ಧರ್ಮಸ್ಥಳದ ಬಗ್ಗೆ ಸುಳ್ಳು ಆರೋಪ ಮಾಡಿದ ಮುಸುಕುಧಾರಿಯ ವಿರುದ್ಧ ಶಾಸಕ ಲಕ್ಷ್ಮಣ ಸವದಿ ಕಿಡಿ ಕಾರಿದ್ದಾರೆ. ಬಿಜೆಪಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಬಾರದು ಎಂದು ಹೇಳಿದ್ದಾರೆ.

 ಅಥಣಿ (ಆ.18) : ಬಿಜೆಪಿಯವರು ಧರ್ಮದ ಹೆಸರಿನಲ್ಲಿ ಡೋಂಗಿ ರಾಜಕಾರಣ ಮಾಡಬಾರದು. ನೈಜ ಸಂಗತಿಗಳನ್ನು ಜನರ ಮುಂದೆ ಇಡುವ ಕಾರ್ಯವನ್ನು ವಿರೋಧ ಪಕ್ಷದವರು ಮಾಡಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಐಟಿಯನ್ನು ಸ್ವಾಗತ ಮಾಡಿದ ಬಿಜೆಪಿಯವರು ಈಗ ಉಸರವಳ್ಳಿಯಂತೆ ರಾಜಕಾರಣ ಮಾಡಬಾರದು. ಇದು ಬಿಜೆಪಿಯವರಿಗೆ ಯಾವುದೇ ಫಲ ನೀಡುವುದಿಲ್ಲ ಎಂದು ಕಿಡಿಕಾರಿದರು.

ಧರ್ಮಸ್ಥಳದ ಹೆಸರಿನಲ್ಲಿ ನಡೆದಿರುವ ತನಿಖೆಯನ್ನು ರಾಜ್ಯ ಸರ್ಕಾರ ಎಸ್ಐಟಿಗೆ ನೀಡಿದ ನಂತರ ವಿರೋಧ ಪಕ್ಷದವರು ಸ್ವಾಗತಿಸಿದ್ದಾರೆ. ಎಸ್ಐಟಿ ತನಿಖೆಯಲ್ಲಿ ಮುಸುಕುದಾರಿ ಆರೋಪಿ ಸುಳ್ಳು ಹೇಳುತ್ತಿದ್ದಾನೆಂದು ಗೊತ್ತಾದ ರಾಜಕೀಯ ಲಾಭ ಪಡೆಯುವುದಕ್ಕಾಗಿ ಸರ್ಕಾರದ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಧರ್ಮಸ್ಥಳ ಮೂಢನಂಬಿಕೆಗಳ ಸ್ಥಳವಲ್ಲ, ಅದು ಕೋಟ್ಯಂತರ ಜನರ ಮೂಲ ನಂಬಿಕೆಯ ಕೇಂದ್ರ. ಇಲ್ಲಿ ಎಲ್ಲರೂ ಜಾತ್ಯತೀತವಾಗಿ ಭೇಟಿ ನೀಡುತ್ತಾರೆ. ಅಲ್ಲಿನ ಧರ್ಮಾಧಿಕಾರಿಗಳ ಬಗ್ಗೆ ಅಪಾರ ಶ್ರದ್ಧೆ ಮತ್ತು ಗೌರವವಿದೆ. ಅನೇಕ ಸಮಾಜಮುಖಿ ಸೇವೆಗಳ ಮೂಲಕ ಧರ್ಮಸ್ಥಳ ಸಂಸ್ಥೆ ಒಳ್ಳೆಯ ಕಾರ್ಯ ಮಾಡುತ್ತಿದೆ. ಇಂತಹ ಧಾರ್ಮಿಕ ಕೇಂದ್ರಗಳ ಬಗ್ಗೆ ಕಳಂಕ ತರುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.

ಮುಸುಕುಧಾರಿಯೊಬ್ಬ ಧರ್ಮಸ್ಥಳದಲ್ಲಿ ಹಲವು ಕೊಲೆ ಮತ್ತು ಅತ್ಯಾಚಾರಗಳು ನಡೆದಿವೆಂದು ಆರೋಪಿಸಿ ಶವಗಳನ್ನು ತಾನೇ ಹೂತು ಹಾಕಿರುವುದಾಗಿ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದನು. ಈ ಆರೋಪಗಳು ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದವು. ಸರ್ಕಾರದ ನಿಷ್ಕ್ರಿಯತೆಯ ಬಗ್ಗೆ ಟೀಕೆಗಳು ವ್ಯಕ್ತವಾದ ನಂತರ, ಸರ್ಕಾರವು ಪ್ರಕರಣವನ್ನು ಎಸ್ಐಟಿಗೆ ವಹಿಸಿ ತನಿಖೆ ಆರಂಭಿಸಿತು. ಈ ತನಿಖೆ ಈಗ ಒಂದು ಹಂತಕ್ಕೆ ತಲುಪಿದ್ದು, ಎಸ್ಐಟಿ ವರದಿಯನ್ನು ಗೃಹ ಸಚಿವರು ಶಾಸನ ಸಭೆಯಲ್ಲಿ ಮಂಡಿಸಲಿದ್ದಾರೆ. ಆರೋಪ ಸುಳ್ಳು ಎಂದು ಸಾಬೀತಾದ ಮೇಲೆ ಮುಸುಕುಧಾರಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ತನಿಖೆಗಾಗಿ ಸರ್ಕಾರಕ್ಕೆ ಆದ ಸಮಯ ವ್ಯರ್ಥ, ರಾಜ್ಯದ ಜನರ ಭಾವನೆಗೆ ಆಗಿರುವ ಧಕ್ಕೆ ಮತ್ತು ಸರ್ಕಾರದ ಸಂಪೂರ್ಣ ಖರ್ಚು ವೆಚ್ಚವನ್ನು ಆತನಿಂದಲೇ ವಸೂಲಿ ಮಾಡಬೇಕು. ಈ ರೀತಿ ಸುಳ್ಳು ಆರೋಪಗಳನ್ನು ಮಾಡಿ, ಜನರ ಭಾವನೆಗಳಿಗೆ ಧಕ್ಕೆ ತರುವುದು, ಧರ್ಮಕ್ಕೆ ಮತ್ತು ಧಾರ್ಮಿಕ ಕೇಂದ್ರಗಳಿಗೆ ಕಳಂಕ ತರುವ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಬೇಕು. ಆ ನಿಟ್ಟಿನಲ್ಲಿ ಸಿಎಂ ಮತ್ತು ಗೃಹ ಸಚಿವರು ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಿರ್ಣಾಯಕ ಹಂತಕ್ಕೆ ತಲುಪಿದೆ. ಮುಸುಕುಧಾರಿಯ ಆರೋಪ ಸುಳ್ಳೆಂದು ಸಾಬೀತಾದರೇ ಆತನನ್ನೇ ಆರೋಪಿ ಎಂದು ಪರಿಗಣಿಸಿ, ಆತನನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು.

-ಲಕ್ಷ್ಮಣ ಸವದಿ,\B ಶಾಸಕ.