ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಆರೋಪದ ಬಗ್ಗೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾಮಿಕ ವ್ಯಕ್ತಿಯ ಹಿಂದೆ ಕಾಣದ ಕೈಗಳಿವೆ ಮತ್ತು ಇದು ಡಾ.ವೀರೇಂದ್ರ ಹೆಗ್ಗಡೆಯವರ ಘನತೆಗೆ ಧಕ್ಕೆ ತರುವ ಷಡ್ಯಂತ್ರ ಎಂದು ಆರೋಪಿಸಿದ್ದಾರೆ. 

ದಾವಣಗೆರೆ, ಆಗಸ್ಟ್ 10, 2025: ಅನಾಮಿಕ ವ್ಯಕ್ತಿ ಹೇಳಿದ ತಕ್ಷಣ ನೆಲ ಅಗೆದು ಹುಡುಕಿದರಲ್ಲಾ, ಏನಾದರೂ ಸಿಕ್ಕೀತಾ? ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.

ಧರ್ಮಸ್ಥಳ ಅರಣ್ಯದಲ್ಲಿ ಶವ ಹೂತಿಟ್ಟ ಆರೋಪ ಪ್ರಕರಣ ಸಂಬಂಧ ದಾವಣಗೆರೆಯಲ್ಲಿಂದು ಮಾತನಾಡಿದ ಅವರು, ಧರ್ಮಸ್ಥಳ ಪುಣ್ಯಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಅನಾಮಿಕ ವ್ಯಕ್ತಿಯ ಹಿಂದೆ ಕಾಣದ ಕೈಗಳಿವೆ ಎಂದು ಆರೋಪಿಸಿದರು. ಕಳೆದ ಹತ್ತು ದಿನಗಳಿಂದ ತನಿಖೆ ನಡೆಯುತ್ತಿದ್ದರೂ ಯಾವುದೇ ಅಸ್ಥಿಪಂಜರ ಅಥವಾ ಶವ ಸಿಕ್ಕಿಲ್ಲ. ಡಾ.ವೀರೇಂದ್ರ ಹೆಗ್ಗಡೆಯವರು ನಾಡಿನಾದ್ಯಂತ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ ಮೂಲಕ ಮಹಿಳೆಯರಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ. ಯಾವುದೇ ಭದ್ರತೆ ಇಲ್ಲದೆ 5,000 ರಿಂದ 5 ಲಕ್ಷದವರೆಗೆ ಸಾಲ ನೀಡುತ್ತಿದ್ದಾರೆ, ಆದರೆ ಬ್ಯಾಂಕ್‌ಗಳು ನೂರೆಂಟು ಕಾಗದಪತ್ರಗಳನ್ನು ಕೇಳುತ್ತವೆ. ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅಂಥವರ ಘನತೆಗೆ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸ ಕುತಂತ್ರಿಗಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇದೆಲ್ಲ ಲೆಫ್ಟಿಸ್ಟ್‌ಗಳ ಕೃತ್ಯ ಎಂದ ಅವರು, ಇದು ಹಿಂದೂಗಳ ಭಾವನೆಗೆ ಧಕ್ಕೆ ತರುವ ಷಡ್ಯಂತ್ರ ನಡೆಸಿದ್ದಾರೆ. ಇಂತಹ ಅಪಪ್ರಚಾರ ಮುಂದುವರಿದರೆ, ಮಹಿಳೆಯರು ಪೊರಕೆ ತಗೊಂಡು ಬೀದಿಗಿಳಿಯುತ್ತಾರೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಮುಂದಿನ ದಿನಗಳಲ್ಲಿ ಈ ಆರೋಪದ ಹಿಂದಿರುವವರ ಬಣ್ಣ ಬಯಲು ಮಾಡುತ್ತೇವೆ. ಇದೊಂದು ದೊಡ್ಡ ಹೋರಾಟಕ್ಕೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದರು. ಈ ಪ್ರಕರಣ ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಎಸ್‌ಐಟಿ ಮುಂದಿನ ತನಿಖೆಯ ಫಲಿತಾಂಶಕ್ಕೆ ಕಾಯುತ್ತಿದ್ದಾರೆ.