ಆಲಮಟ್ಟಿ ಜಲಾಶಯವನ್ನು 524.60 ಮೀ. ಗೆ ಏರಿಸಲು ರಾಜ್ಯ ಸರ್ಕಾರ ಸಂಕಲ್ಪ ಮಾಡಿದೆ. ಆದರೆ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಸರ್ಕಾರಗಳು ಇದಕ್ಕೆ ಅಡ್ಡಿಯಾಗಿವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
(ಆಲಮಟ್ಟಿ / ಕೊಪ್ಪಳ (ಸೆ.7): ರಾಜ್ಯ ಸರ್ಕಾರ ಹಾಗೂ ನಾವೆಲ್ಲ ಆಲಮಟ್ಟಿ ಜಲಾಶಯವನ್ನು 524.60 ಮೀ. ಏರಿಸಬೇಕು ಎಂದು ಸಂಕಲ್ಪ ಮಾಡಿದ್ದೇವೆ. ಆದರೆ, ಇದಕ್ಕೆ ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ಅಡ್ಡಿಯಾಗಿವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆಲಮಟ್ಟಿ ಜಲಾಶಯವನ್ನು ಎತ್ತರಿಸುವ ಕುರಿತು ಎರಡು ಬಾರಿ ಕೇಂದ್ರ ಸರ್ಕಾರದಿಂದ ಸಭೆ ನಿಗದಿ ಮಾಡಲಾಗಿತ್ತು. ಆಗ ಒಮ್ಮೆ ಆಂಧ್ರ ಪ್ರದೇಶ, ಮತ್ತೊಮ್ಮೆ ಮಹಾರಾಷ್ಟ್ರ ಸರ್ಕಾರದ ಕಾರಣದಿಂದಾಗಿ ಸಭೆ ನಡೆಯದೆ ಮುಂದಕ್ಕೆ ಹೋಯಿತು. ಆಲಮಟ್ಟಿ ಡ್ಯಾಂ ಎತ್ತರ ಆಗದ ಕಾರಣ 100ಕ್ಕೂ ಅಧಿಕ ಟಿಎಂಸಿ ನೀರು ಸಮುದ್ರ ಪಾಲಾಗುತ್ತದೆ ಎಂದು ತಿಳಿಸಿದರು.
ಜಲಾಶಯದ ಕುರಿತು ಚರ್ಚಿಸಲು ಆಂಧ್ರಪ್ರದೇಶ ಸಿಎಂಗೆ ಸಮಯ ಕೇಳಿದ್ದೇನೆ. ಸಮಯ ನಿಗದಿಯಾದ ನಂತರ ನವಲಿ ಸಮನಾಂತರ ಜಲಾಶಯ ಮತ್ತು ಇತರೆ ವಿಷಯಗಳನ್ನು ಪ್ರಸ್ತಾಪಿಸಲಾಗುವುದು. ಶೀಘ್ರವೇ ತುಂಗಭದ್ರಾ ಗೇಟ್‌ಗಳ ದುರಸ್ತಿ ಮಾಡಲಾಗುವುದು. ಸಾರ್ವಜನಿಕರು ನಮಗೆ ಸಹಕಾರ ನೀಡಬೇಕು ಎಂದು ಡಿಕೆಶಿ ಮನವಿ ಮಾಡಿದರು.
ಈ ವೇಳೆ ಸಚಿವ ಎಂ.ಬಿ.ಪಾಟೀಲ, ಸಂಸದ ರಾಜಶೇಖರ ಹಿಟ್ನಾಳ್, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಎಚ್.ಆರ್. ಗವಿಯಪ್ಪ, ಮಾಜಿ ಸಂಸದ ಕರಡಿ ಸಂಗಣ್ಣ ಇದ್ದರು.
ನೆರಳಿನ ವ್ಯವಸ್ಥೆ ಮಾಡದ್ದಕ್ಕೆ ಅಧಿಕಾರಿಗಳಿಗೆ ಡಿಸಿಎಂ ಕ್ಲಾಸ್!
ಆಲಮಟ್ಟಿಯಲ್ಲಿ ಸಿಎಂ ಹಾಗೂ ಡಿಸಿಎಂ ರೈತರ ಅಹವಾಲು ಸ್ವೀಕಾರ ಮಾಡುವ ಸ್ಥಳದಲ್ಲಿ ನೆರಳಿನ ವ್ಯವಸ್ಥೆ ಮಾಡದಕ್ಕೆ ಅಧಿಕಾರಿಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ. ಶನಿವಾರ ಆಲಮಟ್ಟಿ ಜಲಾಶಯಕ್ಕೆ ಬಾಗೀನ ಅರ್ಪಿಸಿದ ಬಳಿಕ ಐಬಿ ಹೊರಭಾಗದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್, ರೈತ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರಿಂದ ಅಹವಾಲು ಸ್ವೀಕರಿಸಿದರು. ಈ ವೇಳೆ ಆ ಜಾಗದಲ್ಲಿ ನೆರಳಿನ ವ್ಯವಸ್ಥೆ ಮಾಡದ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ (ಕೆಬಿಜೆಎನ್‌ಎಲ್) ಅಧಿಕಾರಿಗಳ ವಿರುದ್ಧ ಗರಂ ಆದ ಡಿಕೆಶಿ, ಬಿಸಿಲಿನಿಂದಾಗಿ ಮನವಿ ಸ್ವೀಕಾರ ಕೈಬಿಟ್ಟು ನೆರಳಿಗಾಗಿ ಸಿಎಂ ಅವರಿಂದ ದೂರ ಬಂದು ನಿಂತರು. ಆಗ ‘ನಿಮಗೆ ಮಂಟಪ ಹಾಕುವುದನ್ನೂ ಹೇಳಿ ಕೊಡಬೇಕಾ?’ ಎಂದು ಅಧಿಕಾರಿಗಳಿಗೆ ಡಿಸಿಎಂ ತರಾಟೆಗೆ ತೆಗೆದುಕೊಂಡರು.
