ರಿಂಗ್ ರೋಡ್ ಬಳಿ ₹300 ಕೋಟಿ ಮೌಲ್ಯದ ಸರ್ಕಾರಿ ಆಸ್ತಿಯನ್ನು ಖಾಸಗಿ ಶಾಲೆಗೆ ಲೀಸ್ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಶಾಸಕ ಮುನಿರತ್ನ ಈ ಕ್ರಮವನ್ನು ಖಂಡಿಸಿದ್ದು, ಸರ್ಕಾರದ ಧೋರಣೆಯನ್ನು ಪ್ರಶ್ನಿಸಿದ್ದಾರೆ. ಮೆಟ್ರೋ ಯೋಜನೆಗೆ ಅಡ್ಡಿಯಾಗುವ ಈ ಲೀಸ್ ವಿರುದ್ಧ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ಕೆಂಗಲ್ ಗೇಟ್: ಬೆಂಗಳೂರು ನಗರದ ರಿಂಗ್ ರೋಡ್ ಬಳಿ ಇರುವ ಸುಮಾರು ₹300 ಕೋಟಿ ಮೌಲ್ಯದ ಸರ್ಕಾರಿ ಆಸ್ತಿ ಖಾಸಗಿ ಸಂಸ್ಥೆಗೆ ಲೀಸ್‌ಗೆ ನೀಡಿರುವ ಪ್ರಕರಣವು ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ಶಾಸಕ ಮುನಿರತ್ನ ಗಂಭೀರ ಆರೋಪ ಹೊರಿಸಿದ್ದಾರೆ. ಈ ಭೂಮಿಯನ್ನು ಮದರ್ ತೇರೇಸಾ ಶಾಲೆಗೆ ಲೀಸ್ ಮೂಲಕ ಹಸ್ತಾಂತರಿಸಲಾಗಿದೆ. ಆದರೆ, ಆ ಶಾಲೆಯ ಪಕ್ಕದಲ್ಲಿಯೇ ಮೆಟ್ರೋ ಸ್ಟೇಷನ್ ನಿರ್ಮಾಣದ ಯೋಜನೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿಯೇ, ಶಾಲೆಗೆ ಲೀಸ್ ನೀಡಿರುವ ಹೆಸರಿನಲ್ಲಿ ಪಕ್ಕದ ಜಾಗವನ್ನೂ ಒತ್ತುವರಿ ಮಾಡಿಕೊಂಡು, ಸುಮಾರು ₹150 ಕೋಟಿ ಮೌಲ್ಯದ ಜಾಗವನ್ನು ಅಕ್ರಮವಾಗಿ ಕಬಳಿಸುವ ಪ್ರಯತ್ನ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಹಕ್ಕುಚ್ಯುತಿ ಮನವಿ ಸಲ್ಲಿಕೆ
ಈ ಪ್ರಕರಣದ ಕುರಿತು ನಾನು ಈಗಾಗಲೇ ಹಕ್ಕುಚ್ಯುತಿ ಮನವಿ ಸಲ್ಲಿಸಿದ್ದೇನೆ. ಸರ್ಕಾರದವರು ಯಾವುದೇ ಕಾರಣಕ್ಕೂ ಲೀಸ್ ಮುಂದುವರಿಯುವುದಿಲ್ಲ ಎಂದು ನನಗೆ ಭರವಸೆ ನೀಡಿದ್ದರು. ಬೆಳಗಾವಿ ಅಧಿವೇಶನದಲ್ಲಿಯೇ ಸದನದಲ್ಲಿ ಸ್ಪಷ್ಟವಾಗಿ ಹೇಳಿದ್ದು ‘ಸರ್ಕಾರಿ ಜಾಗವನ್ನು ಸರ್ಕಾರವೇ ವಾಪಸು ಪಡೆದುಕೊಳ್ಳುತ್ತದೆ, ಶಾಲೆಗೆ ನೀಡುವುದಿಲ್ಲ’ ಎಂದು. ಆದರೆ ನಂತರ ಕ್ಯಾಬಿನೆಟ್‌ನಲ್ಲಿ ಲೀಸ್‌ಗೆ ಅನುಮೋದನೆ ನೀಡಿರುವುದು ಅತ್ಯಂತ ಗಂಭೀರ ಸಂಗತಿ ಎಂದು ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ, ಡಿಸಿಎಂ ಸಭೆಯಲ್ಲಿ ಒತ್ತಾಯ
“ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಸಭೆಯಲ್ಲಿಯೇ ನಾನು ಈ ನಿರ್ಧಾರವನ್ನು ವಾಪಸು ಪಡೆಯಬೇಕೆಂದು ಒತ್ತಾಯಿಸಿದ್ದೇನೆ. ಆ ಜಾಗದಲ್ಲಿ ಮುತ್ಯಲ್ ನಗರ ಮೇಟ್ರೋ ಸ್ಟೇಷನ್ ನಿರ್ಮಾಣವಾಗಬೇಕು, ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಮತ್ತು ಸುಮಾರು ₹300 ಕೋಟಿ ಮೌಲ್ಯದ ಸರ್ಕಾರಿ ಆಸ್ತಿ ಸರ್ಕಾರದ ಸ್ವಾಧೀನಕ್ಕೆ ವಾಪಸು ಬರಬೇಕು” ಎಂದು ಅವರು ಆಗ್ರಹಿಸಿದರು.
ಈ ಬೆಳವಣಿಗೆಯಿಂದ, ಸರ್ಕಾರಿ ಆಸ್ತಿಯನ್ನು ಖಾಸಗಿ ಸಂಸ್ಥೆಗಳಿಗೆ ಲೀಸ್ ನೀಡುವ ಸರ್ಕಾರದ ಧೋರಣೆಯೇ ಪ್ರಶ್ನೆಗೆ ಒಳಗಾಗಿದೆ. ಸ್ಥಳೀಯರು ಸಹ ಈ ವಿಷಯದ ಬಗ್ಗೆ ಚರ್ಚೆ ನಡೆಸುತ್ತಿದ್ದು, ಜನೋಪಯೋಗಿ ಯೋಜನೆಗಳ ಬದಲು ಸರ್ಕಾರಿ ಆಸ್ತಿಯನ್ನು ಖಾಸಗಿ ಶಾಲೆಗೆ ಲಾಭವಾಗುವಂತೆ ಬಳಸಲಾಗುತ್ತಿದೆಯೇ? ಎಂಬ ಅನುಮಾನ ಹೆಚ್ಚುತ್ತಿದೆ. ಇದರಿಂದ ಸ್ಪಷ್ಟವಾಗುತ್ತಿರುವುದೇನೆಂದರೆ ಸರ್ಕಾರಿ ಆಸ್ತಿ ವಿವಾದ ಮುಂದಿನ ದಿನಗಳಲ್ಲಿ ರಾಜಕೀಯ ತೀವ್ರತೆಗೆ ಕಾರಣವಾಗಲಿದೆ. ಶಾಸಕ ಮುನಿರತ್ನ ಅವರ ಹೋರಾಟಕ್ಕೆ ಸರ್ಕಾರ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಈಗ ಕಾದು ನೋಡಬೇಕಾಗಿದೆ.
