ಡಿಕೆಶಿ ಆಗಲ್ಲ, ಜಾರಕಿಹೊಳಿಗೆ ಸಿಗಲ್ಲ, ಬ್ಲ್ಯಾಕ್ ಹಾರ್ಸ್‌ಗೆ ಸಿಎಂ ಪಟ್ಟ, ಯತ್ನಾಳ್ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.ಕಾಂಗ್ರೆಸ್ ಅಧಿಕಾರ ಬದಲಾವಣೆಯಲ್ಲಿ ಸಿದ್ದರಾಮಯ್ಯ ಕುರ್ಚಿ ಮೇಲೆ ಕಣ್ಣಿಟ್ಟಿರುವ, ರೇಸ್‌ನಲ್ಲಿರುವ ಯಾವ ನಾಯಕರು ಸಿಎಂ ಆಗಲ್ಲ ಎಂದಿದ್ದಾರೆ.

ಬೆಳಗಾವಿ (ಅ.29) ಕಾಂಗ್ರೆಸ್ ಅಭೂತವೂರ್ವ ಗೆಲುವು ದಾಖಲಿಸಿ ಅಧಿಕಾರಕ್ಕೇರಿದರೂ ಸಚಿವ ಸಂಪುಟ ರಚನೆ, ಸಿಎಂ ಸ್ಥಾನಕ್ಕೆ ಆರಂಭದಿಂದಲೇ ಜಿದ್ದಾಜಿದ್ದಿ ಎರ್ಪಟ್ಟಿತ್ತು. ವರ್ಷಗಳು ಕಳೆಯುತ್ತಿದ್ದಂತೆ ನಾಯಕತ್ವ ಬದಲಾವಣೆ ಸೇರಿದಂತೆ ಚರ್ಚೆಗಳು, ಕೋಲಾಹಲಗಳು ನಡೆಯುತ್ತಲೇ ಇದೆ. ಇದೀಗ ಸಿಎಂ ಬದಲಾವಣೆ ಮಾತುಗಳು ಜೋರಾಗಿ ಕೇಳಿಬರುತ್ತಿದೆ.ಒಂದೆಡೆ ಡಿಕೆ ಶಿವಕುಮಾರ್ ಬಣ ಉತ್ಸಾಹದಲ್ಲಿದ್ದರೆ,ಮತ್ತೊಂದೆಡೆ ದಲಿತ ಸಿಎಂ ಕೂಗು ಕೇಳಿಬರುತ್ತಿದೆ. ಇದರ ನಡುವೆ ಹಿಂದೂ ಫೈರ್ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿರುವ ಬಸನಗೌಡಪಾಟೀಲ್ ಯತ್ನಾಳ್ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಮುಖ್ಯಮಂತ್ರಿ ರೇಸ್‌ನಲ್ಲಿರುವ ಯಾವ ನಾಯಕರು ಸಿಎಂ ಆಗವುದಿಲ್ಲ. ಸಿಎಂ ಸ್ಥಾನ ಬ್ಲ್ಯಾಕ್ ಹಾರ್ಸ್‌ಗೆ ಸಿಗಲಿದೆ ಎಂದು ಯತ್ನಾಳ್ ಭವಿಷ್ಯ ನುಡಿದಿದ್ದಾರೆ.

ರಾಜ್ಯದ ಸಾರಥ್ಯ ಬ್ಲಾಕ್‌ಹಾರ್ಸ್ ಕೈಗೆ

ನವೆಂಬರ್ ಕ್ರಾಂತಿ ಕುರಿತು ಬೆಳಗಾವಿಯ್ಲಿ ಮಾತನಾಡಿದ ಶಾಸಕ ಬನಸಗೌಡಪಾಟೀಲ್ ಯತ್ನಾಳ್, ಸದ್ಯ ಸಿಎಂ ಸ್ಪರ್ಧೆಯಲ್ಲಿ ಕಾಣಿಸಿಕೊಂಡಿರುವ ಯಾವ ನಾಯಕರು ಮುಖ್ಯಮಂತ್ರಿ ಆಗುವುದಿಲ್ಲ. ರಾಜ್ಯದ ಸಾರ್ಥ್ಯ ಬ್ಲ್ಯಾಕ್ ಹಾರ್ಸ್ ಕೈಗೆ ಸಿಗಲಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಲ್ಲ, ಸತೀಶ್ ಜಾರಕಿಹೊಳಿಯೂ ಆಗಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಒಮ್ಮೆ ಸಿಎಂ ಆಗಬೇಕು ಎಂದು ಕಾಯುತ್ತಿದ್ದಾರೆ

ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ಹಲವು ವರ್ಷಗಳಿಂದ ಕಾಯುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಬೆಳಗಾವಿಗೆ ಬಂದು ಸತೀಶ್ ಜಾರಕಿಹೊಳಿ ಹೆಸರು ಹೇಳಿ ಹೋಗಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಲಿದೆ. ಆದರೆ ರೇಸ್‌ನಲ್ಲಿರುವ ನಾಯಕರಿಗೆ ಸಿಎಂ ಸ್ಥಾನ ಸಿಗಲ್ಲ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.

ನಾಯಕತ್ವ ಬದಲಾವಣೆ ಕುರಿತು ಕಾಂಗ್ರೆಸ್ ನಾಯಕರು ಒಬ್ಬರ ಮೇಲೊಬ್ಬರು ಹೇಳಿಕೆ ನೀಡುತ್ತಿದ್ದಾರೆ. ಇದು ನಾಯಕತ್ವ ಬದಲಾವಣೆ ಕುರಿತು ಬಲವಾದ ಗಾಳಿ ಬೀಸುವಂತೆ ಮಾಡಿದೆ. ಕೋಲಾರದಲ್ಲಿ ಮಾತನಾಡಿದ್ದ ಸಚಿವ ಭೈರತಿ ಸುರೇಶ್, ಸಿಎಂ ಸಿದ್ದರಾಮಯ್ಯ 5 ವರ್ಷ ಮುಂದುವರೆಯುವ ಬಗ್ಗೆಯೂ ಸಹ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದಿದ್ದಾರೆ. ಈ ಮೂಲಕ ಸಿಎಂ ಮುಂದುವರಿಯಬೇಕೋ, ಅಥವಾ ಮುಂದುವರಿಯುತ್ತಾರೆ ಅನ್ನೋ ಸ್ಪಷ್ಟವಾಗಿ ಹೇಳಿಲ್ಲ. ಎಲ್ಲವೂ ಹೈಕಮಾಂಡ್ ನಿರ್ಧಾರ ಎಂದು ಭೈರತಿ ಸುರೇಶ್ ಹೇಳಿದ್ದಾರೆ.

ದಲಿತ ಸಿಎಂ ವಿಚಾರ ಕುರಿತು ಭೈರತಿ ಪ್ರತಿಕ್ರಿಯೆ

ಎಲ್ಲಾ ಸಮುದಾಯ, ಜಾತಿ ಜನಾಂಗಗಳಿಗೂ ಸಿಎಂ ಆಗುವ ಹಕ್ಕಿದೆ. ಅದನ್ನು ಕೇಳಿವು ಹಕ್ಕು ಕೂಡ ಇದೆ. ಆದರೆ ನಿರ್ಧಾರಗಳು ಹೈಕಮಾಂಡ್ ಮಾಡುತ್ತೆ. ಡಿಕೆ ಶಿವಕುಮಾರ್ ತಮ್ಮ ವೈಯುಕ್ತಿಕ ಕೆಲಸಗಳಿಗೆ ದೆಹಲಿಗೆ ತೆರಳಿದ್ದಾರೆ ಎಂದು ಭೈರತಿ ಸುರೇಶ್ ಹೇಳಿದ್ದಾರೆ.