ರಾಜ್ಯ ಹಿಂದುಳಿದ ವರ್ಗಗಗಳ ಆಯೋಗ ಕಳೆದ ಸೆ. 22ರಿಂದ ನಡೆಸುತ್ತಿದ್ದ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ಶುಕ್ರವಾರ ಮುಕ್ತಾಯವಾಗಿದ್ದು, 6,13,83,908 ಜನರ ಮಾಹಿತಿ ಸಂಗ್ರಹಿಸಲಾಗಿದೆ.

ಬೆಂಗಳೂರು (ನ.01): ರಾಜ್ಯ ಹಿಂದುಳಿದ ವರ್ಗಗಗಳ ಆಯೋಗ ಕಳೆದ ಸೆ. 22ರಿಂದ ನಡೆಸುತ್ತಿದ್ದ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ಶುಕ್ರವಾರ ಮುಕ್ತಾಯವಾಗಿದ್ದು, 6,13,83,908 ಜನರ ಮಾಹಿತಿ ಸಂಗ್ರಹಿಸಲಾಗಿದೆ. 2025ಕ್ಕೆ ರಾಜ್ಯದಲ್ಲಿ 6,85,38000 ಜನರು ಇರಬಹುದೆಂದು ಆಯೋಗ ಅಂದಾಜಿಸಿತ್ತು. ಆದರೆ 6.13 ಕೋಟಿ ಜನ ಮಾತ್ರ ಮಾಹಿತಿ ನೀಡಿದ್ದಾರೆ. 4,22,258 ಕುಟುಂಬಗಳು ಮಾಹಿತಿ ನೀಡಲು ನಿರಾಕರಿಸಿವೆ. ಅಲ್ಲದೆ, 34,49,681 ಮನೆಗಳು ಖಾಲಿ ಇಲ್ಲವೇ ಬೀಗ ಹಾಕಿದ್ದರಿಂದ ಸಮೀಕ್ಷೆ ಮಾಡಲಾಗಿಲ್ಲ ಎಂದು ಆಯೋಗದ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ.10ರವರೆಗೆ ಆನ್‌ಲೈನ್‌ನಲ್ಲಿ ಅವಕಾಶ: ಮನೆ ಮನೆ ಸಮೀಕ್ಷೆ ಶುಕ್ರವಾರ ಅಂತ್ಯವಾದರೂ ವಿವಿಧ ಕಾರಣದಿಂದ ಸಮೀಕ್ಷೆಯಲ್ಲಿ ಭಾಗವಹಿಸದವರಿಗೆ ಆನ್‌ಲೈನ್‌ ಮೂಲಕ ಸ್ವಯಂ ಮಾಹಿತಿ ನೀಡಲು ನ.10ರ ವರೆಗೆ ಅವಕಾಶ ನೀಡಲಾಗಿದೆ. ಆನ್‍ಲೈನ್ ಮೂಲಕ https://kscbcselfdeclaration.karnataka.gov.in ಲಿಂಕ್ ಮೂಲಕ ಸಮೀಕ್ಷೆಯಲ್ಲಿ ಸ್ವಯಂ ಪಾಲ್ಗೊಳ್ಳಬಹುದಾಗಿದೆ. ನಾಗರಿಕರು ಸ್ವಯಂ ದೃಢೀಕರಣದ ಮೂಲಕ ಸಮೀಕ್ಷೆಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 8050770004 ಸಂಪರ್ಕಿಸಬಹುದು ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.

ರಾಜ್ಯದ್ಯಂತ ಗ್ರೇಟರ್ ಬೆಂಗಳೂರು (ಜಿಬಿಎ) ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಶುಕ್ರವಾರದ ವೇಳೆಗೆ ಶೇ.97.51ರಷ್ಟು ಪೂರ್ಣಗೊಂಡಿದೆ. ಜಿಬಿಎ ಸೇರಿ ಒಟ್ಟಾರೆ ಸರಾಸರಿ ಶೇ.89.56 ಸಾಧನೆ ಆಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು?

ಮಂಡ್ಯ - ಶೇ.110.23
ತುಮಕೂರು - ಶೇ.106.88
ಹಾವೇರಿ- ಶೇ. 103.68
ಚಿತ್ರದುರ್ಗ - ಶೇ. 103.56
ಚಿಕ್ಕಮಗಳೂರು- ಶೇ. 102.64

ಕಡಿಮೆ ಪ್ರಗತಿ ದಾಖಲಿಸಿದ ಜಿಲ್ಲೆಗಳು
ಬೆಂಗಳೂರು ದಕ್ಷಿಣ : ಶೇ. 86.34
ಬೆಂಗಳೂರು ನಗರ: ಶೇ. 87.4
ಕೋಲಾರ: ಶೇ. 91.66
ಬೀದರ್‌: ಶೇ. 91.95
ಧಾರವಾಡ: ಶೇ. 92