ಲಂಡನ್‌ನಲ್ಲಿ ಲಲಿತ್ ಮೋದಿ ಆಯೋಜಿಸಿದ್ದ ಪಾರ್ಟಿಯಲ್ಲಿ ವಿಜಯ್ ಮಲ್ಯ 'ಐ ಡಿಡ್ ಇಟ್ ಮೈ ವೇ' ಹಾಡನ್ನು ಹಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಕ್ರಿಸ್ ಗೇಲ್ ಸೇರಿದಂತೆ ಹಲವರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು.

ಲಂಡನ್: ಇಂಡಿಯನ್ ಪ್ರೀಮಿಯರ್ ಲೀಗ್ ಮಾಜಿ ಕಮಿಷನರ್ ಲಲಿತ್ ಮೋದಿ ತಮ್ಮ ಲಂಡನ್ ನಿವಾಸದಲ್ಲಿ ಅದ್ದೂರಿ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯ ವೇಳೆಯಲ್ಲಿ ಉದ್ಯಮಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿಜಯ್ ಮಲ್ಯ, ಹಾಲಿವುಡ್‌ನ ಫ್ರಾಂಕ್ ಸಿಂತಾರಾ ಅವರ ಕ್ಲಾಸಿಕ್, ಐ ಡಿಡ್ ಇಟ್ ಮೈ ವೇ' ಹಾಡು ಹಾಡುವ ಮೂಲಕ ಸಂಭ್ರಮಿಸಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಪಾರ್ಟಿ ವಿಡಿಯೋವನ್ನು ಸ್ವತಃ ಲಲಿತ್ ಮೋದಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಪರ-ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದೆ.

ಈ ಅದ್ದೂರಿ ಪಾರ್ಟಿಯಲ್ಲಿ ಸುಮಾರು 310 ಮಂದಿ ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ. ಈ ಪೈಕಿ ಅವರ ಅತ್ಯಾಪ್ತ ಸ್ನೇಹಿತರು, ಜಗತ್ತಿನ ನಾನಾ ಮೂಲೆಗಳಲ್ಲಿ ನೆಲೆಸಿದ ಕುಟುಂಬಸ್ಥರು ಪಾಲ್ಗೊಂಡಿದ್ದರು ಎನ್ನಲಾಗಿದೆ. ಈ ಪಾರ್ಟಿಯಲ್ಲಿ ಹೆಚ್ಚು ಗಮನ ಸೆಳೆದದ್ದು ಎಂದರೆ ಅದು ವಿಜಯ್ ಮಲ್ಯ ಹಾಗೂ ಆರ್‌ಸಿಬಿ ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್. ಕೆಲ ದಿನಗಳ ಹಿಂದಷ್ಟೇ ಸ್ವಯಂ ಘೋಷಿತ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್, ಲಲಿತ್ ಮೋದಿ ಹಾಗೂ ವಿಜಯ್ ಮಲ್ಯ ಅವರ ಜತೆಗಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

View post on Instagram

ಐಪಿಎಲ್ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ಕೀರ್ತಿಗೆ ಪಾತ್ರರಾದ ಲಲಿತ್ ಮೋದಿ, 2010 ರಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ ಅಮಾನತುಗೊಂಡ ನಂತರ ಯುನೈಟೆಡ್ ಕಿಂಗ್‌ಡಂನಲ್ಲಿ ಸ್ವಯಂ-ಗಡಿಪಾರು ಅನುಭವಿಸುತ್ತಿದ್ದಾರೆ. ಬಿಡ್‌ನಲ್ಲಿ ರಿಗ್ಗಿಂಗ್, ಲಂಚ ಸ್ವೀಕರಿಸುವುದು ಮತ್ತು ಹಣ ವರ್ಗಾವಣೆ, ಹಾಗೆಯೇ ನೂರಾರು ಕೋಟಿ ರೂಪಾಯಿಗಳ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಯ ಶಂಕಿತ ಉಲ್ಲಂಘನೆ ಸೇರಿದಂತೆ ಹಲವು ಆರೋಪಗಳನ್ನು ಲಲಿತ್ ಮೋದಿ ಎದುರಿಸುತ್ತಿದ್ದಾರೆ. 60 ವರ್ಷದ ಲಲಿತ್ ಮೋದಿ ತಮ್ಮ ಮೇಲಿರುವ ಆರೋಪಗಳೆಲ್ಲವೂ ರಾಜಕೀಯ ಪ್ರೇರಿತವಾದದ್ದು ಎಂದು ಆರೋಪಿಸಿದ್ದಾರೆ.

ಇನ್ನೊಂದೆಡೆ "ಕಿಂಗ್ ಆಫ್ ಗುಡ್ ಟೈಮ್ಸ್" ಎಂದು ಕರೆಯಲ್ಪಡುವ ವಿಜಯ್ ಮಲ್ಯ ಕೂಡ ಕಾನೂನು ಸಂಕಷ್ಟದಲ್ಲಿ ಸಿಲುಕಿದ್ದಾರೆ. 9,000 ಕೋಟಿ ಮೌಲ್ಯದ ಸಾಲವನ್ನು ಮರುಪಾವತಿಸದೆ ಬಾಕಿ ಉಳಿಸಿಕೊಂಡಿದ್ದಕ್ಕಾಗಿ ಭಾರತದ ಮೋಸ್ಟ್ ವಾಂಟೆಡ್ ಎನಿಸಿಕೊಂಡಿದ್ದಾರೆ ಮತ್ತು ವಂಚನೆ ಮತ್ತು ಹಣ ವರ್ಗಾವಣೆ ಆರೋಪಗಳನ್ನು ಎದುರಿಸುತ್ತಿದ್ದಾರೆ. ಭಾರತದ ಹಸ್ತಾಂತರ ಕೋರಿಕೆಯ ಮೇರೆಗೆ 2017 ರಲ್ಲಿ ಲಂಡನ್‌ನಲ್ಲಿ ಬಂಧಿಸಲ್ಪಟ್ಟ ಮಲ್ಯ, ಕಾನೂನು ಪ್ರಕ್ರಿಯೆಗಳು ಮುಂದುವರೆದಿದ್ದರೂ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ಮಲ್ಯ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ವಿಜಯ್ ಮಲ್ಯ 2016ರಲ್ಲಿ ಭಾರತವನ್ನು ತೊರೆದು ಲಂಡನ್‌ನಲ್ಲಿ ನೆನೆಸಿದ್ದಾರೆ. ಕಳೆದ ತಿಂಗಳು ವಿಜಯ್ ಮಲ್ಯ ಖ್ಯಾತ ಯೂಟ್ಯೂಬರ್ ರಾಜ್ ಶಮಾನಿ ಅವರಿಗೆ ನೀಡಿದ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ಸುಮಾರು 4 ಗಂಟೆಗಳ ಕಾಲ ನಡೆದ ಪಾಡ್‌ ಕಾಸ್ಟ್ ವಿಡಿಯೋ ಭಾರತದಾದ್ಯಂತ ಸಂಚಲನ ಮೂಡಿಸಿತ್ತು.

ಕಾನೂನು ಹೋರಾಟಗಳ ಹೊರತಾಗಿಯೂ, ಇಬ್ಬರೂ ವ್ಯಕ್ತಿಗಳು ಪ್ರತಿಭಟನೆ ಮತ್ತು ಆತ್ಮಸ್ಥೈರ್ಯದ ಸಂಕೇತವಾದ ಹಾಡನ್ನು ಹಾಡುವಾಗ ನಿರಾಳವಾಗಿ ಕಾಣಿಸಿಕೊಂಡರು. ಇನ್ನು ಈ ವಿಡಿಯೋ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗಳು ವ್ಯಕ್ತವಾಗಿವೆ. ಇನ್ನು ಭಾರತಕ್ಕೆ ವಂಚನೆ ಮಾಡಿ ವಿದೇಶದಲ್ಲಿ ನೆಲೆಸಿರುವ ಮತ್ತೋರ್ವ ಉದ್ಯಮಿ ನೀರವ್ ಮೋದಿ ಎಲ್ಲಿ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.