ರಾಜ್ಯದ ಹಲವೆಡೆ ಭಾರಿ ಮಳೆ ಮುಂದುವರಿದಿದೆ. ಒಟ್ಟು ಐದು ಜಿಲ್ಲೆಯ ಶಾಲಾ ಕಾಲೇಜಿಗೆ ನಾಳೆ ರಜೆ ಘೋಷಿಸಲಾಗಿದೆ. ಈ ಪೈಕಿ ಉತ್ತರ ಕನ್ನಡದ ಕೆಲ ತಾಲೂಕುಗಳಿಗೆ ನಾಳೆ ರಜೆ ನೀಡಲಾಗಿದೆ. ಯಾವೆಲ್ಲಾ ಜಿಲ್ಲೆಯಲ್ಲಿ ನಾಳೆ ರಜೆ? 

ಬೆಂಗಳೂರು (ಆ.19) ಕರ್ನಾಟಕದಲ್ಲಿ ಭಾರಿ ಮಳೆ ಹಲವು ಅವಾಂತರ ಸೃಷ್ಟಿಸಿದೆ. ರಾಜ್ಯದ ಹಲವು ಜಲಾಶಗಳು ಭರ್ತಿಯಾಗಿದ್ದು, ನೀರನ್ನು ಬಿಡಲಾಗಿದೆ. ಹೀಗಾಗಿ ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ. ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಭಾರಿ ಮಳೆ ಕಾರಣದಿಂದ ರಾಜ್ಯದ ಕೆಲ ಜಿಲ್ಲೆಯ ಶಾಲಾ ಕಾಲಿಜಿಗೆ ನಾಳೆಯೂ ರಜೆ ಘೋಷಿಸಲಾಗಿದೆ. ಉತ್ತರ ಕನ್ನಡದ ಕೆಲ ತಾಲೂಕು, ಬಾಗಲಕೋಟೆ, ಧಾರವಾಡ, ಹಾವೇರಿ, ಬೆಳಗಾವಿ, ಯಾದಗಿರಿ ಜಿಲ್ಲೆಯಲ್ಲಿ ನಾಳೆ (ಆಗಸ್ಟ್ 20) ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಉತ್ತರ ಕನ್ನಡದ 6 ತಾಲೂಕಿಗೆ ನಾಳೆ ರಜೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ನಿರಂತರ ಮಳೆಯಾಗುತ್ತಿರುವ ಪ್ರದೇಶಗಳಲ್ಲಿ ಮುನ್ನಚ್ಚೆರಿಕಾ ಕ್ರಮವಾಗಿ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ರಜೆ ಘೋಷಿಸಿದ್ದಾರೆ. ಬುಧವಾರ ಜಿಲ್ಲೆಯ 6 ತಾಲೂಕಿನ ಅಂಗನವಾಡಿ, ಪ್ರಾಥಮಿಕ- ಪ್ರೌಢಶಾಲೆ, ಪಿಯುಸಿ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ. ಶಿರಸಿ, ಸಿದ್ಧಾಪುರ, ಯಲ್ಲಾಪುರ, ಮುಂಡಗೋಡ, ಜೊಯಿಡಾ, ದಾಂಡೇಲಿಗೆ ರಜೆ ನೀಡಲಾಗಿದೆ.

ಬಾಗಲಕೋಟೆ ಶಾಲಾ ಕಾಲೇಜಿಗೆ ನಾಳೆ ರಜೆ

ಬಾಗಲಕೋಟೆ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜಿಗೆ ನಾಳೆ (ಆಗಸ್ಟ್ 20) ರಜೆ ಘೋಷಿಸಲಾಗಿದೆ. ಸತತ ಮಳೆ ಹಿನ್ನೆಲೆ, ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಸಂಗಪ್ಪ ಆದೇಶ ನೀಡಿದ್ದಾರೆ. 

ಯಾದಗಿರಿ ಜಿಲ್ಲೆಗೆ ನಾಳೆ ರಜೆ

ಯಾದಗಿರಿ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದೆ. ಯಾದಗಿರಿಯಲ್ಲಿ ಮಳೆ ಅಬ್ಬರಕ್ಕೆ ಇಂದು (ಆ.19) ರಜೆ ನೀಡಲಾಗಿತ್ತು. ಇದೀಗ ಮಳೆ ಮುಂದುವರಿದಿರುವ ಕಾರಣ ನಾಳೆ (ಆ.20) ರಜೆ ಘೋಷಿಸಲಾಗಿದೆ. ಯಾದಗಿರಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ರಜೆ ನೀಡಲಾಗಿದೆ.

ಹಾವೇರಿ, ಬೆಳಗಾವಿ, ಧಾರವಾಡ ಜಿಲ್ಲೆಗಳಿಗೂ ರಜೆ

ಹಾವೇರಿ, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢ ಹಾಗೂ ಪಿಯೂಸಿ ಕಾಲೇಜಿಗೆ ನಾಳೆ (ಆಗಸ್ಟ್ 20) ರಜೆ ನೀಡಲಾಗಿದೆ. ಮಳೆ ಹಾಗೂ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ಮುನ್ನಚ್ಚರಿಕಾ ಕ್ರಮವಾಗಿ ರಜೆ ಘೋಷಿಸಲಾಗಿದೆ.

ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಆದರೆ ಈ ಭಾಗದಲ್ಲಿ ಮಳೆ ಕಡಿಮೆಯಾಗಿರುವ ಕಾರಣ ನಾಳೆ ಯಾವುದೇ ರಜೆ ನೀಡಿಲ್ಲ. ಎಂದಿನಂತೆ ಶಾಲಾ ಕಾಲೇಜುಗಳು ನಾಳೆ (ಆಗಸ್ಟ್ 20) ಕಾರ್ಯನಿರ್ವಹಿಸಲಿದೆ.

ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಆತಂಕ ಹೆಚ್ಚಾಗಿದೆ.ವಿಜಯಪುರ ಜಿಲ್ಲೆ ಆಲಮಟ್ಟಿ ಡ್ಯಾಂನಿಂದ ಯಾದಗಿರಿ ಜಿ. ನಾರಾಯಣಪುರ ಜಲಾಶಯಕ್ಕೆ ನೀರು ಬಿಡಲಾಗಿದೆ. ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, 1.11 ಲಕ್ಷ ಕ್ಯೂಸೆಕ್ ನಷ್ಟು ಒಳ ಹರಿವು ಇದ್ದು,2 ಲಕ್ಷ ಕ್ಯೂಸೆಕ್ ನೀರನ್ನ ಹೊರ ಬಿಡಲಾಗುತ್ತಿದೆ.