ಧರ್ಮಸ್ಥಳದ ಶವ ಹೂತಿಟ್ಟ ಪ್ರಕರಣದ ತನಿಖೆಯಲ್ಲಿ 'ಪಾಯಿಂಟ್ ನಂ. 13' ರಲ್ಲಿ ಡ್ರೋನ್-ಮೌಂಟೆಡ್ GPR ತಂತ್ರಜ್ಞಾನ ಬಳಸಿ ಶೋಧ ಕಾರ್ಯ. ಭೂಮಿಯಾಳದ ಸ್ಕ್ಯಾನಿಂಗ್ ಮೂಲಕ ಶವಗಳ ಅಸ್ತಿತ್ವ ಪರಿಶೀಲಿಸಲಾಗುತ್ತಿದೆ. ಜಿಪಿಆರ್ ಸ್ಕ್ಯಾನ್‌ನಿಂದ ಅಸಹಜತೆ ಕಂಡುಬಂದಲ್ಲಿ ಉತ್ಖನನ. ಜೌಗು ಪ್ರದೇಶದಲ್ಲಿ ತನಿಖೆ ಆರಂಭ.

ದಕ್ಷಿಣ ಕನ್ನಡ (ಆ.11) : ಧರ್ಮಸ್ಥಳದ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ದಳ (SIT), ನೇತ್ರಾವತಿ ನದಿಯ ದಡದಲ್ಲಿರುವ 'ಪಾಯಿಂಟ್ ನಂ. 13' ರಲ್ಲಿ ಭೂಮಿಯ ಆಳದಲ್ಲಿ ಹೂತಿರುವ ಶವಗಳ ಬಗ್ಗೆ ಸುಳಿವು ಪಡೆಯಲು ಹೈಟೆಕ್ ತಂತ್ರಜ್ಞಾನವನ್ನು ಬಳಸುತ್ತಿದೆ. ಈ ಸ್ಥಳದಲ್ಲಿ ಡ್ರೋನ್-ಮೌಂಟೆಡ್ GPR (Ground Penetrating Radar) ತಂತ್ರಜ್ಞಾನವನ್ನು ಬಳಸಿ ಸ್ಕ್ಯಾನ್ ನಡೆಸಲು ತಂಡ ಸಿದ್ಧತೆ ನಡೆಸಿದೆ.

ಡ್ರೋನ್ GPR ತಂತ್ರಜ್ಞಾನದ ಬಳಕೆ:

ಭೂಮಿಯ ಆಳದಲ್ಲಿರಿಬ ಮತ್ತು ಮಾನವರು ಸುಲಭವಾಗಿ ತಲುಪಲು ಕಷ್ಟಕರವಾದ ನದಿ ದಡದಲ್ಲಿ ಶೋಧ ಕಾರ್ಯವನ್ನು ಸುಲಭಗೊಳಿಸಲು, SIT ತಂಡವು ಡ್ರೋನ್ GPR ತಂತ್ರಜ್ಞಾನವನ್ನು ಬಳಸುತ್ತಿದೆ. ಸಾಮಾನ್ಯ GPR ಆಂಟೆನಾವನ್ನು ಡ್ರೋನ್‌ನ ಕೆಳಭಾಗದಲ್ಲಿ ಅಳವಡಿಸಿ, ಡ್ರೋನ್ ಗಾಳಿಯಲ್ಲಿ ಹಾರುತ್ತಾ ನೆಲದ ಮೇಲ್ಮೈಗೆ ಸಮೀಪವಾಗಿ GPR ಸಿಗ್ನಲ್‌ಗಳನ್ನು ಕಳುಹಿಸುತ್ತದೆ. ಈ ಸಿಗ್ನಲ್‌ಗಳು ನೆಲದೊಳಗೆ ಹೋಗಿ ಪ್ರತಿಫಲಿಸಿ ಮರಳಿ ಬರುತ್ತವೆ. ನಂತರ ಈ ಸಿಗ್ನಲ್‌ಗಳನ್ನು ಸೆನ್ಸರ್‌ಗಳು ದಾಖಲಿಸಿಕೊಂಡು, ಸಾಫ್ಟ್‌ವೇರ್ ಮೂಲಕ 2D ಅಥವಾ 3D ಚಿತ್ರವಾಗಿ ಪರಿವರ್ತಿಸಿ ನಿಖರವಾದ ಫಲಿತಾಂಶವನ್ನು ನೀಡುತ್ತದೆ. ಈ ತಂತ್ರಜ್ಞಾನವು ವೇಗವಾಗಿ ಮತ್ತು ದೊಡ್ಡ ಪ್ರದೇಶವನ್ನು ಪರಿಶೀಲಿಸಲು ಸಹಾಯ ಮಾಡುತ್ತದೆ.

ತನಿಖಾ ತಂಡದ ಆಗಮನ:

ತನಿಖಾಧಿಕಾರಿ ಜಿತೇಂದ್ರ ದಯಾಮಾ ಅವರ ನೇತೃತ್ವದಲ್ಲಿ ಜಿಪಿಆರ್ ತಂತ್ರಜ್ಞರ ತಂಡ, ಫೊರೆನ್ಸಿಕ್ ವೈದ್ಯರು ಹಾಗೂ ಕಾರ್ಮಿಕರು ಪಾಯಿಂಟ್ ನಂ. 13ಕ್ಕೆ ಆಗಮಿಸಿದ್ದು, ಬಿಗು ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ತಂತ್ರಜ್ಞರ ತಂಡವು ಜಿಪಿಆರ್ ಯಂತ್ರವನ್ನು ಜೋಡಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಈ ಹಿಂದೆ, ಅನಾಮಿಕ ದೂರುದಾರ ಮತ್ತು ಸ್ಥಳೀಯ ಸಹಾಯಕ ಕಮಿಷನರ್ (AC) ಸ್ಥಳಕ್ಕೆ ಆಗಮಿಸಿಲ್ಲ ಎಂದು ವರದಿಯಾಗಿದೆ.

ಮುಂದಿನ ಹಂತಗಳೇನು?

ಜಿಪಿಆರ್ ಸ್ಕ್ಯಾನ್‌ನಿಂದ ಯಾವುದೇ ಅಸಹಜತೆ ಕಂಡುಬಂದಲ್ಲಿ, ಶವ ಹೂತಿಟ್ಟಿರುವ ಶಂಕೆ ಮೂಡುತ್ತದೆ. ಆ ಸಂದರ್ಭದಲ್ಲಿ ಆ ಸ್ಥಳವನ್ನು ಗುರುತಿಸಿ, ಮುಂದಿನ ಹಂತದಲ್ಲಿ ಉತ್ಖನನ ಕಾರ್ಯವನ್ನು ಆರಂಭಿಸಲಾಗುತ್ತದೆ. ಈ ತನಿಖೆಯಿಂದ ಪ್ರಕರಣದ ಕುರಿತು ಇನ್ನಷ್ಟು ಪ್ರಮುಖ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ.

ಮೊದಲ ಹಂತದ ಶೋಧ ಕಾರ್ಯ ಮುಕ್ತಾಯ!

ಡ್ರೋನ್-ಮೌಂಟೆಡ್ GPR (Drone GPR) ತಂತ್ರಜ್ಞಾನ ಬಳಸಿ ಪಾಯಿಂಟ್ ನಂಬರ್ 13 ಮೊದಲ ಹಂತದ ಶೋಧ ಮುಕ್ತಾಯಗೊಂಡಿದೆ. ಸದ್ಯ ಪಾಯಿಂಟ್ ನಂಬರ್ 13ರಲ್ಲಿ ಗಿಡ ಗಂಟಿಗಳನ್ನ ಕ್ಲೀನ್ ಮಾಡ್ತಿರೋ ಕೂಲಿ ಕಾರ್ಮಿಕರು. ಹುಲ್ಲು ಕತ್ತರಿಸುವ ಮೆಷಿನ್ ಬಳಸಿ ಕ್ಲೀನಿಂಗ್ ಕಾರ್ಯ ಮಾಡಲಾಗುತ್ತದೆ. ನಂತರ ಈ ಡ್ರೋನ್ ಆಧಾರಿತ ಜಿಪಿಆರ್ ಯಂತ್ರ ಬಳಸಿ 2ನೇ ರೌಂಡ್ ಶೋಧ ಕಾರ್ಯ ಮಾಡಲಿದ್ದಾರೆ.

20 ಲಕ್ಷ ರೂ. ಬಾಡಿಗೆಯ ಜಿಪಿಆರ್ ಯಂತ್ರ:

ನೆಲದಡಿಯಲ್ಲಿರುವ ವಸ್ತುಗಳನ್ನು ಪತ್ತೆಹಚ್ಚಲು ಬಳಸುವ ಅತ್ಯಾಧುನಿಕ GPR ತಂತ್ರಜ್ಞಾನವನ್ನು ಬಾಡಿಗೆಗೆ ಪಡೆಯಲು SIT ಅಧಿಕಾರಿಗಳು ನಿರ್ಧರಿಸಿದ್ದಾರೆ. ಬೆಂಗಳೂರಿನಿಂದ ಖಾಸಗಿ ಕಂಪನಿಯೊಂದರ GPR ಯಂತ್ರವನ್ನು ಬಾಡಿಗೆಗೆ ತರಿಸಲು ಯೋಜನೆ ಹಾಕಲಾಗಿದೆ. ಆದರೆ, ತಂತ್ರಜ್ಞಾನದ ಬಳಕೆಗೆ ಸಂಬಂಧಿಸಿದ ಅನುಮತಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ. SIT ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರು GPR ತಂತ್ರಜ್ಞಾನದ ಬಳಕೆಯ ಬಗ್ಗೆ ತಜ್ಞರ ಸಲಹೆ ಪಡೆದಿದ್ದಾರೆ. ಈ ತಂತ್ರಜ್ಞಾನವು ಅತ್ಯಂತ ದುಬಾರಿಯಾಗಿದ್ದು, ಖಾಸಗಿ ಕಂಪನಿಯು ದಿನ ಒಂದಕ್ಕೆ ಲಕ್ಷಾಂತರ ರೂಪಾಯಿ ಬಾಡಿಗೆಯನ್ನು ವಿಧಿಸಲಿದೆ ಎಂದು ತಿಳಿದುಬಂದಿದೆ. ಯಂತ್ರದ ಒಟ್ಟು ಬಾಡಿಗೆ ವೆಚ್ಚ ಸುಮಾರು 20 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಭಾರೀ ವೆಚ್ಚ ಕೂಡ ತನಿಖಾ ತಂಡಕ್ಕೆ ಒಂದು ಸವಾಲಾಗಿದೆ.

ಜೌಗು ಪ್ರದೇಶದಲ್ಲಿ ತಾಂತ್ರಿಕ ಸವಾಲುಗಳು:

'ಸ್ಪಾಟ್ ನಂಬರ್ 13' ಇರುವ ಪ್ರದೇಶವು ಜೌಗು ಪ್ರದೇಶವಾಗಿದ್ದು, ಜೊತೆಗೆ ಮಳೆಯ ಪ್ರಮಾಣ ಹೆಚ್ಚಾಗಿರುತ್ತದೆ. GPR ಯಂತ್ರವು ಒದ್ದೆಯಾದ ಭೂಮಿಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ನೆಲದಲ್ಲಿ ನೀರಿನ ಅಂಶ ಹೆಚ್ಚಾದಂತೆ GPR ಸಿಗ್ನಲ್‌ಗಳು ದುರ್ಬಲಗೊಳ್ಳುವ ಸಾಧ್ಯತೆ ಇರುವುದರಿಂದ, ತನಿಖೆಯ ನಿಖರತೆಯ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣದಿಂದಾಗಿ, ತಂತ್ರಜ್ಞಾನದ ಬಳಕೆಯ ಕುರಿತು ಅನುಮಾನಗಳು ವ್ಯಕ್ತವಾಗಿದ್ದವು. ಆದರೆ, ಇದೀಗ ಡ್ರೋನ್ ಆಧಾರಿತವಾಗಿ ಜಿಪಿಆರ್ ಯಂತ್ರವನ್ನು ಬಳಕೆ ಮಾಡಲಾಗುತ್ತಿದೆ.