ಸರ್ಕಾರಿ ಕೋಟಾದ ಸೀಟುಗಳನ್ನು ಪಡೆದು ಪ್ರವೇಶಾತಿ ಪಡೆಯದ 351 ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರು (ಸೆ.17): ಸರ್ಕಾರಿ ಕೋಟಾದ ಸೀಟುಗಳನ್ನು ಪಡೆದು ಕಾಲೇಜುಗಳಲ್ಲಿ ಅಡ್ಮಿಷನ್ ಮಾಡದೆ ಕಳ್ಳಾಟ ಆಡಿದ 351 ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಶೋಕಾಸ್ ನೋಟಿಸ್ ಜಾರಿ ಮಾಡಿದೆ. CETಯ ಮೂರು ಸುತ್ತಿನ ಸೀಟು ಹಂಚಿಕೆಯ ಬಳಿಕವೂ ಈ ವಿದ್ಯಾರ್ಥಿಗಳು ಅಡ್ಮಿಷನ್ ಪಡೆಯದಿರುವುದರಿಂದ, ಈ ಸೀಟುಗಳು ಖಾಸಗಿ ಕಾಲೇಜುಗಳ ಮ್ಯಾನೇಜ್ಮೆಂಟ್ ಕೋಟಾಕ್ಕೆ ಪರಿವರ್ತನೆಯಾಗಿವೆ. ಇದರಿಂದ ಲಕ್ಷಾಂತರ ರೂಪಾಯಿ ಫೀಸ್ ಪಡೆದು ಖಾಸಗಿ ಕಾಲೇಜುಗಳು ಅಭ್ಯರ್ಥಿಗಳನ್ನು ಸೇರಿಸಿಕೊಳ್ಳುವ ಅವಕಾಶ ಪಡೆದಿವೆ ಎಂಬ ಆರೋಪ ಕೇಳಿಬಂದಿದೆ.
KEAಯಿಂದ ಕಠಿಣ ಕ್ರಮ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ 351 ಅಭ್ಯರ್ಥಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಇವರಿಗೆ ಬೇರೆ ಯಾವುದೇ ಕಾಲೇಜಿನಲ್ಲಿ ಸೀಟು ನೀಡದಂತೆ VTUಗೆ ಸೂಚನೆ ನೀಡಿದೆ. ಈ ಅಭ್ಯರ್ಥಿಗಳ ವಿವರಗಳನ್ನು VTUಗೆ ಸಲ್ಲಿಸಲಾಗಿದ್ದು, VTU ವ್ಯಾಪ್ತಿಯ ಕಾಲೇಜುಗಳಲ್ಲಿ ಸೀಟು ನೀಡದಂತೆ ತಡೆಯಾಜ್ಞೆ ಹೊರಡಿಸಲಾಗಿದೆ.
ಸಮಸ್ಯೆ ಏನು?
- ಸರ್ಕಾರಿ ಕೋಟಾದ ಸೀಟುಗಳನ್ನು ಬ್ಲಾಕ್ ಮಾಡಿ, ಖಾಸಗಿ ಕಾಲೇಜುಗಳಿಗೆ ಲಾಭ ಗಳಿಸುವ ದಂಧೆ ಶಂಕೆ.
- ಕಡಿಮೆ ರ‍್ಯಾಂಕ್ ಹೊಂದಿರುವ ವಿದ್ಯಾರ್ಥಿಗಳಿಗೆ ಸರ್ಕಾರಿ ಸೀಟು ಸಿಗದೆ ಅನ್ಯಾಯ.
- ಉಚಿತವಾಗಿ ಸರ್ಕಾರಿ ಕೋಟಾದಲ್ಲಿ ಸೇರಬೇಕಿದ್ದ ಅಭ್ಯರ್ಥಿಗಳ ಬದಲಿಗೆ, ಹೆಚ್ಚಿನ ಫೀಸ್ ಕೊಟ್ಟು ಮ್ಯಾನೇಜ್ಮೆಂಟ್ ಕೋಟಾದಲ್ಲಿ ಸೀಟು ಪಡೆಯುವ ಅವಕಾಶ.
- ಸೀಟ್ ಬ್ಲಾಕಿಂಗ್‌ಗೆ ಉತ್ತೇಜನ, ಇದರಿಂದ ಖಾಸಗಿ ಕಾಲೇಜುಗಳಿಗೆ ಸೀಟು ಉಳಿತಾಯ.
KEA ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಅವರ ಪ್ರಕಾರ, ಈ ಅಕ್ರಮಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಸೀಟುಗಳ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ಅವಕಾಶ ಕೊಡಿಸುವ ಗುರಿಯೊಂದಿಗೆ KEA ಈ ಕಾನೂನು ಕ್ರಮಕ್ಕೆ ಮುಂದಾಗಿದೆ.
