ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ, ಸುಮಾರು 40ಕ್ಕೂ ಹೆಚ್ಚು ಸ್ಪೆಷಲಿಸ್ಟ್ ವೈದ್ಯರನ್ನು ಯಾವುದೇ ನೋಟಿಸ್ ನೀಡದೆ ಮತ್ತು 8-9 ತಿಂಗಳ ಸಂಬಳ ಬಾಕಿ ಉಳಿಸಿಕೊಂಡು ಏಕಾಏಕಿ ವಜಾ.. ಈ ಅನ್ಯಾಯದ ವಿರುದ್ಧ ವೈದ್ಯರು ಆಡಳಿತ ಮಂಡಳಿ ಕಚೇರಿ ಬಳಿ ಧರಣಿ ನಡೆಸುತ್ತಿದ್ದು, ಅವರ ಜೀವನ ಸಂಕಷ್ಟಕ್ಕೆ ಸಿಲುಕಿದೆ.
ಬೀದರ್ (ಅ.27): ಬೀದರ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಬ್ರಿಮ್ಸ್) ಆಸ್ಪತ್ರೆಯಲ್ಲಿ ಮತ್ತೊಂದು ದೊಡ್ಡ ಕರ್ಮಕಾಂಡ ನಡೆದಿದೆ. ಐದಾರು ವರ್ಷಗಳಿಂದ ಕರ್ತವ್ಯದಲ್ಲಿದ್ದ 40ಕ್ಕೂ ಹೆಚ್ಚು ಸ್ಪೆಷಲಿಸ್ಟ್ ವೈದ್ಯರನ್ನು ಯಾವುದೇ ನೋಟಿಸ್ ಇಲ್ಲದೇ ಏಕಾಏಕಿ ಕೆಲಸದಿಂದ ವಜಾಗೊಳಿಸಲಾಗಿದ್ದು, ಇದರಿಂದ ಅವರ ಜೀವನ ಸಂಕಷ್ಟಕ್ಕೀಡಾಗಿದೆ.
8-9 ತಿಂಗಳ ಸಂಬಳ ಬಾಕಿ ಉಳಿಸಿಕೊಂಡು ವಜಾ!
ತುರ್ತು ಚಿಕಿತ್ಸಾ ವಿಭಾಗ, ರೆಡಿಯಾಲಜಿ, ಸ್ಕ್ಯಾನಿಂಗ್, ಜನರಲ್ ಮೆಡಿಕಲ್, ಆರ್ಥೊಪೆಡಿಕ್ಸ್, ಜನರಲ್ ಸರ್ಜರಿ, ಚೆಸ್ಟ್ ಅಂಡ್ ಟಿಬಿ, ಹೆರಿಗೆ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಳೆದ ಆರೇಳು ವರ್ಷಗಳಿಂದ ಕೆಲಸ ಮಾಡುತ್ತಿದ್ದ ವೈದ್ಯರು.. ಸುಮಾರು 8-9 ತಿಂಗಳದಿಂದ ಸಂಬಳ ಆಗಿಲ್ಲ. ಸಂಬಳ ಕೇಳಿದರೆ ಭ್ರಿಮ್ಸ್ ಡೈರೆಕ್ಟರ್ ಇವತ್ತು ಕೊಡ್ತೇವೆ, ನಾಳೆ ಕೊಡ್ತೇವೆ ಎನ್ನುತ್ತ ವರ್ಷವಾಗುತ್ತ ಬಂದ್ರೂ ನಯಾಪೈಸೆ ಸಂಬಳ ಕೊಟ್ಟಿಲ್ಲ.
ನೋಟಿಸ್ ನೀಡದೇ ಏಕಾಏಕಿ ವಜಾ ಮಾಡಿದ್ದೇಕೆ?
ಕಳೆದ ಆರೇಳು ತಿಂಗಳಿಂದ ಸಂಬಳವಿಲ್ಲದೆ ದುಡಿಯುತ್ತಿರುವ ವೈದ್ಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಆರೇಳು ತಿಂಗಳ ಸಂಬಳ ಬಾಕಿ ಉಳಿಸಿಕೊಂಡು. ಯಾವುದೇ ನೋಟಿಸ್ ನೀಡದೇ ಏಕಾಏಕಿ ವಜಾಗೊಳಿಸಿದ್ದಾರೆ. ಇದರಿಂದ ನಾವು ಬೀದಿಗೆ ಬಿದ್ದಿದ್ದೇವೆ. ಇವರು ನಮ್ಮ ಜೀವನದೊಂದಿಗೆ ಚಲ್ಲಾಟ ಆಡುತ್ತಿದ್ದಾರೆ ಎಂದು ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡೆಗೆ ಪ್ರತಿಭಟನೆಯಾಗಿ ಬ್ರಿಮ್ಸ್ ಆಡಳಿತ ಮಂಡಳಿ ಕಚೇರಿ ಬಳಿ ವೈದ್ಯರು ಧರಣಿ ನಡೆಸುತ್ತಿದ್ದಾರೆ. ಸಂಬಳವೇ ನೀಡದೇ ವಜಾ ಮಾಡಿರುವುದು ಅವರಲ್ಲಿ ಭಾರಿ ಬೇಸರ ಮೂಡಿಸಿದೆ. ಈ ಘಟನೆಯಿಂದ ಆಸ್ಪತ್ರೆಯ ಚಿಕಿತ್ಸಾ ಸೇವೆಗೆ ತೊಂದರೆಯಾಗುವ ಸಾಧ್ಯತೆಯಿದೆ.
