Channapatna mosque controversy: ಚನ್ನಪಟ್ಟಣದ ಮಸೀದಿಯೊಂದರಲ್ಲಿ ನಡೆದ ಗಂಧ ಮಹೋತ್ಸವದಲ್ಲಿ, ಪೊಲೀಸ್ ಸಿಬ್ಬಂದಿಯ ಮೇಲೆ ಹಣದ ಮಳೆ ಸುರಿಸಿದ ಘಟನೆ ನಡೆದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸರ್ಕಾರಿ ನೌಕರರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬಗ್ಗೆ ತೀವ್ರ ಚರ್ಚೆ.. 

ಚನ್ನಪಟ್ಟಣ (ಅ.18): ಚನ್ನಪಟ್ಟಣದ ದೊಡ್ಡ ಮಸೀದಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದ ಗಂಧ ಮಹೋತ್ಸವವು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿ, ತೀವ್ರ ಚರ್ಚೆಗೆ ಗುರಿಯಾಗಿದೆ.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಮಸೀದಿ ಆಡಳಿತ ಮಂಡಳಿಯಿಂದ ಹಾರ ಹಾಕಿ, ಟ್ರೋಫಿ ನೀಡಿ, ಬಳಿಕ 20 ರೂಪಾಯಿ ನೋಟುಗಳ ಹಣದ ಮಳೆ ಸುರಿಸಿದ ವೀಡಿಯೋ ವೈರಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ವೀವ್ಸ್ ಪಡೆದುಕೊಂಡಿವೆ. 

ಸರ್ಕಾರಿ ನೌಕರರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದಾ?

ಪೊಲೀಸರ ನಡವಳಿಕೆಯ ಬಗ್ಗೆ ಪರ-ವಿರೋಧದ ಚರ್ಚೆ ಜೋರಾಗಿದೆ. ಸರ್ಕಾರಿ ನೌಕರರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಸರಿಯೇ? ಪೊಲೀಸರ ಮೇಲೆ ಕರೆನ್ಸಿ ನೋಟುಗಳು ತೂರಾಡಬಹುದೇ? ಇದು ಕಾನೂನು ಉಲ್ಲಂಘನೆಯೇ? ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಚರ್ಚೆ ಹುಟ್ಟುಹಾಕಿದ್ದಾರೆ.

ಸರ್ಕಾರ ಕ್ರಮ ಜರುಗಿಸುತ್ತಾ?

ಈ ಘಟನೆಯನ್ನು ಆರೆಸ್ಸೆಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಪಿಡಿಒಗಳನ್ನು ಸರ್ಕಾರ ಅಮಾನತು ಮಾಡಿದ್ದ ಸಂದರ್ಭದೊಂದಿಗೆ ಹೋಲಿಕೆ ಮಾಡುತ್ತಾ, ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರು ಭಾಗಿಯಾಗಿದ್ದಕ್ಕೆ ಅಮಾನತು, ಆದರೆ ಇಲ್ಲಿ ಪೊಲೀಸ್ ಸಮವಸ್ತ್ರದಲ್ಲೇ ಧಾರ್ಮಿಕ ಕಾರ್ಯಕ್ರಮದಲ್ಲಿ ಹಾರ ತೂರಿಸಿ, ಹಣದ ಮಳೆ ಸುರಿಸಿಕೊಳ್ಳುತ್ತಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ, ಆದರೆ ಇದು ಏನು? ಎಂದು ಟ್ವಿಟರ್‌ನಲ್ಲಿ ಒಬ್ಬ ಬಳಕೆದಾರ ಬರೆದಿದ್ದಾರೆ. ಮತ್ತೊಬ್ಬರು, ' ಕಾನೂನು ಎಲ್ಲರಿಗೊಂದೇ ಎನ್ನುವ ಸರ್ಕಾರ ಇದೀಗ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಈಗ ಕ್ರಮ ಕೈಗೊಳ್ಳುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.