ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನಡುವಿನ ಪತ್ರ ವಿನಿಮಯ ವಿವಾದವು ಖಾದರ್ ಅವರ ಭೇಟಿಯ ನಂತರ ಪರಿಹಾರವಾಗಿದೆ. ಹೊರಟ್ಟಿ ಅವರು ವಿದೇಶ ಪ್ರವಾಸದ ಸಂದರ್ಭದಲ್ಲಿ ಸಂವಹನದ ಕೊರತೆಯಿಂದಾಗಿ ಉಂಟಾದ ಭಿನ್ನಾಭಿಪ್ರಾಯವನ್ನು ಖಾದರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ಸೆ.11): ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನಡುವಿನ ಪತ್ರ ಸಮರ ಕೊನೆಗೂ ತಣ್ಣಗಾಗಿದೆ. ಖಾದರ್ ಅವರು ಖುದ್ದು ಬಸವರಾಜ ಹೊರಟ್ಟಿ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ ಪರಿಣಾಮ ಭಿನ್ನಾಭಿಪ್ರಾಯ ಶಮನಗೊಂಡಿದೆ.
ಬುಧವಾರ ಬೆಳಗ್ಗೆ ಹೊರಟ್ಟಿ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ ಯು.ಟಿ.ಖಾದರ್ ಅವರು 15 ನಿಮಿಷ ಕಾಲ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸಷ್ಟನೆ ನೀಡಿದರು.
ಇದನ್ನೂ ಓದಿ: ಬ್ಯಾಲಟ್ ಪೇಪರ್ ಅಕ್ರಮ ಈಗ ಸುಲಭವಲ್ಲ..: ಮಾಜಿ ಚುನಾವಣಾ ಆಯುಕ್ತರೊಂದಿಗೆ ಮುಖಾಮುಖಿ ಸಂದರ್ಶನ
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಹೊರಟ್ಟಿ, ನಾನು ವಿದೇಶ ಪ್ರವಾಸ ಕೈಗೊಂಡಿದ್ದೆ. ಈ ಸಂದರ್ಭದಲ್ಲಿ ಸ್ವಲ್ಪ ಕಮ್ಯುನಿಕೇಷನ್ ಗ್ಯಾಪ್ ಆಗಿದೆ. ಹೀಗಾಗಿ ನಾನು ಪತ್ರ ಬರೆದಿದ್ದೆ. ಈಗ ಖಾದರ್ ಅವರು ಎಲ್ಲವನ್ನೂ ನನ್ನ ಗಮನಕ್ಕೆ ತಂದಿದ್ದಾರೆ. ಇದೀಗ ಎಲ್ಲವೂ ಸರಿ ಹೋಗಿದೆ ಎಂದರು.
ಯು.ಟಿ.ಖಾದರ್ ಅವರು ಯಾವುದೇ ಕಾರ್ಯಕ್ರಮ ನಡೆಸಿದರೂ ನಮ್ಮ ಜತೆ ಚರ್ಚಿಸದೆ ಏಕಪಕ್ಷೀಯ ತೀರ್ಮಾನ ಕೈಗೊಳ್ಳುತ್ತಿದ್ದಾರೆ ಎಂದು ಹೊರಟ್ಟಿ ಅವರು ಯು.ಟಿ.ಖಾದರ್ ಅವರಿಗೆ ಮಂಗಳವಾರ ಪತ್ರ ಬರೆದು ಆಕ್ರೋಶ ಹೊರ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.
