Bagalkot heavy rain damage: ಬಾಗಲಕೋಟೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಒಂದೇ ವಾರದಲ್ಲಿ 321 ಮನೆಗಳು ಕುಸಿದು ಬಿದ್ದಿವೆ. ಈ ದುರಂತದಲ್ಲಿ ವೃದ್ಧೆಯೊಬ್ಬರು ಗಾಯಗೊಂಡಿದ್ದು, ಹಳೆಯ ಮನೆಗಳನ್ನು ತೆರವುಗೊಳಿಸದಿದ್ದರೆ ಮತ್ತಷ್ಟು ಅನಾಹುತ ಸಂಭವಿಸುವ ಆತಂಕದಲ್ಲಿ ಜನರು ಬದುಕುತ್ತಿದ್ದಾರೆ
ಬಾಗಲಕೋಟೆ (ಸೆ.28): ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ನೂರಾರು ಮಣ್ಣಿನ ಮನೆಗಳು ಕುಸಿದುಬಿದ್ದು ಹಾನಿಗೊಳಗಾಗಿವೆ. ಸೆಪ್ಟೆಂಬರ್ 21 ರಿಂದ 27 ರವರೆಗೆ ಜಿಲ್ಲೆಯಲ್ಲಿ 321 ಮನೆಗಳು ಕುಸಿದುಬಿದ್ದಿದ್ದು, ಜನರು ಆತಂಕದಲ್ಲಿ ಬದುಕುತ್ತಿದ್ದಾರೆ.
ಈ ಅವಧಿಯಲ್ಲಿ ಸಾಮಾನ್ಯವಾಗಿ 40 ಮಿಮೀ ಮಳೆಯಾಗಬೇಕಿತ್ತು. ಆದರೆ ಈ ಬಾರಿ 93 ಮಿಮೀ ಮಳೆಯಾಗಿದ್ದು, 130% ಹೆಚ್ಚುವರಿ ಮಳೆಯಿಂದಾಗಿ ಈ ದುರಂತ ಸಂಭವಿಸಿದೆ.
ಮಲಗಿದ ಅಜ್ಜಿ ಮೇಲೆ ಕುಸಿದುಬಿದ್ದ ಛಾವಣಿ!
ಬಾಗಲಕೋಟೆ ನಗರದ ಕಿಲ್ಲಾ ಓಣಿಯಲ್ಲಿ ಎರಡು ಮನೆಗಳು ಕುಸಿದ ಘಟನೆಯೊಂದರಲ್ಲಿ 75 ವರ್ಷದ ಶಶಿಕಲಾ ದಾಬಡೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಕ್ಕದ ಹಳೆಯ ಖಾಲಿ ಮನೆ ಕುಸಿದು ಶಶಿಕಲಾ ಅವರ ಮನೆಯ ಮೇಲ್ಚಾವಣಿಯ ಮೇಲೆ ಬಿದ್ದ ಪರಿಣಾಮ, ಕಟ್ಟಿಗೆಯ ತೊಲೆ ತಲೆಗೆ ಬಿದ್ದು ಆರು ಹೊಲಿಗೆ ಬಿದ್ದಿವೆ. ಕೈಗಳಿಗೂ ಗಾಯಗಳಾಗಿವೆ.
ನಮ್ಮ ಮನೆ ಗಟ್ಟಿ ಇತ್ತು ಇಲ್ದಿದ್ರೆ ನಾವು ಜೀವಂತ ಉಳಿಯುತ್ತಿರಲಿಲ್ಲ:
ಶಶಿಕಲಾ ಅವರ ಮಗ ವೆಂಕಟೇಶ್ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಮನೆಯಲ್ಲಿ ನಾನು ಹಾಗೂ ತಾಯಿ ವಾಸವಿದ್ದೆವು. ಅದೃಷ್ಟವಶಾತ್ ಭಾರೀ ಅವಘಡವೊಂದು ತಪ್ಪಿದೆ. ನಮ್ಮ ಮನೆ ಗಟ್ಟಿಯಾಗಿತ್ತು, ಇಲ್ಲದಿದ್ದರೆ ನಾನೂ ತಾಯಿಯೂ ಜೀವಂತ ಉಳಿಯುತ್ತಿರಲಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಹಳೆಯ ಮನೆಗಳನ್ನ ಡೆಮಾಲಿಶ್ ಮಾಡಬೇಕು:
ಹಳೆಯ ಖಾಲಿ ಮನೆಗಳನ್ನು ಕಿತ್ತುಹಾಕದಿದ್ದರೆ ಸಾರ್ವಜನಿಕರಿಗೆ ಮತ್ತಷ್ಟು ಅವಘಡಕ್ಕೆ ಕಾರಣವಾಗಬಹುದು ಎಂದು ವೆಂಕಟೇಶ್, ಇಂತಹ ಮನೆಗಳನ್ನು ಡೆಮಾಲಿಶ್ ಮಾಡಬೇಕು, ಇಲ್ಲವಾದರೆ ಜನರ ಜೀವಕ್ಕೆ ಕುತ್ತು ಬರಬಹುದು ಎಂದರು.
ಜಿಲ್ಲೆಯಾದ್ಯಂತ ಮಣ್ಣಿನ ಮನೆಯ ಕುಟುಂಬಗಳು ಭಯದ ನೆರಳಲ್ಲಿ ಬದುಕುತ್ತಿದ್ದು, ಆಡಳಿತದಿಂದ ತುರ್ತು ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ. ಮಳೆಯ ಆರ್ಭಟ ಮುಂದುವರಿದರೆ ಮತ್ತಷ್ಟು ದುರಂತ ಸಂಭವಿಸುವ ಆತಂಕ ಜನರನ್ನು ಕಾಡುತ್ತಿದೆ.
