ಅನನ್ಯಾ ಭಟ್ ಕತೆ ಸುಳ್ಳು ಎಂದು ಸುಜಾತಾ ಭಟ್ ಹೇಳಿದ ಬೆನ್ನಲ್ಲೇ ಇದೀಗ ಸುಜಾತಾ ಭಟ್ ಪರ ವಕೀಲ ಮಂಜುನಾಥ್‌ಗೆ ಹೊಸ ಸಂಕಷ್ಟ ಶುರುವಾಗಿದೆ. ಸುಳ್ಳು ಮಾಹಿತಿ ನೀಡಿದ ಆರೋಪಡಿ ವಕೀಲ ಮಂಜುನಾಥ್ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ಅರೆಸ್ಟ್ ಆಗ್ತಾರಾ ವಕೀಲ ಮಂಜುನಾಥ್? 

ಧರ್ಮಸ್ಥಳ (ಆ.22) ಧರ್ಮಸ್ಥಳ ಪ್ರಕರಣದಲ್ಲಿ ಮಗಳು ಅನನ್ಯಾ ಭಟ್‌ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿರುವ ಸುಜಾತಾ ಭಟ್ ಕ್ಷಣಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ಅನನ್ಯಾ ಭಟ್ ಪ್ರಕಣವೇ ಸುಳ್ಳು ಎಂದಿದ್ದರೆ, ಮರುಕ್ಷಣದಲ್ಲೇ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಉಲ್ಟಾ ಹೊಡೆದಿದ್ದಾರೆ. ಬಲವಂತವಾಗಿ ಹೇಳಿಕೆ ಕೊಡಿಸಿದ್ದಾರೆ ಎಂದು ಸುಜಾತಾ ಭಟ್ ಹೇಳಿದ್ದಾರೆ. ಈ ಬೆಳವಣಿಗೆ ನಡುವೆ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸುಳ್ಳು ಮಾಹಿತಿ ನೀಡಿದ ಆರೋಪದಡಿ ಎಫ್ಐಆರ್ ಆಗಿದ್ದು, ಮಂಜನಾಥ್ ಅರೆಸ್ಟ್ ಆಗ್ತಾರಾ ಅನ್ನೋ ಚರ್ಚೆ ಶುರುವಾಗಿದೆ.

ಧರ್ಮಸ್ಥಳ ನಿವಾಸಿ ರಘುರಾಮ್ ಶೆಟ್ಟಿ ನೀಡಿದ ದೂರು

ಧರ್ಮಸ್ಥಳ ಕೇಸ್ ನಲ್ಲಿ ಸುಜಾತಾ ಭಟ್ ಪರ ವಕೀಲ ಮಂಜುನಾಥ್‌ಗೆ ಸಂಕಷ್ಟ ಶುರುವಾಗಿದೆ. ಉತ್ಖನನ ವೇಳೆ ಮೃತದೇಹಗಳ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದೂರು ದಾಖಲಾಗಿದೆ. ಧರ್ಮಸ್ಥಳ ನಿವಾಸಿ ರಘುರಾಮ ಶೆಟ್ಟಿ (44) ನೀಡಿದ ದೂರಿನ ಆಧಾರದಲ್ಲಿ ದೂರು ದಾಖಲಾಗಿದೆ. ಎಸ್ಐಟಿ ಕಾರ್ಯಾಚರಣೆಯ ಬಗ್ಗೆ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಿದ ಹಿನ್ನೆಲೆ ಎಫ್ಐಆರ್ ದಾಖಲಿಸಲಾಗಿದೆ.

ಜುಲೈ 30 ರಂದು ಮಂಜುನಾಥ್ ಹೊರಡಿಸಿದ್ದ ಪತ್ರಿಕಾ ಪ್ರಕಟಣೆ

ಸುಜಾತಾ ಭಟ್ ಪರ ವಕೀಲ ಮಂಜನಾಥ್ ಜುಲೈ 30 ರಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು. ಇದರಲ್ಲಿ ಎಸ್ಐಟಿ ತಂಡದಿಂದ ನಡೆಯುತ್ತಿರುವ ಮೃತದೇಹಗಳ ಉತ್ಖನನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುಳ್ಳು ವರದಿ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪಾಯಿಂಟ್ 1ರಿಂದ 13ರವರೆಗೆ 50ಕ್ಕೂ ಅಧಿಕ ಮೃತದೇಹ ಹೂತಿರೋ ಬಗ್ಗೆ ಪ್ರಕಟಣೆಯಲ್ಲಿ ಹೇಳಿದ್ದಾರೆ.ಆದರೆ ಉತ್ಖನನದ ವೇಳೆ ಪಾಯಿಂಟ್ ಆರು ಬಿಟ್ಟು ಯಾವುದೇ ಜಾಗದಲ್ಲಿ ಅವಶೇಷ ಪತ್ತೆಯಾಗಿರಲಿಲ್ಲ. ಇದು ಸಾರ್ವಜನಿಕರ ನೆಮ್ಮದಿಗೆ ದಕ್ಕೆಯಾಗುವಂತಹ ಹಾಗೂ ಭಯವುಂಟು ಮಾಡುವಂತಹ, ಅನಧಿಕೃತ ಮಾಹಿತಿಗಳನ್ನು ಒಳಗೊಂಡಿರುವ ಸುಳ್ಳು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸುಜಾತಾ ಭಟ್ ಪರ ವಕೀಲ ಮಂಜುನಾಥ್ ವಿರುದ್ದ ಬಿಎನ್ಎಸ್ 353 (1)(b), 353 (2) ಬಿಎನ್ಎಸ್ ರಂತೆ ಪ್ರಕರಣ ದಾಖಲಾಗಿದೆ. ಇದೀಗ ಸುಜಾತಾ ಭಟ್ ವಕೀಲ ಮಂಜುನಾಥ್ ಅರೆಸ್ಟ್ ಆಗುತ್ತಾರಾ ಎಂದು ಚರ್ಚೆ ನಡೆಯುತ್ತಿದೆ.