CT Ravi on Karnataka government: ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಲು 'ಲಂಡನ್ ಬುಕ್ ಆಫ್ ರೆಕಾರ್ಡ್' ಹೆಸರಿನಲ್ಲಿ ನಕಲಿ ಪ್ರಮಾಣಪತ್ರ ಬಳಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದ್ದಾರೆ. ಗ್ಯಾರೆಂಟಿಗೆ ನಕಲಿ ಸರ್ಟಿಫಿಕೇಟ್ ಸೃಷ್ಟಿಸಲಾಗಿದೆ ಎಂದು ವ್ಯಂಗ್ಯವಾಡಿದರು.
ಚಿಕ್ಕಮಗಳೂರು (ಅ.17): ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಫೇಕ್ ಸರ್ಟಿಫಿಕೇಟ್‌ಗಳ ಮೂಲಕ ಸಮರ್ಥನೆ ಮಾಡಲು ಹೊಟಿದೆ. ಮಾನ ಮಾರ್ಯಾದೆ ಇಲ್ಲದ ಇಂಥ ಸರ್ಕಾರಕ್ಕೆ ಏನು ಹೇಳೋಣ ಎಂದು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ವಾಗ್ದಾಳಿ ನಡೆಸಿದರು.
ಟ್ರಾನ್ಸ್ ಪೋರ್ಟ್ ಡಿಪಾರ್ಟ್ ಮೆಂಟ್ ಲಂಡನ್ ಬುಕ್ ಆಫ್ ರೆಕಾರ್ಡ್ ಸೇರಿದ ವಿಚಾರ ಸಂಬಂಧ ಇಂದು ಚಿಕ್ಮಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟ್ರಾನ್ಸ್ ಪೋರ್ಟ್ ಡಿಪಾರ್ಟ್ ಮೆಂಟ್ ಲಂಡನ್ ಬುಕ್ ಆಫ್ ರೆಕಾರ್ಡ್ ಹೆಸರಿನಲ್ಲಿ ಫೇಕ್ ಸರ್ಟಿಫಿಕೇಟ್ ಮಾಡಿದೆ. ಲಂಡನ್ ಬುಕ್ ಆಫ್ ರೆಕಾರ್ಡ್ ನ ಪ್ಲಾಟಿನಮ್ ಸರ್ಟಿಫಿಕೇಟ್ ಸಿಕ್ಕಿದೆ ಅಂತಾರೆ.ಆದರೆ ಹೆಸರು ಲಂಡನ್ ಅಂತಿದೆ, ಹೆಡ್ ಆಫೀಸ್ ಕ್ರುಯೇಶಿಯಾ ಅಂತಾ ತೋರಿಸ್ತಿದೆ ಎಂದು ವ್ಯಂಗ್ಯ ಮಾಡಿದರು.
10 ಸಾವಿರ ಕೊಟ್ಟರೆ ಪ್ಲಾಟಿನಮ್ ಸರ್ಟಿಫಿಕೇಟ್ ಸಿಗುತ್ತೆ:
5 ಸಾವಿರ ರೂಪಾಯಿಗಳಿಗೆ ಗೋಲ್ಡನ್, 6 ಸಾವಿರಕ್ಕೆ ಡೈಮಂಡ್, 8 ಸಾವಿರಕ್ಕೆ ಮತ್ತೊಂದು, 10 ಸಾವಿರ ಕೊಟ್ಟರೆ ಪ್ಲಾಟಿನಮ್ ಸರ್ಟಿಫಿಕೇಟ್ ಸಿಗುತ್ತದೆ. ಲಂಡನ್ ಬುಕ್ ಆಫ್ ರೆಕಾರ್ಡ್ ಹೆಸರಲ್ಲಿ ಫೇಕ್ ಸರ್ಟಿಫಿಕೇಟ್ ಮಾಡಿದ್ದೀರಾ, ನಿಮಗೆ ಏನು ಹೇಳಬೇಕು? ನಿಮ್ಮ ಸರ್ಕಾರಕ್ಕೆ ನಾಚಿಕೆ ಮಾನ ಮಾರ್ಯಾದೆ ಅನ್ನೋದೇ ಇಲ್ಲದಿದ್ದ ಮೇಲೆ ಏನು ಹೇಳೋಣ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರಕ್ಕೆ ಜನರು ಹಿಡಿಶಾಪ:
ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಿಲ್ಲ, ಯಾವ ಕೆಲಸಗಳು ಆಗುತ್ತಿಲ್ಲ, ಸ್ವತಃ ಆಡಳಿತ ಪಕ್ಷದ ಶಾಸಕರೇ ರೋಸಿ ಹೋಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ನೆರೆ ಬಂದು ಜನರು ಸಂಕಷ್ಟದಲ್ಲಿ ಸರ್ಕಾರದ ಸ್ಪಂದನೆ ಇಲ್ಲ. ರಾಜ್ಯದ ಜನರು ಈ ಸರ್ಕಾರಕ್ಕೆ ದಿನವೂ ಹಿಡಿಶಾಪ ಹಾಕುತ್ತಿದ್ದಾರೆ. ಆದ್ರೆ ಇವರು ಫೇಕ್ ಸರ್ಟಿಫಿಕೇಟ್ ಮೂಲಕ ಗುಲಾಮಗಿರಿಯ ಸಂಭ್ರಮದಲ್ಲಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನ ನಿಮಗೆ ಸರ್ಟಿಫಿಕೇಟ್ ಕೊಡಬೇಕು, ಚುನಾವಣೆ ಬಂದಾಗ ನಿಮ್ಮ ಹಣೆಬರಹ ಗೊತ್ತಾಗುತ್ತೆ ಎಂದರು.
ಬೆಲೆ ಏರಿಕೆ, ಕೆಟ್ಟ ಆಡಳಿತ, ಗ್ಯಾರಂಟಿ ಮೆಚ್ಚಿದ್ದಾರೋ ಇಲ್ವೋ ಎಲೆಕ್ಷನ್ ಬರಲಿ ಗೊತ್ತಾಗುತ್ತೆ. ನಿಮ್ಮ ಗ್ಯಾರೆಂಟಿ ಕೆಲಸ ಮಾಡಿದ್ರೆ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ಸೀಟು ನೀವೇ ಗೆಲ್ಲಬೇಕಿತ್ತು. ಆದ್ರೆ ಲೋಕಸಭೆ ಚುನಾವಣೆಯ 29 ಸೀಟುಗಳ ಪೈಕಿ ನೀವು ಗೆದ್ದಿದ್ದು ಬರೀ 9, 19 ಕ್ಷೇತ್ರದಲ್ಲಿ ನೀವು ಸೋತಿದ್ದೀರಾ, ಈ ಸೋಲು ಏನು ಸೂಚಿಸುತ್ತದೆ? ದೇಶದ ಜನರು ನಿಮ್ಮನ್ನು ತಿರಸ್ಕರಿಸಿದ್ದಾರೆ. ರಾಜ್ಯದಲ್ಲಿ ಜನರಿಗೆ ಆಮಿಷೆ ತೋರಿಸಿ ಅಧಿಕಾರ ಬಂದು ಯಾವ ಸಾಧನೆ ಮಾಡಿದ್ದೀರಿ? ಇವೇ ಫೇಕ್ ಸರ್ಟಿಫಿಕೆಟ್‌ಗಳನ್ನ ಸೃಷ್ಟಿಸಿ ನಿಮ್ಮ ಬೆನ್ನು ನೀವೇ ತಟ್ಟಿಕೊಳ್ಳುತ್ತಿದ್ದೀರಿ ಎಂದು ತೀವ್ರವಾಗಿ ಟೀಕಿಸಿದರು. ಈ ಆರೋಪಗಳು ಸರ್ಕಾರದ ಗ್ಯಾರಂಟಿ ಯೋಜನೆಗಳ ಮೇಲೆ ಪ್ರಶ್ನೆಗಳನ್ನು ಎಬ್ಬಿಸಿವೆ.
