ಬೆಂಗಳೂರಿನಲ್ಲಿ ಮನೆಗೆ ನುಗ್ಗಿ ಮಹಿಳೆ ಮೇಲೆ ಗ್ಯಾಂಗ್ ರೇP ಪ್ರಕರಣ, ಮೂವರು ಆರೋಪಿಗಳು ಅರೆಸ್ಟ್ ಮಾಡಲಾಗಿದೆ. ಅರೆಸ್ಟ್ ಬಳಿಕ ಸ್ಫೋಟಕ ಮಾಹಿತಿ ಬಯಲಾಗಿದ್ದು, ಇನ್ನಿಬ್ಬರು ಆರೋಪಿಗಳಿಗೆ ಪೊಲೀಸರ ತನಿಖೆ ತೀವ್ರಗೊಂಡಿದೆ.

ಬೆಂಗಳೂರು (ಅ.22) ಬೆಂಗಳೂರಿನಲ್ಲಿ ತಡ ರಾತ್ರಿ ಮನೆಗೆ ನುಗ್ಗಿ ಗ್ಯಾಂಗ್ ರೇP ನಡೆಸಿದ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಯಾವ ಭಯವೂ ಇಲ್ಲದೆ ರಾತ್ರಿ ವೇಳೆ ಮನಗೆ ನುಗ್ಗಿ ಗಂಡಸರನ್ನು ಕಟ್ಟಿ ಹಾಕಿ, ಮಹಿಳೆಯನ್ನು ಎಳೆದೊಯ್ದು ನಡೆಸಿದ ಕೃತ್ಯ ಭದ್ರತೆ ಹಾಗೂ ಹೆಣ್ಣು ಮಕ್ಕಳ ಸುರಕ್ಷತೆ ಕುರಿತು ಪ್ರಶ್ನಿಸುವಂತೆ ಮಾಡಿದೆ. ಬೆಂಗಳೂರು ಗ್ರಾಮಾಂತರದ ಮಾದನಾಯಕನಹಳ್ಳಿಯಲ್ಲಿ ನಡೆದ ಈ ಘಟನೆಗೆ ತೀವ್ರ ಆಕ್ರೋಶಗಳು ವ್ಯಕ್ತವಾಗಿತ್ತು. ಇದೀಗ ಈ ಕೃತ್ಯ ಎಸಗಿದ ಆರೋಪಿಗಳ ಪೈಕಿ ಮೂವರು ಅರೆಸ್ಟ್ ಆಗಿದ್ದಾರೆ. ಇನ್ನಿಬ್ಬರಿಗಾಗಿ ಹುಡುಕಾಟ ತೀವ್ರಗೊಂಡಿದೆ.

ಇವರೇ ಕೃತ್ಯ ಎಸಗದಿ ಪಾಪಿಗಳು

ಮಾದನಾಯಕನಹಳ್ಳಿಯಲ್ಲಿ ನಡೆದ ಅತೀ ಭೀಕರ ಕೃತ್ಯದ ಮೂವರು ಆರೋಪಿಗಳು ಇದೀಗ ವಿಚಾರಣೆ ಎದುರಿಸುತ್ತಿದ್ದಾರೆ. ಕಾರ್ತಿಕ್, ಗ್ಲೇನ್ ಹಾಗೂ ಸುಯೋಗ್ ಬಂಧಿತ ಆರೋಪಿಗಳು. ಇವರ ಜೊತೆ ಇನ್ನಿಬ್ಬರು ಈ ಕೃತ್ಯದಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಪರಾರಿಯಾಗಿರುವ ಇಬ್ಬರು ಆರೋಪಿಗಳಿಗೆ ಹುಡುಕಾಟ ತೀವ್ರಗೊಂಡಿದೆ.

ಘಟನೆ ವಿವರಣೆ ನೀಡಿದ ಎಸ್‌ಪಿ ಬಾಬಾ

ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿಕೆ ಬಾಬಾ ಘಟನೆ ವಿವರಣೆ ನೀಡಿದ್ದಾರೆ. ನಿನ್ನೆ (ಅ.21) ರಾತ್ರಿ ಮಾದನಾಯಕನ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಾದನಾಯಕನಹಳ್ಳಿಯಲ್ಲಿ ವಾಸವಿದ್ದ ಪಶ್ಚಿಮ ಬಂಗಾಳ ಮೂಲದ ಮನೆಗೆ ಐವರು ಪಾಪಿಗಳು ನುಗ್ಗಿದ್ದಾರೆ. ಇಬ್ಬರು ಗಂಡಸರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಬಳಿಕ ಅವರನ್ನು ಕಟ್ಟಿ ಹಾಕಿ ಮಹಿಳೆಯನ್ನು ಎಳೆದೊಯ್ದು ಕೃತ್ಯ ಎಸಗಿದ್ದಾರೆ. ಐದು ಮಂದಿಯಿಂದ ಕೃತ್ಯ ನಡೆದಿದೆ ಎಂದು ಬಾಬಾ ಹೇಳಿದ್ದಾರೆ.

ಮಹಿಳೆ ಬಳಿ ಇದ್ದ 50 ಸಾವಿರ ನಗದು, ಮೊಬೈಲ್ ದೋಚಿ ಪರಾರಿ

ಮಹಿಳೆ ಮೇಲೆ ಎರಗಿದ ಈ ಪಾಪಿಗಳು ಬಳಿಕ ಮಹಿಳೆ ಮನೆಯಲ್ಲಿಟ್ಟಿದ್ದ 50,000 ರೂಪಾಯಿ ನಗದು ಹಣ ಹಾಗೂ ಮೊಬೈಲ್ ಫೋನ್ ದೋಚಿ ಗ್ಯಾಂಗ್ ಪರಾರಿಯಾಗಿದೆ. ಇದು ಗಂಭೀರ ಪ್ರಕರಣವಾಗಿದೆ. ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ. ಇನ್ನಿಬ್ಬರನ್ನು ಶೀಘ್ರದಲ್ಲೇ ಬಂಧಿಸುತ್ತೇವೆ. ಪ್ರಕರಣ ಗಂಭೀರವಾಗಿರುವುದರಿಂದ ಡಿವೈಎಸ್ ನೆಲಮಂಗಲದ ಅಧಿಕಾರಿಯಿಂದ ತನಿಖೆ ಮಾಡಿಸಲಾಗುತ್ತಿದೆ ಎಂದು ಬಾಬಾ ಹೇಳಿದ್ದಾರೆ.

ಮೂರು ತಂಡಗಳ ರಚನೆ

ಈ ಪ್ರಕರಣದ ಆರೋಪಿಗಳ ಪತ್ತೆ ಹಚ್ಚಲು ಮೂರು ತಂಡಗಳನ್ನು ರಚಿಸಲಾಗಿದೆ. ಮೂರು ತಂಡದಳ ಕ್ಷಿಪ್ರ ಕಾರ್ಯಾಚರಣೆಯಿಂದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನಿಬ್ಬರ ಹುಡುಕಾಟ ನಡೆಯುತ್ತಿದೆ. ಆರೋಪಿಗಳ ಫೋಟೋಗಳನ್ನು ತೋರಿಸಿದಾಗ ವಿವರ ಸಮೇತ ನೀಡುತ್ತಿದ್ದಾರೆ. ಸಂತ್ರಸ್ತೆಗೆ ಈ ಆರೋಪಿಗಳ ಪರಿಚಯವಿದೆಯಾ ಅನ್ನೋ ಕುರಿತು ತನಿಖೆ ನಡೆಯಬೇಕಿದೆ. ಗಾಯಗೊಂಡ ಇಬ್ಬರು ಪುರುಷರಿಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಾಬಾ ಹೇಳಿದ್ದಾರೆ.