ, ಸಮೀರ್ ಮನೆಯಲ್ಲೇ ಇರುವುದು ತಿಳಿದುಬಂದಿದೆ. ಬಳಿಕ ಸಮೀರ್ ಕುಟುಂಬದವರು ಬಾಗಿಲು ತೆರೆದಿದ್ದು, ಪೊಲೀಸರು ಮನೆಯೊಳಗೆ ಪ್ರವೇಶಿಸಿದ್ದಾರೆ.
ನ್ಯಾಯಾಲಯದ ಸರ್ಚ್ ವಾರಂಟ್ ಆಧಾರದ ಮೇಲೆ ಪೊಲೀಸರು ಈ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಮಾಡಲು ಬಳಸಿದ ಕಂಪ್ಯೂಟರ್ ಹಾಗೂ ಮೊಬೈಲ್ ಫೋನ್‌ಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆಗೆ ಯೂಟ್ಯೂಬರ್ ಸಮೀರ್ ಸರಿಯಾಗಿ ಸಹಕರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
