Caste census data privacy: ಸಿಎಂ ಸಿದ್ದರಾಮಯ್ಯನವರು ರಾಜ್ಯದ ಜಾತಿ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸ್ವತಃ ಭಾಗವಹಿಸಿ, ಸಮಸಮಾಜ ನಿರ್ಮಾಣದ ಗುರಿಯೊಂದಿಗೆ ಪ್ರತಿಯೊಬ್ಬರೂ ಇದರಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.  ಅಪಪ್ರಚಾರಕ್ಕೆ ಕಿವಿಗೊಡದೆ, ವೈಯಕ್ತಿಕ ಮಾಹಿತಿ ಸುರಕ್ಷತೆಯ ಭರವಸೆ ನೀಡಿದರು.

ಬೆಂಗಳೂರು (ಅ.16): ನಾನು ಸಮೀಕ್ಷೆಯಲ್ಲಿ ಭಾಗವಹಿಸಿದ್ದೇನೆ. ಅಸಮಾನತೆ, ಬಡತನವನ್ನು ನಿವಾರಣೆ ಮಾಡಿ ಸಮಸಮಾಜ ನಿರ್ಮಾಣ ಮಾಡುವ ಉದ್ದೇಶದೊಂದಿಗೆ ನಮ್ಮ ಸರ್ಕಾರವು ಈ ಸಮೀಕ್ಷೆಯನ್ನು ಕೈಗೊಂಡಿದೆ. ಪ್ರತಿಯೊಬ್ಬರು ಭಾಗವಹಿಸಿ ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಮನವಿ ಮಾಡಿದರು.

ಜಾತಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದೇನೆ: ಸಿಎಂ ಟ್ವೀಟ್

ಜಾತಿ ಸಮೀಕ್ಷೆ ಯಲ್ಲಿ ಭಾಗವಹಿಸಿದ ನಂತರ ಎಕ್ಸ್ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಈ ಸಮೀಕ್ಷೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು, ಪ್ರಾಮಾಣಿಕವಾಗಿ ಮಾಹಿತಿ ನೀಡಬೇಕು. ಇದರಿಂದ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಜನರನ್ನು ಗುರುತಿಸಿ ಅವರಿಗೆ ಸೌಲಭ್ಯ ಕೊಡಲು ಸಾಧ್ಯವಾಗುತ್ತದೆ ಎಂದರು.

ಕೆಲವರು ವೈಯಕ್ತಿಕ ಮಾಹಿತಿ ದುರುಪಯೋಗವಾಗುತ್ತದೆ ಎಂದು ಸಮೀಕ್ಷೆಗೆ ಹಿಂದೇಟು ಹಾಕುತ್ತಿದ್ದಾರೆ. ಆದರೆ ನಿಮ್ಮ ವೈಯಕ್ತಿಕ ಮಾಹಿತಿ ಯಾವುದೇ ಕಾರಣಕ್ಕೂ ದುರುಪಯೋಗ ಆಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಅಪಪ್ರಚಾರಗಳಿಗೆ ಕಿವಿಗೊಡಬೇಡಿ: ಸಿಎಂ ಮನವಿ

ರಾಜ್ಯದಲ್ಲಿ ಜಾತಿ ಮತ್ತು ಶೈಕ್ಷಣಿಕ ಸಮೀಕ್ಷೆ ಈಗಾಗಲೇ ಬಹುತೇಕ ಮುಗಿದಿದೆ. ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಹೀಗಾಗಿ ಎಲ್ಲರೂ ಸಮೀಕ್ಷೆಯಲ್ಲಿ ತಪ್ಪದೇ ಭಾಗವಹಿಸಬೇಕು. ಇದು ಕೇವಲ ಹಿಂದುಳಿದ ಜಾತಿಗಳ ಸಮೀಕ್ಷೆ ಅಲ್ಲ ಅಥವಾ ಬೇರೆ ಯಾವುದೇ ಜನಾಂಗದ ಸಮೀಕ್ಷೆ ಅಲ್ಲ. ಎಲ್ಲ ವರ್ಗದ ಜನರ ಸಮೀಕ್ಷೆ. ರಾಜ್ಯದಲ್ಲಿ ಏಳು ಕೋಟಿ ಜನಸಂಖ್ಯೆ ಇದೆ. ಏಳು ಕೋಟಿ ಜನರ ಸಾಮಾಜಿಕ-ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಮಾಹಿತಿ ಸರ್ಕಾರದ ಬಳಿ ಇರಬೇಕು. ಆಗ ಹಿಂದುಳಿದ ಜನರಿಗೆ ಸೌಲಭ್ಯಗಳನ್ನು ಕೊಡಲು ಸಾಧ್ಯವಾಗುತ್ತದೆ. ಕಾರ್ಯಕ್ರಮಗಳನ್ನ ರೂಪಿಸಲು ಸಾಧ್ಯವಾಗಲಿದೆ. ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಮಾತುಗಳಿಗೆ ಕಿವಿಗೊಡಬೇಡಿ ಎಲ್ಲರೂ ತಪ್ಪದೇ ಭಾಗವಹಿಸುವಂತೆ ಮನವಿ ಮಾಡಿದರು.