ಬೆಂಗಳೂರಿನ ನಮ್ಮ ಮೆಟ್ರೋ ರೈಲಿನಲ್ಲಿ ವ್ಯಕ್ತಿಯೊಬ್ಬ ಭಿಕ್ಷಾಟನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಬಿಎಂಆರ್‌ಸಿಎಲ್‌ನ ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಘಟನೆಯು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು (ಅ.14): ಸಿಲಿಕಾನ್ ಸಿಟಿ ಬೆಂಗಳೂರಿನ ನಾಗರಿಕರಿಗೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ನೀಡುವಲ್ಲಿ 'ನಮ್ಮ ಮೆಟ್ರೋ' (Namma Metro) ನಿಜಕ್ಕೂ ವರದಾನವಾಗಿದೆ. ಟಿಕೆಟ್ ದರ ಸ್ವಲ್ಪ ಹೆಚ್ಚಾದರೂ, ಸಮಯಕ್ಕೆ ಸರಿಯಾಗಿ ಮತ್ತು ಆರಾಮದಾಯಕವಾಗಿ ಗಮ್ಯಸ್ಥಾನ ತಲುಪಲು ಮೆಟ್ರೋ ಉತ್ತಮ ಆಯ್ಕೆಯಾಗಿದೆ. ಆದರೆ, ಸಾರ್ವಜನಿಕರ ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣಕ್ಕೆ ಹೆಸರಾದ ಮೆಟ್ರೋ ರೈಲಿನೊಳಗೆ ಭಿಕ್ಷಾಟನೆ ನಡೆಯುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೆಟ್ರೋ ಪ್ರಯಾಣಿಕರಲ್ಲಿ ಮತ್ತು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮೆಟ್ರೋದಲ್ಲೂ ಭಿಕ್ಷಾಟನೆಗೆ ಅವಕಾಶವಿದೆಯೇ?
ಸಾಮಾನ್ಯವಾಗಿ ದೇವಾಲಯಗಳು, ಬಸ್ ನಿಲ್ದಾಣಗಳು, ಟ್ರಾಫಿಕ್ ಸಿಗ್ನಲ್‌ಗಳು ಮತ್ತು ಕೆಲವೊಮ್ಮೆ ಬಸ್ಸುಗಳಲ್ಲಿ ಭಿಕ್ಷುಕರು ಕಾಣಸಿಗುತ್ತಾರೆ. ಆದರೆ, ಭಾರಿ ಭದ್ರತೆ ಮತ್ತು ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿರುವ ಮೆಟ್ರೋ ರೈಲಿನೊಳಗೆ ಭಿಕ್ಷುಕರು ಪ್ರವೇಶಿಸಿ ಭಿಕ್ಷೆ ಬೇಡುತ್ತಿರುವುದು ಅನೇಕರಿಗೆ ಅಚ್ಚರಿ ಮತ್ತು ಅಸಮಾಧಾನ ಮೂಡಿಸಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ನಮ್ಮ ಮೆಟ್ರೋದ ಹಸಿರು ಮಾರ್ಗದ ಟ್ರೈನ್‌ನಲ್ಲಿ ವ್ಯಕ್ತಿಯೋರ್ವ ಪ್ರಯಾಣಿಕರ ಬಳಿ ಭಿಕ್ಷೆ ಬೇಡುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ.
ಪ್ರಯಾಣಿಕರೊಬ್ಬರು ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, 'ಮೆಟ್ರೋದಲ್ಲೂ ಭಿಕ್ಷಾಟನೆಗೆ ಅವಕಾಶ ಕೊಟ್ಟಿದ್ದಾರಾ? ಎಂದು ನೇರವಾಗಿ ನಮ್ಮ ಮೆಟ್ರೋ ಆಡಳಿತ ಮಂಡಳಿ, ಬಿಎಂಆರ್‌ಸಿಎಲ್ (BMRCL) ಅನ್ನು ಪ್ರಶ್ನಿಸಿದ್ದಾರೆ. ಟ್ರಾಫಿಕ್ ಜಾಮ್‌ನಿಂದ ತಪ್ಪಿಸಿಕೊಳ್ಳಲು ಸುರಕ್ಷಿತ ಸಾರಿಗೆಯಾಗಿ ಮೆಟ್ರೋವನ್ನು ಆಶ್ರಯಿಸುವ ಜನರಿಗೆ ಈ ಘಟನೆ ಆಘಾತ ತಂದಿದೆ. ಭದ್ರತಾ ಸಿಬ್ಬಂದಿಯ ಕಣ್ಗಾವಲು ಮೀರಿ ಭಿಕ್ಷುಕರು ಹೇಗೆ ರೈಲು ಬೋಗಿಯೊಳಗೆ ಪ್ರವೇಶಿಸಿದರು ಎಂಬುದು ಹಲವರ ಪ್ರಶ್ನೆಯಾಗಿದೆ.
ರೀಲ್ಸ್‌ಗಾಗಿಯೇ ಮಾಡಿದ ವಿಡಿಯೋ? ಅಸಲಿಯತ್ತಾದರೂ ಏನು?:
ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಮೆಟ್ರೋ ಪ್ರಯಾಣಿಕರು ಬಿಎಂಆರ್‌ಸಿಎಲ್‌ನ ನಿರ್ವಹಣೆ ಮತ್ತು ಭದ್ರತಾ ವ್ಯವಸ್ಥೆಗಳ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. 'ಟ್ರಾಫಿಕ್ ಸಿಗ್ನಲ್, ಬಸ್ ನಿಲ್ದಾಣಗಳ ಬಳಿಕ ಇದೀಗ ಮೆಟ್ರೋ ಸಹ ಭಿಕ್ಷುಕರ ತಾಣವಾಗಿದೆಯೇ? ಎಂದು ಕಮೆಂಟ್‌ಗಳ ಮೂಲಕ ಜನರು ಕಿಡಿಕಾರಿದ್ದಾರೆ. ಆದಾಗ್ಯೂ, ಈ ವಿಡಿಯೋದ ಹಿಂದಿನ ಅಸಲಿಯತ್ತು ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೆಲವರು ಇದು ನಿಜವಾದ ಭಿಕ್ಷಾಟನೆಯ ಘಟನೆ ಎಂದು ಭಾವಿಸಿದರೆ, ಇನ್ನು ಕೆಲವರು ಕೇವಲ ಲೈಕ್ಸ್ ಮತ್ತು ವೀವ್ಸ್‌ಗಾಗಿ ರೀಲ್ಸ್ ಮಾಡುವ ಹುಚ್ಚಿನಿಂದ ಯುವಕರು ಈ ವಿಡಿಯೋವನ್ನು ಚಿತ್ರೀಕರಿಸಿರಬಹುದು ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಬಿಎಂಆರ್‌ಸಿಎಲ್ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ರೈತರ ಪ್ರಕರಣದ ನೆನಪು
ಈ ಹಿಂದೆ ನಮ್ಮ ಮೆಟ್ರೋ ಸಿಬ್ಬಂದಿ ಕೊಳಕಾದ ಬಟ್ಟೆ ಧರಿಸಿದ್ದ ರೈತನನ್ನು ರೈಲು ಪ್ರವೇಶಿಸದಂತೆ ತಡೆದ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ರೈತನಿಗೆ ಅವಮಾನ ಮಾಡಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿ, ಆ ನಂತರ ತಪ್ಪಿತಸ್ಥ ಸಿಬ್ಬಂದಿಯನ್ನು ಅಮಾನತುಗೊಳಿಸಿ, ಮೆಟ್ರೋ ಆಡಳಿತ ಕ್ಷಮೆಯಾಚಿಸಿತ್ತು. ರೈತನನ್ನು ತಡೆದಿದ್ದ ಮೆಟ್ರೋ ಸಿಬ್ಬಂದಿ, ಈಗ ಭಿಕ್ಷುಕ ರೈಲಿನೊಳಗೆ ಪ್ರವೇಶಿಸಲು ಅವಕಾಶ ನೀಡಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ. ನಮ್ಮ ಮೆಟ್ರೋ ಸುರಕ್ಷತೆ ಮತ್ತು ನೈರ್ಮಲ್ಯದ ವಿಷಯದಲ್ಲಿ ಇಬ್ಬಗೆಯ ನೀತಿ ಅನುಸರಿಸುತ್ತಿದೆಯೇ ಎಂಬ ಅನುಮಾನಗಳಿಗೆ ಈ ಘಟನೆ ಪುಷ್ಟಿ ನೀಡಿದೆ.
ನಿಯಮ ಉಲ್ಲಂಘನೆಗೆ ದಂಡ: ಭಿಕ್ಷಾಟನೆಗೆ ಯಾವ ಕ್ರಮ?
ಇದೇ ಮೆಟ್ರೋದಲ್ಲಿ ಕೆಲವು ದಿನಗಳ ಹಿಂದೆ ಯುವತಿಯೊಬ್ಬಳು ರೈಲಿನೊಳಗೆ ತಿಂಡಿ ತಿಂದಿದ್ದಕ್ಕಾಗಿ ಸಿಸಿಟಿವಿಯಲ್ಲಿ ಸೆರೆಯಾಗಿ 500 ರೂ. ದಂಡ ಕಟ್ಟಿದ್ದ ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಮೆಟ್ರೋ ಆವರಣ ಮತ್ತು ರೈಲುಗಳ ಒಳಗೆ ಯಾವುದೇ ರೀತಿಯ ಆಹಾರ ಸೇವನೆ ಅಥವಾ ಪಾನೀಯಗಳನ್ನು ಕುಡಿಯುವುದು ನಿಷಿದ್ಧ. ಅಂತಹ ನಿಯಮ ಉಲ್ಲಂಘನೆಗೆ ಬಿಎಂಆರ್‌ಸಿಎಲ್ ದಂಡ ವಿಧಿಸಿ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
