ಗಣೇಶ ಹಬ್ಬಕ್ಕಾಗಿ ಜನ ಊರುಗಳಿಗೆ ತೆರಳುತ್ತಿದ್ದಾರೆ. ಇದರ ಬೆನ್ನಲ್ಲೇ ಖಾಸಗಿ ಬಸ್ ಮಾಲೀಕರು ಜನಸಾಮಾನ್ಯರಿಂದ ಸುಲಿಗೆ ಮಾಡಲು ಇಳಿದಿದ್ದಾರೆ. ಬಸ್ ದರ ಮೂರು ಪಟ್ಟು ಏರಿಕೆ ಮಾಡಿದ್ದಾರೆ. ಸಾಮಾನ್ಯ ದರ ಹಾಗೂ ಗಣೇಶೋತ್ಸವ ರಜಾ ದಿನಗಳ ಪಟ್ಟಿ ಇಲ್ಲಿದೆ.
ಬೆಂಗಳೂರು (ಆ.25) ಗಣೇಶೋತ್ಸವ ಹಬ್ಬಕ್ಕೆ ದೇಶವೇ ತಯಾರಿ ಮಾಡಿಕೊಳ್ಳುತ್ತಿದೆ. ಈಗಾಗಲೇ ಜನರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಗೌರಿ ಹಾಗೂ ಗಣೇಶ ಹಬ್ಬದ ಹಿನ್ನಲೆಯಲ್ಲಿ ಜನಸಾಮಾನ್ಯರಿಗೆ ದರ ಏರಿಕೆಯ ಶಾಕ್ ಎದುರಾಗಿದೆ. ಕೆಲ ಖಾಸಗಿ ಬಸ್ ಮಾಲೀಕರು ಜನ ಸಾಮಾನ್ಯರಿಂದ ಸುಲಿಗೆಗೆ ಇಳಿದಿದ್ದಾರೆ. ಬಸ್ ದರವನ್ನು ಮೂರು ಪಟ್ಟು ಏರಿಕೆ ಮಾಡಲಾಗಿದೆ. ಈ ಕುರಿತು ಜನ ಸಾಮಾನ್ಯರು ಆಕ್ರೋಶ ಹೊರಹಾಕಿದ್ದಾರೆ. ಗಣೇಶನ ಹಬ್ಬದ ಮುನ್ನ ದಿನ ಊರಿಗೆ ಹೋಗುವವರಿಗೆ ಬಸ್ ಮಾಲೀಕರು ಶಾಕ್ ನೀಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಊರಿಗೆ ತೆರಳುವ ಕಾರಣ ಅನಿವಾರ್ಯವಾಗಿ ಟಿಕೆಟ್ ಬುಕಿಂಗ್ ಮಾಡಬೇಕಾಗುತ್ತದೆ. ಇದೇ ಸಂದರ್ಭವನ್ನು ಬಳಸಿಕೊಂಡಿರುವ ಕೆಲ ಖಾಸಗಿ ಬಸ್ ಮಾಲೀಕರು ದರ ಏರಿಕೆ ಮಾಡಿದ್ದಾರೆ.
ಏಷ್ಟಾಗಿದೆ ಬಸ್ ದರ?
ಸ್ವರ್ಣ ಗೌರಿ ವ್ರತ, ಗೌರಿ ಹಬ್ಬ ದಿನವೂ ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ. ಆಗಸ್ಟ್ 26ಕ್ಕೆ ಗೌರಿ ಹಬ್ಬವಿದ್ದರೆ, ಆಗಸ್ಟ್ 27ಕ್ಕೆ ಗಣೇಶ ಹಬ್ಬ ಆಚರಿಸಲಾಗುತ್ತದೆ. ಮೂರು ಪಟ್ಟು ದರ ಹೆಚ್ಚಿಸಲಾಗಿದೆ.
ಬೆಂಗಳೂರು - ಮಡಿಕೇರಿ
ಇಂದಿನ ದರ ₹500- ₹600
ಆ.26 ಟಿಕೆಟ್ ದರ ₹1500- ₹5000
ಬೆಂಗಳೂರು - ಉಡುಪಿ
ಇಂದಿನ ದರ ₹600- ₹950
ಆ. 26 ಟಿಕೆಟ್ ದರ ₹2500- ₹3000
ಬೆಂಗಳೂರು-ಧಾರವಾಡ
ಇಂದಿನ ದರ ₹800 ₹1200
ಆ. 26 ಟಿಕೆಟ್ ದರ ₹1700-₹4000
ಬೆಂಗಳೂರು -ಬೆಳಗಾವಿ
ಇಂದಿನ ದರ ₹800 ₹1000
ಆ.26, ಟಿಕೆಟ್ ದರ ₹2000-₹3000
ಬೆಂಗಳೂರು - ದಾವಣಗೆರೆ
ಇಂದಿನ ದರ ₹600 ₹800
ಆ. 26, ಟಿಕೆಟ್ ದರ 1300-₹2000
ದರ ಏರಿಕೆ ಮಾಡಿದರೆ ಲೈಸೆನ್ಸ್ ರದ್ದು, ಎಚ್ಚರಿಕೆ ನೀಡಿದ ಸಾರಿಗೆ ಇಲಾಖೆ
ಪ್ರತಿ ವರ್ಷ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಖಾಸಗಿ ಬಸ್ ಮಾಲೀಕರು ದರ ಏರಕೆ ಮಾಡುತ್ತಾರೆ. ಇಷ್ಟೇ ಅಲ್ಲ ಸಾರಿಗೆ ಇಲಾಖೆ ಪ್ರತಿ ವರ್ಷ ಇದೇ ರೀತಿಯ ಎಚ್ಚರಿಕೆ ನೀಡುತ್ತದೆ. ಆದರೆ ಈ ದರ ಏರಿಕೆಗೆ ಕಡಿವಾಣ ಬಿದ್ದಿಲ್ಲ. ಈ ಬಾರಿ ಯದ್ವಾತದ್ವಾ ಬಸ್ ದರ ಏರಿಸಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ. ಡಬಲ್,ತ್ರಿಬಲ್ ದರ ಏರಿಸಿದ್ರೆ ಬಸ್ ಪರ್ಮಿಟ್ ರದ್ದು ಮಾಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಎಚ್ಚರಿಸಿದೆ.
ಜನಸಾಮಾನ್ಯರಿಂದ ದುಬಾರಿ ವಸೂಲಿ ಮಾಡಿದರೆ ಲೈಸೆನ್ಸ್ ರದ್ದು ಮಾತ್ರವಲ್ಲ, ಬಸ್ ಬ್ಲಾಕ್ ಲಿಸ್ಟ್‌ಗೆ ಹಾಕಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಬ್ಲಾಕ್ ಲಿಸ್ಟ್ ಗೆ ಹಾಕಿದ್ರೆ ಬಸ್ ಫಿಟ್ನೆಸ್ ಸರ್ಟಿಫಿಕೇಟ್ ಸಿಗುವುದಿಲ್ಲ. ನಿಯಮ ಉಲ್ಲಂಘಿಸಿದರೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಇಲಾಖೆ ಹೇಳಿದೆ.
ಬೆಂಗಳೂರಿನಲ್ಲಿ ಹತ್ತು ತಂಡಗಳ ಮೂಲಕ ಖಾಸಗಿ ಬಸ್ ತಪಾಸಣೆ
ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳ ಹತ್ತು ತಂಡಗಳ ಮೂಲಕ ಖಾಸಗಿ ಬಸ್ ತಪಾಸಣೆ ನಡೆಸಲಿದ್ದಾರೆ. ನಗರದ ಹತ್ತು ಆರ್ಟಿಓ ವ್ಯಾಪ್ತಿಯಲ್ಲಿ ಖಾಸಗಿ ಬಸ್ ಗಳ ಕಾರ್ಯಾಚರಣೆ ನಡೆಸಲು ಸೂಚನೆ ನೀಡಲಾಗಿದೆ. ಈ ಕುರಿತು ಸಾರಿಗೆ ಇಲಾಖೆ ಆಯುಕ್ತರಿಂದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯವ್ಯಾಪ್ತಿ ತಪಾಸಣೆ ಮಾಡಿ ಎಂದು ಸೂಚಿಸಲಾಗಿದೆ. ಇಂದಿನಿಂದ ಹಬ್ಬ ಮುಗಿಯವರೆಗೆ ಖಾಸಗಿ ಬಸ್ ಗಳ ಮೇಲೆ ತಪಾಸಣೆಗೆ ನಿರ್ದೇಶನ ನೀಡಲಾಗಿದೆ. ಇದರ ಜೊತೆಗೆ ಸಾರಿಗೆ ಇಲಾಖೆ ಕಚೇರಿಯಲ್ಲಿ ಹೆಲ್ಲೈನ್ ತೆರೆಯಲು ಇಲಾಖೆ ಮುಂದಾಗಿದೆ.
