ನಿಮ್ಮ ತಂದೆ RSS ಕಾರ್ಯ ಮೆಚ್ಚಿ ಸಹಕಾರ ನೀಡಿರುವುದು ಮರೆತಿದ್ದೀರಾ? ಪ್ರಿಯಾಂಕ್ ಖರ್ಗೆ ಬಿಜೆಪಿ ಪ್ರಶ್ನೆ ಮಾಡಿದೆ. 2002ರ ಘಟನೆ ಫೋಟೋ ಪೋಸ್ಟ್ ಮಾಡಿರುವ ಬಿಜೆಪಿ, ಹೈಕಮಾಂಡ್ ಮೆಚ್ಚಿಸಲು ಪ್ರಿಯಾಂಕ್ ಖರ್ಗೆ ನಾಟಕವಾಡುತ್ತಿದ್ದೀರಾ ಎಂದು ಪ್ರಶ್ನಿಸಿದೆ.
ಬೆಂಗಳೂರು (ಅ.12) ಆರ್‌ಎಸ್ಎಸ್ ಸಂಘಟನೆ ಚಟುವಟಿಕೆ ನಿಷೇಧಿಸಲು ಪತ್ರ ಬರೆಯುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಬಿಜೆಪಿ ನಾಯಕರು ಸೇರಿದಂತೆ ಹಲವರು ಪ್ರಿಯಾಂಕ್ ಖರ್ಗೆ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಆದರೆ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಈ ಬೆಳವಣಿಗೆ ನಡುವೆ ಕರ್ನಾಟಕ ಬಿಜೆಪಿ ಹಳೇ ಫೋಟೋ ಒಂದನ್ನು ಹಂಚಿಕೊಂಡು, ಪ್ರಿಯಾಂಕ್ ಖರ್ಗೆಗೆ ನೆನಪಿಸುವ ಪ್ರಯತ್ನ ಮಾಡಿದೆ. 2002ರಲ್ಲಿ ಮಲ್ಲಿಕಾರ್ಜುನ ಖರ್ಗೆ ಆರ್‌ಎಸ್ಎಸ್ ಶಿಬಿರಕ್ಕೆ ಭೇಟಿ ನೀಡಿ ಮೆಚ್ಚುಗೆ ಮಾತನಾಡಿದ ಫೋಟೋವನ್ನು ಹಂಚಿ, ಪ್ರಿಯಾಂಕ್ ಖರ್ಗೆ ಇದನ್ನು ನೀವು ಮರೆತಿದ್ದೀರಾ ಎಂದು ಪ್ರಶ್ನಿಸಿದೆ.
ಇಲ್ಲೊಮ್ಮೆ ನೋಡಿ ಪ್ರಿಯಾಂಕ್ ಖರ್ಗೆ
ಇಂದು ನೀವು ಆರೆಸ್ಸೆಸ್ ವಿರುದ್ಧ ವಿಷ ಕಾರುತ್ತಾ ಸಂಘದ ಚಟುವಟಿಕೆ “ನಿಷೇಧಿಸಬೇಕು” ಎಂದು ಹೇಳುತ್ತಿದ್ದೀರ. ಆದರೆ 2002ರಲ್ಲಿ ಬೆಂಗಳೂರಿನ ನಾಗವಾರದಲ್ಲಿ ನಡೆದ ಸಮರಸತಾ ಸಂಗಮ ಕಾರ್ಯಕ್ರಮದ ಸಮಯದಲ್ಲಿ, ಅಂದು ಗೃಹಸಚಿವರಾಗಿದ್ದ ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಸ್ವತಃ ಆ ಶಿಬಿರಕ್ಕೆ ಭೇಟಿ ನೀಡಿ, ಆರೆಸ್ಸೆಸ್‌ನ ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿಕೊಂಡು, ಪೂರ್ಣ ಸಹಕಾರ ನೀಡಿದ್ದರು ಎಂಬುದನ್ನು ಮರೆತಿದ್ದೀರಾ? ನೀವು ಇಂದು ಹೈಕಮಾಂಡ್ ಮೆಚ್ಚಿಸಲು ನಾಟಕವಾಡುತ್ತಿದ್ದೀರಾ? ಮೊದಲು ಮನೆಯ ಇತಿಹಾಸ ತಿಳಿದು ನಂತರ ರಾಷ್ಟ್ರಸೇವಕರ ಬಗ್ಗೆ ಮಾತನಾಡಿ ಎಂದು ಕರ್ನಾಟಕ ಬಿಜೆಪಿ ಸೋಶಿಯಲ್ ಮೀಡಿಯಾ ಮೂಲಕ ಪ್ರಶ್ನಿಸಿದೆ.
ಬಿಜೆಪಿ ಕಾಂಗ್ರೆಸ್ ನಡುವೆ ವಾರ್
ಆರ್‌ಎಸ್ಎಸ್ ಚಟುವಟಿಕೆ ಬ್ಯಾನ್ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮಾತಿನ ಯುದ್ಧವೇ ನಡೆಯುತ್ತಿದೆ. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಪ್ರಿಯಾಂಕ್ ಖರ್ಗೆ, ಬಿಜೆಪಿ ನಾಕಕರಿಗೆ ಆರ್‌ಎಸ್ಎಸ್ ವ್ಯಾಟ್ಸಾಪ್ ಇತಿಹಾಸ ತಿಳಿಸುತ್ತಿದೆ. ಈ ನಾಯಕರು ಯಾರೂ ನೈಜ ಇತಿಹಾಸ ಓದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಇತಿಹಾಸದ ಪಾಠ ಮಾಡಿದ್ದಾರೆ. ವೀರ ಸಾರ್ವಕರ್ ಸೇರಿದಂತೆ ಹಲವು ವಿಚಾರಗಳನ್ನು ಮಂದಿಟ್ಟಿರುವ ಪ್ರಿಯಾಂಕ್ ಖರ್ಗೆ, ರಾಷ್ಟ್ರ ಕುವೆಂಪು ನಾಡಗೀತೆ ಸಾಲುಗಳನ್ನು ಪೋಸ್ಟ್ ಮಾಡಿ ಅರ್ಥವಾಯಿತಾ ಅಧ್ಯಕ್ಷರೇ ಎಂದು ಬಿವೈ ವಿಜಯೇಂದ್ರಗೆ ಟಾಂಗ್ ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ ಆರ್‌ಎಸ್ಎಸ್ ಚಟುವಟಿಕೆ ನಿಷೇಧಿಸಲು ಸಿಎಂಗೆ ಪತ್ರ
ಆರ್‌ಎಸ್ಎಸ್ ಚಟುವಟಿಕೆಯನ್ನು ನಿಷೇಧಿಸಲು ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಆರ್‌ಎಸ್ಎಸ್ ಚಟುವಟಿಕೆ ನಿಷೇಧಿಸಲು ಆಗ್ರಹಿಸಿದ್ದಾರೆ. ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸಲು ಸಂವಿಧಾನವೇ ನಮಗೆ ಶಕ್ತಿಯನ್ನು ಮತ್ತು ಅಧಿಕಾರವನ್ನು ನೀಡುತ್ತದೆ.ಆರ್ಎಸ್ಎಸ್ ಪ್ರತಿಪಾದಿಸುವ ಮೂಲಭೂತವಾದಿ ಸಿದ್ದಾಂತದ ಪರಿಣಾಮದಿಂದಲೇ ಇಂದು ನ್ಯಾಯಾಂಗದ ಮುಖ್ಯಸ್ಥರ ಮೇಲೆ ಶೂ ಎಸೆಯುವಂತಹ ವಾತಾವರಣ ಸೃಷ್ಟಿಯಾಗಿದೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಿಂದಿಸುವ ಮನಸ್ಥಿತಿ ಬೆಳೆದಿದೆ. ಮಕ್ಕಳು ಹಾಗೂ ಯುವ ಸಮುದಾಯದ ಮೇಲೆ ನಾಕಾರಾತ್ಮ ಪರಿಣಾಮಗಳನ್ನು ಉಂಟುಮಾಡಲು ಯತ್ನಿಸುವ ಆರ್ಎಸ್ಎಸ್ ಪ್ರಯತ್ನವನ್ನು ತಡೆಯುವ, ಸಂವಿಧಾನದ ಆಶಯಗಳನ್ನು, ಏಕತೆ, ಸಮಾನತೆ, ಸಮಗ್ರತೆಯನ್ನು ಎತ್ತಿ ಹಿಡಿಯುವ ಉದ್ದೇಶದೊಂದಿಗೆ ಎಲ್ಲಾ ಸರ್ಕಾರಿ ಸಾರ್ವಜನಿಕ ಪ್ರದೇಶದಲ್ಲಿ ಆರ್ಎಸ್ಎಸ್ ನ ಚಟವಟಿಕೆಗಳನ್ನು ನಿರ್ಬಂಧಿಸಿ ಎಂದು ಸಿಎಂಗೆ ಪತ್ರ ಬರೆದಿದ್ದಾರೆ.
