ಹೃದಯಾಘಾತದಿಂದ ನಿಧನರಾದ ಧಾರವಾಡ ರಂಗಾಯಣ ನಿರ್ದೇಶಕ, ಹಾಸ್ಯ ನಟ, ರಂಗಕರ್ಮಿ ರಾಜು ತಾಳಿಕೋಟೆ ಅಂತ್ಯ ಸಂಸ್ಕಾರವನ್ನು ಇಸ್ಲಾಂ ಧರ್ಮದ ವಿಧಿವಿಧಾನದಂತೆ ಮೌಲ್ವಿಗಳ ನೇತೃತ್ವದಲ್ಲಿ ನೆರವೇರಿಸಲಾಯಿತು.

ಸಿಂದಗಿ (ಅ.15): ಹೃದಯಾಘಾತದಿಂದ ನಿಧನರಾದ ಧಾರವಾಡ ರಂಗಾಯಣ ನಿರ್ದೇಶಕ, ಹಾಸ್ಯ ನಟ, ರಂಗಕರ್ಮಿ ರಾಜು ತಾಳಿಕೋಟೆ ಅಂತ್ಯ ಸಂಸ್ಕಾರವನ್ನು ಇಸ್ಲಾಂ ಧರ್ಮದ ವಿಧಿವಿಧಾನದಂತೆ ಮೌಲ್ವಿಗಳ ನೇತೃತ್ವದಲ್ಲಿ ಕುಟುಂಬಸ್ಥರು, ಗಣ್ಯರು, ಕಲಾವಿದರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ ಚಿಕ್ಕಸಿಂದಗಿ ಗ್ರಾಮದಿಂದ ಸು.3ಕಿಮೀ ದೂರದಲ್ಲಿರುವ ಖಬರಸ್ಥಾನದಲ್ಲಿ ನೆರವೇರಿಸಲಾಯಿತು. ರಾಜು ತಾಳಿಕೋಟೆ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿರುವ ಅವರ ತೋಟದ ಮನೆಯ ರಂಗಾಶ್ರಯ ಸಭಾಭವನದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ರಾಜು ತಾಳಿಕೋಟೆ ಅವರ ಪಾರ್ಥಿವ ಶರೀರಕ್ಕೆ ಸಚಿವ ಶಿವಾನಂದ ಪಾಟೀಲ, ಹಿರಿಯ ನಟಿ ಉಮಾಶ್ರೀ, ಸಿಂದಗಿ ಶಾಸಕ ಅಶೋಕ ಮನಗೂಳಿ, ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ, ಮಾಜಿ ಶಾಸಕ ರಮೇಶ ಭೂಸನೂರ, ಎ.ಎಸ್.ಪಾಟೀಲ ನಡಹಳ್ಳಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ತಾಲೂಕಾಧ್ಯಕ್ಷ ವಾಯ್.ಸಿ.ಮಯೂರ, ರಾಜಶೇಖರ ಕೂಚಬಾಳ, ಬಾಲ್ಯ ಸ್ನೇಹಿತ ಸಿದ್ದಣ್ಣ, ಬೆಂಗಳೂರು ರಂಗ ಸಮಾಜದ ಶ್ರೀಧರ ಹೆಗಡೆ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ, ರಂಗಭೂಮಿ ಕಲಾವಿದರಾದ ಪ್ರೇಮಾ ಗುಳೇದಗುಡ್ಡ, ಸಿದ್ದು ನಾಲತವಾಡ, ಶಬ್ಬಿರ್ ಡಾಂಗೆ, ಕಾನಿಪ ತಾಲೂಕಾಧ್ಯಕ್ಷ ಆನಂದ ಶಾಬಾದಿ, ಬಸವ ಕೇಂದ್ರ ನಾನಾಗೌಡ ಪಾಟೀಲ, ಸಿದ್ದಲಿಂಗ ಚೌಧರಿ ಸೇರಿದಂತೆ ಅವರ ಅಭಿಮಾನಿಗಳು, ಸ್ನೇಹಿತರು, ಕಲಾ ಬಂಧುಗಳು, ಕುಟುಂಬವರ್ಗ ತಾಲೂಕಿನ ವಿವಿಧ ಗ್ರಾಮಸ್ಥರು, ಹಿರಿಯರು, ಮುಖಂಡರು ಅಂತಿಮ ಗೌರವ ನಮನ ಸಲ್ಲಿಸಿದರು.

ರಾಜು ತಾಳಿಕೋಟೆ ಹೆಸರು ಅಜರಾಮರ

ಸಿಂದಗಿ ಕನ್ನಡ ಸಾಹಿತ್ಯ ಗೆಳೆಯರ ಬಳಗ ಆಯೋಜಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ರಾಜು ತಾಳಿಕೋಟೆ ಅವರ ಹೆಸರು ಅಜರಾಮರವಾಗಿ ಉಳಿಯುವಂತೆ ಸರ್ಕಾರ ಕ್ರಮಕೈಗೊಳ್ಳಲಿದೆಂದರು. ಈ ವೇಳೆ ಬೆಂಗಳೂರು ರಂಗ ಸಮಾಜದ ಶ್ರೀಧರ ಹೆಗಡೆ, ಶಾಸಕ ಅಶೋಕ ಮನಗೂಳಿ, ಸಿ.ಎಸ್.ನಾಡಗೌಡ, ಎ.ಎಸ್.ಪಾಟೀಲ ನಡಹಳ್ಳಿ, ನಾನಾಗೌಡ ಪಾಟೀಲ, ವಾಯ್.ಸಿ.ಮಯೂರ, ರಾಜಶೇಖರ ಕೂಚಬಾಳ, ರಂಗಾಯಣ ನಿರ್ದೇಶಕ ಬುದ್ದಣ್ಣ ಮಾದಳ್ಳಿ, ಬಿ.ಎಎಸ್.ಪಾಟೀಲ ಯಾಳಗಿ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಮಾತನಾಡಿ, ಹಾಸ್ಯ ಕಲಾವಿದರಾಗಿ, ಸಮಾಜ ಸೇವಕರಾಗಿ, ಎಲ್ಲರನ್ನೂ ಒಟ್ಟಾಗಿ ಕೆದುಕೊಂಡು ಒಮದಾಗಿ ಬಾಳಬೇಕೆನ್ನುವ ಜಾತಿ ಮತ ಪಂಥಗಳನ್ನು ಮೀರಿ ಬೆಳೆದ ರಾಜು ತಾಳಿಕೋಟಿ ಹೆಸರು ಚಿರಸ್ಥಾಯಿಯಾಗೂಳಿಯಲು ಅವರ ಹೆಸರಿನಲ್ಲಿ ರಂಗ ಮಂದಿರ ನಿರ್ಮಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.