ರಾಜ್ಯದಲ್ಲಿ ಅರ್ಹರಿಗೆ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಲು, 13 ಲಕ್ಷ ಅನರ್ಹ ಕಾರ್ಡ್‌ಗಳನ್ನು ರದ್ದುಗೊಳಿಸುವ ಕಾರ್ಯಾಚರಣೆಗೆ ಪ್ರತಿಪಕ್ಷಗಳ ಸಹಕಾರ ಅಗತ್ಯವಿದೆ. ವೈದ್ಯಕೀಯ ತುರ್ತು ಸಂದರ್ಭಗಳಿಗೆ 24 ಗಂಟೆಗಳಲ್ಲಿ ಕಾರ್ಡ್ ಒದಗಿಸಲು ಪ್ರತ್ಯೇಕ ಪೋರ್ಟಲ್ ವ್ಯವಸ್ಥೆ ಮಾಡಲಾಗುತ್ತಿದೆ.
ವಿಧಾನಸಭೆ (ಆ.15): ರಾಜ್ಯದಲ್ಲಿ ಅರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲು ಅನರ್ಹ 13 ಲಕ್ಷ ಬಿಪಿಎಲ್ ಕಾರ್ಡ್ ರದ್ದುಪಡಿಸಲು ಪ್ರತಿಪಕ್ಷ ಸದಸ್ಯರು ಒಪ್ಪಿದರೆ ಕಾರ್ಯಾಚರಣೆ ಶುರು ಮಾಡುತ್ತೇವೆ. ಅಲ್ಲಿಯವರೆಗೆ ವೈದ್ಯಕೀಯ ತುರ್ತು ಅಗತ್ಯಗಳಿಗೆ ಬಿಪಿಎಲ್ ಅಡಿ ಸೇವೆ ಪಡೆಯಲು 24 ಗಂಟೆಗಳಲ್ಲಿ ಕಾರ್ಡ್ ನೀಡಲು ಪ್ರತ್ಯೇಕ ಪೋರ್ಟಲ್ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಡಾ। ವೈ.ಭರತ್‌ಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರ ಹೊಸದಾಗಿ ಕಳೆದ ಹಲವು ವರ್ಷಗಳಿಂದ ಬಿಪಿಎಲ್ ಕಾರ್ಡ್ ನೀಡುತ್ತಿಲ್ಲ. ಇದರಿಂದ ಲಕ್ಷಾಂತರ ಮಂದಿ ಬಡವರಿಗೆ ವೈದ್ಯಕೀಯ ತುರ್ತು ಸೇವೆ ಸಿಗದಂತೆ ಪರದಾಡುತ್ತಿದ್ದಾರೆ ಎಂದರು.
ಇದಕ್ಕೆ ಉತ್ತರಿಸಿದ ಸಚಿವ ಕೆ.ಎಚ್. ಮುನಿಯಪ್ಪ, ವೈದ್ಯಕೀಯ ಚಿಕಿತ್ಸೆಯ ತುರ್ತು ಸಂದರ್ಭಕ್ಕೆ ಸಮಸ್ಯೆಯಾಗುತ್ತಿಲ್ಲ. ಅದಕ್ಕಾಗಿ ಅನುಕೂಲವಾಗಲು ಪ್ರತ್ಯೇಕ ಬಿಪಿಎಲ್ ಸೌಲಭ್ಯ ಕಾರ್ಡ್ (ಆರೋಗ್ಯ ಕಾರ್ಡ್) ನೀಡುವ ವ್ಯವಸ್ಥೆ ಮಾಡಿದ್ದೇವೆ ಎಂದು ಉತ್ತರ ನೀಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಕೆ.ಗೋಪಾಲಯ್ಯ, ವೈದ್ಯಕೀಯ ತುರ್ತು ಸೇವೆಗೂ ಬಿಪಿಎಲ್ ಅಡಿ ಸೇವೆ ಪಡೆಯಲು ಕಾರ್ಡ್ ನೀಡುತ್ತಿಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ತಿಂಗಳಿಗೊಮ್ಮೆ ಅವಕಾಶ ನೀಡಲಾಗುತ್ತದೆ. ಅದು ಜನರಿಗೆ ತಿಳಿಯುವುದಿಲ್ಲ. ಈ ವ್ಯವಸ್ಥೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.
24 ಗಂಟೆಗಳಲ್ಲಿ ಕಾರ್ಡ್:
ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ವೈದ್ಯಕೀಯ ಸೇವೆಗೆ ತುರ್ತಾಗಿ ಕಾರ್ಡ್ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ಪೋರ್ಟಲ್ ಶುರು ಮಾಡುತ್ತಿದ್ದು ವಿವರಗಳೊಂದಿಗೆ ಅರ್ಜಿ ಸಲ್ಲಿಸಿದ 24 ಗಂಟೆಗಳಲ್ಲಿ ಕಾರ್ಡ್ ನೀಡುತ್ತೇವೆ. ಈ ಬಗ್ಗೆ ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಏನಿದು ಆರೋಗ್ಯ ಕಾರ್ಡ್?
ತುರ್ತು ಚಿಕಿತ್ಸೆ ಅಗತ್ಯವಿರುವ ಬಡತನ ರೇಖೆಗಿಂತ ಕೆಳಗಿರುವ ಸಾರ್ವಜನಿಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಅವರಿಗೆ 24 ಗಂಟೆಯೊಳಗೆ ತುರ್ತಾಗಿ ಆರೋಗ್ಯ ಕಾರ್ಡ್ ವಿತರಿಸಲಾಗುವುದು. ಈ ಕಾರ್ಡ್ ಅಡಿ ಬಿಪಿಎಲ್ ಕಾರ್ಡ್‌ದಾರರು ಪಡೆಯುವ ಆರೋಗ್ಯ ಸೇವೆ ಪಡೆಯಬಹುದು. ಇದಕ್ಕೆ ವೈದ್ಯರ ಸಲಹಾ ಚೀಟಿ ಜತೆ ಸಂಬಂಧಪಟ್ಟ ದಾಖಲೆ ಸಲ್ಲಿಸಬೇಕು. ಅದನ್ನು ಪರಿಶೀಲಿಸಿ ಆಯಾ ಜಿಲ್ಲಾ ಹಾಗೂ ತಾಲೂಕಿನ ಆಹಾರ ಇಲಾಖೆ ಅಧಿಕಾರಿ ಆರೋಗ್ಯ ಕಾರ್ಡ್ ವಿತರಿಸುತ್ತಾರೆ.
ಇನ್ನೆರಡು ದಿನದಲ್ಲಿ ಈ ಕಾರ್ಡ್ ವಿತರಿಸುವ ಸಂಬಂಧ ಪ್ರತ್ಯೇಕ ಪೋರ್ಟಲ್ ಮಾಡಿ ಆನ್‌ಲೈನ್ ಸೇವೆ ಶುರು ಮಾಡಲಾಗುವುದು ಎಂದು ಆಹಾರ ಇಲಾಖೆ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಪ್ರತಿಪಕ್ಷಗಳು ಸಹಕರಿಸಿದರೆ 13 ಲಕ್ಷ ಅನರ್ಹ ಕಾರ್ಡ್ ರದ್ದು
ರಾಜ್ಯದಲ್ಲಿ 13 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್‌ದಾರರು ಇದ್ದಾರೆ. ಪ್ರಸ್ತುತ 3 ಲಕ್ಷ ಮಂದಿ ಅರ್ಜಿ ಹಾಕಿ ಅರ್ಹ ಬಡವರು ಕಾರ್ಡ್‌ಗಾಗಿ ಕಾಯುತ್ತಿದ್ದಾರೆ. ಅನರ್ಹ ಕಾರ್ಡ್ ರದ್ದು ಮಾಡಿದರೆ ಮಾತ್ರ ಹೊಸ ಅರ್ಹರಿಗೆ ಅವಕಾಶ ಮಾಡಿಕೊಡಬಹುದು. ಇದಕ್ಕೆ ಪ್ರತಿಪಕ್ಷಗಳು ಸಹಕರಿಸಿದರೆ ಅನರ್ಹ ಕಾರ್ಡ್ ರದ್ದು ಮಾಡುತ್ತೇವೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ಅನರ್ಹ ಕಾರ್ಡ್ 100 ತೆಗೆಯುವಾಗ ಒಬ್ಬ ಅರ್ಹರ ಕಾರ್ಡ್ ಕೂಡ ತೆಗೆದಿರಬಹುದು. ಅದನ್ನು ಮತ್ತೆ ಅರ್ಜಿ ಸಲ್ಲಿಸಿದರೆ ನೀಡುತ್ತೇವೆ. ಆದರೆ ಅದೇ ಕಾರಣ ಮುಂದಿಟ್ಟುಕೊಂಡು ಪರಿಷ್ಕರಣೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹೇಳಿದರು.
