ಕ್ರಿಶ್ಚಿಯನ್ ಸಮುದಾಯದಲ್ಲಿ 47 ಹೊಸ ಜಾತಿಗಳ ಸೃಷ್ಟಿ ಹಿಂದೂ ಸಮಾಜ ಒಡೆಯುವ ಷಡ್ಯಂತ್ರ ಎಂದು ಎನ್.ರವಿಕುಮಾರ್ ಆರೋಪಿಸಿದ್ದಾರೆ. ಮತಾಂತರ ಉದ್ದೇಶದಿಂದ ಈ ಜಾತಿಗಳನ್ನು ಸೃಷ್ಟಿಸಲಾಗಿದೆಯೇ ಎಂದು ಪ್ರಶ್ನಿಸಿದ ಅವರು, ಸರ್ಕಾರದಿಂದ ಸ್ಪಷ್ಟೀಕರಣಕ್ಕೆ ಆಗ್ರಹಿಸಿದ್ದಾರೆ.
ಬೆಂಗಳೂರು (ಸೆ.13): ಮತಾಂತರ ಮಾಡುವ ಉದ್ದೇಶದಿಂದ ಕುರುಬ ಕ್ರಿಶ್ಚಿಯನ್ ಸೇರಿ ಹೊಸದಾಗಿ 47 ಜಾತಿಗಳನ್ನು ಸೃಷ್ಟಿಸಲಾಗಿದೆ. ಹಿಂದೂ ಸಮಾಜ ಒಡೆಯುವ ಷಡ್ಯಂತ್ರವಿದು ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕ್ರಿಶ್ಚಿಯನ್ ಸಮುದಾಯದಲ್ಲಿ ಹಲವಾರು ಜಾತಿಗಳು ಇವೆಯೇ ಎಂಬುದರ ಬಗ್ಗೆ ಸರ್ಕಾರ ಕೂಡಲೇ ಸ್ಪಷ್ಟೀಕರಣ ಕೊಡಬೇಕು ಎಂದು ಆಗ್ರಹಿಸಿದರು. ಬಹುಶಃ ಇನ್ನೂ 47 ಹೊಸ ಜಾತಿ ಇರುವುದು ಕ್ರಿಶ್ಚಿಯನ್ನರಿಗೇ ಗೊತ್ತಿರಲಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಜಾತಿಗಳನ್ನು ಸೃಷ್ಟಿಸಿ ಕ್ರಿಶ್ಚಿಯನ್ ಮತಾಂತರ ಮಾಡಲು ಸರ್ಕಾರ ನಿರ್ಧರಿಸಿ ಅಧಿಸೂಚನೆ ಹೊರಡಿಸಿದ್ದಾರಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: 22ರಿಂದ ಜಾತಿ ಗಣತಿ, ಯಾರೂ ತಪ್ಪಿಸಬೇಡಿ : ಜನರಿಗೆ ಸಿದ್ದರಾಮಯ್ಯ ಮನವಿ
ಹಿಂದೂ ಧರ್ಮ, ಹಿಂದೂ ಸಮಾಜವನ್ನು ಒಡೆಯುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ. ಕೂಡಲೇ ಇದರ ಕುರಿತು ಸ್ಪಷ್ಟೀಕರಣ ನೀಡಬೇಕು. ಇದು ಹಿಂದೂ ಸಮಾಜವನ್ನು ಮತ್ತೊಮ್ಮೆ ವಿಭಜಿಸುವ ಷಡ್ಯಂತ್ರ ಎಂದು ರವಿಕುಮಾರ್ ಹರಿಹಾಯ್ದರು. ಬಿಜೆಪಿ ನಾಯಕರು ಈ ವಿಷಯದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
