ಬೇಲೂರಿನ ವರಸಿದ್ಧಿ ವಿನಾಯಕನ ಮೂರ್ತಿಗೆ ಚಪ್ಪಲಿ ಇಟ್ಟು ಅಪಮಾನ ಮಾಡಿದ ಪ್ರಕರಣದಲ್ಲಿ, ಪೊಲೀಸರು ಲೀಲಮ್ಮ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಆರೋಪಿಯು ಮಾನಸಿಕವಾಗಿ ಅಸ್ವಸ್ಥಳಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರೆದಿದೆ. ಈ ಘಟನೆ ಖಂಡಿಸಿ ಹಿಂದೂ ಸಂಘಟನೆಗಳು ಬೇಲೂರು ಬಂದ್‌ಗೆ ಕರೆ ನೀಡಿವೆ.

ಹಾಸನ (ಸೆ.21): ಐತಿಹಾಸಿಕ ಬೇಲೂರಿನ ವರಸಿದ್ಧಿ ವಿನಾಯಕನ ಮೂರ್ತಿಗೆ ಚಪ್ಪಲಿ ಇಟ್ಟು ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಹಾಸನ ನಗರದ ವಿಜಯನಗರ ಮೂಲದ, ಸದ್ಯ ಗುಡ್ಡೇನಹಳ್ಳಿ ಬಳಿ ವಾಸಿಸುತ್ತಿರುವ ಲೀಲಮ್ಮ (45) ಎಂಬ ಮಹಿಳೆಯನ್ನು ಬಾಣಾವರ ಪಿಎಸ್‌ಐ ಸುರೇಶ್ ನೇತೃತ್ವದ ತಂಡ ವಶಕ್ಕೆ ಪಡೆದುಕೊಂಡಿದೆ.

ಘಟನೆ ಹಿನ್ನೆಲೆ

ನಿನ್ನೆ ತಡರಾತ್ರಿ ಲೀಲಮ್ಮ ಅವರು ವರಸಿದ್ಧಿ ವಿನಾಯಕ ದೇವಾಲಯಕ್ಕೆ ನುಗ್ಗಿ, ಮೂರ್ತಿಗೆ ಚಪ್ಪಲಿ ಇಟ್ಟು ಅಪಮಾನ ಮಾಡಿದ್ದರು. ಈ ಘಟನೆಯು ಸ್ಥಳೀಯ ಭಕ್ತರಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಪೊಲೀಸರು ತಕ್ಷಣವೇ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ದೇವಾಲಯದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮಹಿಳೆಯ ಬಟ್ಟೆ ಮತ್ತು ನಡೆ-ನುಡಿಗಳ ಆಧಾರದ ಮೇಲೆ ಆಕೆಯ ಬಗ್ಗೆ ಸುಳಿವು ದೊರಕಿದೆ. ಕೆಎಸ್‌ಆರ್‌ಟಿಸಿ ಗಾರ್ಡ್ ದರ್ಶನ್ ನೀಡಿದ ಮಾಹಿತಿಯೂ ಕೂಡ ಮಹಿಳೆಯನ್ನು ಪತ್ತೆಹಚ್ಚಲು ಸಹಾಯಕವಾಯಿತು.

ಮಾನಸಿಕ ಅಸ್ವಸ್ಥತೆಯ ಶಂಕೆ:

ಹಾಸನ ಎಸ್‌ಪಿ ಮೊಹಮ್ಮದ್ ಸುಜೀತಾ ಅವರು ನೀಡಿರುವ ಹೇಳಿಕೆಯ ಪ್ರಕಾರ, ಆರೋಪಿ ಲೀಲಮ್ಮ ಮಾನಸಿಕವಾಗಿ ಸ್ವಲ್ಪ ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ. ಅವರ ಹೇಳಿಕೆಗಳು ಅಸಮಂಜಸವಾಗಿದ್ದು, ಪೊಲೀಸರ ತನಿಖೆ ವೇಳೆ ತಾನು ಹೂ ಇಡಲು ಹೋಗಿದ್ದೆ ಎಂದು ಹೇಳಿದ್ದಾರೆ. ಘಟನೆಗೂ ಮುನ್ನ ಲೀಲಮ್ಮ ಚಿಕ್ಕಮಗಳೂರು ಮತ್ತು ಬೇಲೂರಿನಲ್ಲಿ ಓಡಾಡಿದ್ದರು ಎಂಬುದು ಕೂಡ ತಿಳಿದುಬಂದಿದೆ. ಲೀಲಮ್ಮ ಅವರಿಗೆ ಇಬ್ಬರು ಮಕ್ಕಳಿದ್ದು, ಅವರಲ್ಲಿ ಓರ್ವರಿಗೆ ಆರೋಗ್ಯ ಸಮಸ್ಯೆ ಇರುವುದಾಗಿ ಪೊಲೀಸರು ಹೇಳಿದ್ದಾರೆ.

View post on Instagram

ಆಕೆಯ ಮಾನಸಿಕ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ. ಪ್ರಸ್ತುತ, ಲೀಲಮ್ಮ ಅವರನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ. ಈ ಘಟನೆ ಇಡೀ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮಹಿಳೆಯ ಮಾನಸಿಕ ಸ್ಥಿತಿ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳುವವರೆಗೂ ಪ್ರಕರಣದ ಹಿಂದಿನ ಉದ್ದೇಶ ಸ್ಪಷ್ಟವಾಗುವುದಿಲ್ಲ.

ನಾಳೆ ಬೇಲೂರು ಬಂದ್‌ಗೆ ಕರೆಕೊಟ್ಟ ಹಿಂದೂ ಸಂಘಟನೆಗಳು:

ಬೇಲೂರು ಪಟ್ಟಣದ ಪುರಸಭೆ ಆವರಣದಲ್ಲಿರುವ ಗಣೀಶಮೂರ್ತಿಗೆ ಚಪ್ಪಲಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಬೇಲೂರು ಬಂದ್‌ಗೆ ಬಿಜೆಪಿ, ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ವಿವಿಧ ಸಂಘಟನೆಗಳಿಂದ ಕರೆ ನೀಡಲಾಗಿದೆ. ಎಲ್ಲ ಸಾರ್ವಜನಿಕರು ಸ್ವಯಂಪ್ರೇರಿತ ಬೇಲೂರು ಬಂದ್‌ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಮಾಜಿ ಸಚಿವ ಸಿ.ಟಿ.ರವಿ, ಶಾಸಕ ಎಚ್‌.ಕೆ. ಸುರೇಶ್ ಅವರಿಂದಲೂ ಬಂದ್‌ಗೆ ಬೆಂಬಲ ವ್ಯಕ್ತವಾಗಿದೆ.