ಧರ್ಮಸ್ಥಳ ಶವ ಹೂತು ಪ್ರಕರಣದ ತನಿಖೆಯಲ್ಲಿ ಹೊಸ ತಿರುವು. ಪಾಯಿಂಟ್ ನಂಬರ್ 13ರಲ್ಲಿ ಶೋಧ ಕಾರ್ಯ ಸ್ಥಗಿತಗೊಂಡಿದ್ದು, ಎಸ್ಐಟಿ ಸಾಕ್ಷ್ಯ ಪರಿಕರಗಳ ವಿಶ್ಲೇಷಣೆಯತ್ತ ಗಮನ ಹರಿಸಿದೆ. ಮುಸುಕುಧಾರಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಹಲವು ಮಂದಿಯ ವಿಚಾರಣೆ ಮುಂದುವರಿದಿದೆ.
ಬೆಳ್ತಂಗಡಿ: ಧರ್ಮಸ್ಥಳ ಶವ ಹೂತು ಪ್ರಕರಣದಲ್ಲಿ ಇಂದು ಪಾಯಿಂಟ್ ನಂಬರ್ 13ರಲ್ಲಿ ಯಾವುದೇ ಶೋಧ ಕಾರ್ಯ ನಡೆದಿಲ್ಲ. ಈ ಸ್ಥಳದಲ್ಲಿ ಶೋಧ ಕಾರ್ಯವನ್ನು ನಡೆಸುತ್ತಿದ್ದ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಎಸ್‌ಐಟಿ ಕಚೇರಿಯಿಂದ ಮಹಜರು ಸ್ಥಳಕ್ಕೆ ತೆರಳಲೇ ಇಲ್ಲ. ಎಸ್ಐಟಿ ಕಚೇರಿಯಿಂದ ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳು ಜೊತೆಗೆ ಸೋಕೋ ಟೀಮ್ ಕೂಡ ವಾಪಸ್ ತೆರಳಿದೆ. ಇತ್ತ ಎಸ್‌ಐಟಿ ಕಚೇರಿಯಲ್ಲಿ ಮಹತ್ವದ ಸಭೆಯು ನಡೆಯುತ್ತಿದ್ದು, ತನಿಖಾ ಅಧಿಕಾರಿಗಳ ಗಮನವು ಇದೀಗ ಸಾಕ್ಷ್ಯ ಪರಿಕರಗಳ ವಿಶ್ಲೇಷಣೆಯತ್ತ ಹರಿಯುತ್ತಿದೆ.
ಇದರ ಮಧ್ಯೆ ಮೂರು ಗಂಟೆಗಳ ಕಾಲ, ಅಡಿಶನಲ್ ಕಮಿಷನರ್ ಸ್ಟೆಲ್ಲಾ ವರ್ಗೀಸ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕಡತ ವಿಲೇವಾರಿಯಲ್ಲಿ ಮಾಡಿದ್ದ ಮಾಹಿತಿ ಲಭ್ಯವಾಗಿದೆ. ಅವರು ನೇರವಾಗಿ ತಹಶೀಲ್ದಾರ್ ಕಚೇರಿಯಿಂದ ಹೊರಟು ಎಸ್ಐಟಿ ಕಚೇರಿಗೆ ಹೋಗದೆ ಇತರ ಮಹತ್ವದ ಕೆಲಸದಲ್ಲಿ ತೊಡಗಿದ್ದಾರೆ. ಎಸ್‌ಐಟಿ ಮುಖ್ಯಸ್ಥರು ಕಳೆದ 8 ದಿನಗಳ ಶೋಧ ಕಾರ್ಯಗಳ ವಿಡಿಯೋ, ಫೋಟೋ ಹಾಗೂ ಸಾಕ್ಷ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ವಿವರಗಳನ್ನು ಸ್ಪಷ್ಟಪಡಿಸಲು ಎಕ್ಸ್‌ಪರ್ಟ್‌ಗಳ ಅಭಿಪ್ರಾಯವನ್ನು ಕೂಡ ಪಡೆಯುತ್ತಿದ್ದಾರೆ.
ಸ್ಪಾಟ್ ನಂಬರ್ 13 ಎಸ್ಐಟಿಗೆ ಇನ್ನೂ ಬಹುದೊಡ್ಡ ಸವಾಲಾಗಿ ಉಳಿದಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಮುಸುಕುಧಾರಿಯ ತೀವ್ರ ವಿಚಾರಣೆಯನ್ನೂ ನಡೆಸಲಾಗಿದೆ. ವಕೀಲರೊಂದಿಗೆ ಎಸ್ಐಟಿ ಕಚೇರಿಗೆ ಬಂದ ದೂರುದಾರನನ್ನು ಕಳೆದ 2 ಗಂಟೆ 45 ನಿಮಿಷಗಳಿಂದ ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಇದುವರೆಗೆ 15ಕ್ಕೂ ಹೆಚ್ಚು ವ್ಯಕ್ತಿಗಳನ್ನು ಪ್ರಶ್ನಿಸಲಾಗಿದೆ. ಜೊತೆಗೆ ಹತ್ತಕ್ಕೂ ಹೆಚ್ಚು ಜನರನ್ನು ಈಗಲೂ ವಿಚಾರಣೆಗೆ ಕರೆಸಲಾಗಿದ್ದು, ಅವರನ್ನು ಪೊಲೀಸರು ಸೂಕ್ತ ದಾಖಲೆಗಳೊಂದಿಗೆ ಪ್ರಶ್ನಿಸುತ್ತಿದ್ದಾರೆ. ಪ್ರಕರಣದ ಸಂಬಂಧ ಎಲ್ಲ ಮಾಹಿತಿಗಳ ಪರಿಶೀಲನೆ ನಡೆಯುತ್ತಿದ್ದು, ಮುಂದಿನ ಹಂತದ ಕ್ರಮಗಳಿಗೆ ಮುಂದಾಗಿದ್ದಾರೆ.
ಉದ್ವಿಗ್ನ ಪರಿಸ್ಥಿತಿ 7 ಜನರ ವಿರುದ್ದ ಕಠಿಣ ಕೇಸ್, 150 ಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರತ್ಯೇಕ ಎಫ್‌ಐಆರ್
ಧರ್ಮಸ್ಥಳ ಗ್ರಾಮದಲ್ಲಿ ಆಗಸ್ಟ್ 6ರಂದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ನಂತರ, ಬೆಳ್ತಂಗಡಿ ಪೊಲೀಸ್ ಉಪವಿಭಾಗ ವ್ಯಾಪ್ತಿಯಲ್ಲಿ ಒಟ್ಟು 7 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಧರ್ಮಸ್ಥಳ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣೆಗಳಲ್ಲಿ ಈ ಸಂಬಂಧ ಕ್ರಮ ತೆಗೆದುಕೊಳ್ಳಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4 ಪ್ರಕರಣಗಳು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 3 ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ಪ್ರಕರಣಗಳಲ್ಲೂ ಒಟ್ಟಾರೆ 150ಕ್ಕೂ ಅಧಿಕ ವ್ಯಕ್ತಿಗಳ ವಿರುದ್ಧ ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
ಪೊಲೀಸರು ತಮ್ಮ ಸ್ವಂತ ಸೂಚನೆಯಂತೆ (ಸುಮೊಟೊ) ಮೂವರು ವಿರುದ್ಧ ಅಕ್ರಮ ಕೂಟದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದೇ ವೇಳೆ, ಪರಸ್ಪರ ಹಲ್ಲೆ ನಡೆಸಿದ ಆರೋಪದಡಿಯಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಧರ್ಮಸ್ಥಳ ಗ್ರಾಮದ ಪಾಂಗಳ ಎಂಬ ಪ್ರದೇಶದಲ್ಲಿ ಅಕ್ರಮವಾಗಿ ಗುಂಪು ಸೇರಿದ್ದ ಆರೋಪದಡಿ 2 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, ಬೆಳ್ತಂಗಡಿ ತಾಲ್ಲೂಕಿನ ಉಜಿರೆಯ ಬೆನಕ್ ಆಸ್ಪತ್ರೆಯಲ್ಲಿ ಅಕ್ರಮವಾಗಿ ಗುಂಪು ಸೇರಿದ್ದ ಪ್ರಕರಣವೊಂದರ ಮೇಲೆಯೂ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅಕ್ರಮ ಕೂಟ ಸೇರಿದ ಆರೋಪದಲ್ಲಿ ಪೊಲೀಸರು 3 ಸುಮೊಟೊ ಪ್ರಕರಣಗಳನ್ನ ದಾಖಲಿಸಿಕೊಂಡಿದ್ದು, ಪರಸ್ಪರ ಹಲ್ಲೆ ನಡೆಸಿದ ಆರೋಪದಡಿಯಲ್ಲಿ ನಾಲ್ಕು ಪ್ರಕರಣ ದಾಖಲು ಮಾಡಲಾಗಿದೆ. ಧರ್ಮಸ್ಥಳ ಗ್ರಾಮದ ಪಾಂಗಳದ ಅಕ್ರಮ ಕೂಟ ಸೇರಿದ ಆರೋಪದಡಿ 2 ಎಫ್ ಐ ಆರ್. ಬೆಳ್ತಂಗಡಿಯ ಉಜಿರೆ ಬೆನಕ ಆಸ್ಪತ್ರೆಯಲ್ಲಿ ಅಕ್ರಮ ಕೂಟ ಸೇರಿದ ಆರೋಪದಡಿ 1 ಎಫ್ ಐ ಆರ್ ದಾಖಲು ಮಾಡಲಾಗಿದೆ.
