ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿರುವ ಎಸ್ಐಟಿ ಅಧಿಕಾರಿಗಳು ಸೋಮವಾರ ಚಿನ್ನಯ್ಯನ ಪತ್ನಿ ಮಲ್ಲಿಕಾ ಮತ್ತು ಚಿನ್ನಯ್ಯನ ಸಹೋದರಿ ರತ್ನಾ ಅವರ ವಿಚಾರಣೆ ನಡೆಸಿದ್ದಾರೆ.
ಮಂಗಳೂರು (ಅ.14): ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿರುವ ಎಸ್ಐಟಿ ಅಧಿಕಾರಿಗಳು ಸೋಮವಾರ ಚಿನ್ನಯ್ಯನ ಪತ್ನಿ ಮಲ್ಲಿಕಾ ಮತ್ತು ಚಿನ್ನಯ್ಯನ ಸಹೋದರಿ ರತ್ನಾ ಅವರ ವಿಚಾರಣೆ ನಡೆಸಿದ್ದಾರೆ. ಈ ಇಬ್ಬರಿಗೂ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿತ್ತು. ಅದರಂತೆ ಚಿನ್ನಯ್ಯನ ಪತ್ನಿ ಮಲ್ಲಿಕಾ ಸೋಮವಾರ ಬೆಳಗ್ಗೆಯೇ ಎಸ್‌ಐಟಿ ಕಚೇರಿ ಆಗಮಿಸಿದ್ದರು. ಬುರುಡೆ ಪ್ರಕರಣದ ಷಡ್ಯಂತ್ರಕ್ಕೆ ಸಂಬಂಧಿಸಿದಂತೆ ಚಿನ್ನಯ್ಯನ ಜತೆ ಸಂಪರ್ಕದಲ್ಲಿದ್ದವರ ಮಾಹಿತಿ, ಸೌಜನ್ಯ ಹೋರಾಟಗಾರ ಸಂಪರ್ಕ ಸೇರಿದಂತೆ, ಚಿನ್ನಯ್ಯ ಹಾಗೂ ಆತನ ಪತ್ನಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿರುವ ಕುರಿತು ವಿಚಾರಣೆ ನಡೆಸಿರುವುದಾಗಿ ತಿಳಿದುಬಂದಿದೆ.
ಜಯಂತ್, ಗಿರೀಶ್ ಮಟ್ಟೆಣ್ಣವರ್, ವಿಠಲ ಗೌಡ, ಮಹೇಶ್ ಶೆಟ್ಟಿ ತಿಮರೋಡಿ ಅವರೊಂದಿಗಿನ ಚಿನ್ನಯ್ಯನ ನಂಟಿನ ಬಗ್ಗೆಯೂ ಮಾಹಿತಿ ಕಲೆಹಾಕಿದ್ದಾರೆ. ಈ ನಡುವೆ ಚಿನ್ನಯ್ಯನ ಸಹೋದರಿ ರತ್ನಾ ಕೂಡ ವಿಚಾರಣೆಗೆ ಹಾಜರಾಗಿದ್ದಾರೆ. ಈಕೆ ಉಜಿರೆಯಲ್ಲೇ ಕೆಲಸ ಮಾಡಿಕೊಂಡಿದ್ದು, ಪತಿ ಮೃತಪಟ್ಟಿದ್ದಾರೆ. ಈಕೆ ಹಿಂದೆ ಚಿನ್ನಯ್ಯನ ಜತೆ ವಾಸವಾಗಿದ್ದರು ಎನ್ನಲಾಗಿದ್ದು, ಈ ಕುರಿತಾದ ಸಮಗ್ರ ಮಾಹಿತಿ ಸೇರಿದಂತೆ ಬುರುಡೆ ಪ್ರಕರಣದ ಪೂರಕ ಮಾಹಿತಿಗಳನ್ನು ಎಸ್‌ಐಟಿ ಅಧಿಕಾರಿಗಳು ಪಡೆದುಕೊಂಡಿದ್ದಾರೆ.
ಕೇಸ್ ರದ್ದು ಕೋರಿ ತಿಮರೋಡಿ ಹೈಕೋರ್ಟ್‌ಗೆ
ಅಕ್ರಮ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದ ಬೆನ್ನಲ್ಲೇ ತಿಮರೋಡಿ ಪರ ವಕೀಲರು ಅಕ್ರಮ ಶಸ್ತ್ರಾಸ್ತ್ರ ಕೇಸ್ ರದ್ದುಗೊಳಿಸುವಂತೆ ಕೋರಿ ರಾಜ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣ ರದ್ದುಪಡಿಸಿ ಮುಂದಿನ ಎಲ್ಲ ಕ್ರಮಗಳಿಗೆ ತಡೆ ನೀಡಲು ತಿಮರೋಡಿ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಪ್ರಸ್ತುತ ಕಳೆದ 25 ದಿನಗಳಿಂದ ಮಹೇಶ್ ಶೆಟ್ಟಿ ತಿಮರೋಡಿ ತಲೆಮರೆಸಿಕೊಂಡಿದ್ದಾರೆ. ತಿಮರೋಡಿ ಮನೆಗೆ ಎಸ್‌ಐಟಿ: ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಮಹೇಶ್ ಶೆಟ್ಟಿ ತಿಮರೋಡಿ ಅವರ ಪುತ್ರಿಯ ಹೇಳಿಕೆ ದಾಖಲಿಸಲು ಎಸ್‌ಐಟಿ ತಂಡ ತಿಮರೋಡಿ ಅವರ ಉಜಿರೆಯ ನಿವಾಸಕ್ಕೆ ತೆರಳಿದ್ದು, ಪೂರಕ ಮಾಹಿತಿ ಕಲೆ ಹಾಕಿದ್ದಾರೆ.
