ಪ್ರೊ ಕಬಡ್ಡಿ ಲೀಗ್‌ನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಗುಜರಾತ್ ಜೈಂಟ್ಸ್ ವಿರುದ್ಧ ಗೋಲ್ಡನ್ ರೈಡ್‌ನಲ್ಲಿ ರೋಚಕ ಜಯ ಸಾಧಿಸಿದೆ. ಟೈಬ್ರೇಕರ್‌ನಲ್ಲೂ ಸಮಬಲವಾದ ನಂತರ ಗೋಲ್ಡನ್ ರೈಡ್ ಮೂಲಕ ಪಂದ್ಯದ ಫಲಿತಾಂಶ ನಿರ್ಧಾರವಾಯಿತು.  

ವಿಶಾಖಪಟ್ಟಣಂ: ಪ್ರೊ ಕಬಡ್ಡಿ 12ನೇ ಆವೃತ್ತಿಯಲ್ಲಿ 2ನೇ ಬಾರಿಗೆ ಪಂದ್ಯವೊಂದರ ಫಲಿತಾಂಶ ಗೋಲ್ಡನ್ ರೈಡ್‌ನಲ್ಲಿ ನಿರ್ಧಾರಗೊಂಡಿದೆ. ಮಂಗಳವಾರ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್, ಗೋಲ್ಡನ್ ರೈಡ್‌ನಲ್ಲಿ ಜಯಿಸಿ, ಅಂಕಪಟ್ಟಿಯಲ್ಲಿ 6 ಸ್ಥಾನಕ್ಕೇರಿತು.

ನಿಗದಿತ 40 ನಿಮಿಷಗಳ ಆಟ ಮುಗಿದಾಗ ಉಭಯ ತಂಡಗಳು 30-30 ಅಂಕಗಳಲ್ಲಿ ಸಮಬಲ ಸಾಧಿಸಿದವು. ಆಗ ಟೈ ಬ್ರೇಕರ್ ಮೊರೆ ಹೋಗಲಾಯಿತು. ಟೈ ಬ್ರೇಕರ್‌ನಲ್ಲಿ ಎರಡೂ ತಂಡಗಳು ತಲಾ 5 ರೈಡ್ ನಡೆಸಿ 5-5ರಲ್ಲಿ ಸಮಬಲ ಸಾಧಿಸಿದಾಗ, ಫಲಿ ತಾಂಶಕ್ಕಾಗಿ ಗೋಲ್ಡನ್ ರೈಡ್ ನಡೆಸಲಾಯಿತು. ಅದರಲ್ಲಿ ಜೈಪುರ ಜಯಿಸಿತು.

ಗೋಲ್ಡನ್ ರೈಡ್ ಹಾಗೆಂದರೇನು?

ಪಂದ್ಯ ಟೈ ಆದಾಗ ತಲಾ 5 ರೈಡ್‌ಗಳ ಟೈ ಬ್ರೇಕರ್ ನಡೆಸಲಾಗುತ್ತದೆ. ಅದೂ ಟೈಗೊಂಡರೆ ಆಗ ಗೋಲ್ಡನ್ ರೈಡ್ ಮೊರೆ ಹೋಗಲಾಗುತ್ತೆ. ಗೋಲ್ಡನ್ ರೈಡ್‌ನಲ್ಲಿ ಟಾಸ್ ಗೆಲ್ಲುವ ತಂಡ ಮೊದಲು ರೈಡ್ ಮಾಡುವ ಅವಕಾಶ ಪಡೆಯಲಿದೆ. ಆ ರೈಡ್‌ನಲ್ಲಿ ಅಂಕ ಗಳಿಸಿದರೆ ಪಂದ್ಯ ಗೆದ್ದಂತೆ. ಒಂದು ವೇಳೆ ರೈಡರ್ ಅಂಕ ಗಳಿಸದಿದ್ದರೆ ಅಥವಾ ಔಟಾದರೆ ಎದುರಾಳಿ ತಂಡ ಗೆಲ್ಲಲಿದೆ.

ಡೆಲ್ಲಿಗೆ ಜಯ

ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ದಬಾಂಗ್ ಡೆಲ್ಲಿ 45-34ರಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಜಯಿಸಿತು. ಸತತ 4ನೇ ಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು.

ಹಾಂಕಾಂಗ್ ಬ್ಯಾಡ್ಮಿಂಟನ್: ಸಾತ್ವಿಕ್-ಚಿರಾಗ್‌ಗೆ ಜಯ

ಹಾಂಕಾಂಗ್: ಮಂಗಳವಾರದಿಂದ ಆರಂಭವಾದ ಹಾಂಕಾಂಗ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ತಾರಾ ಜೋಡಿ ಸಾತ್ವಿಕ್ ಮತ್ತು ಚಿರಾಗ್ ಶೆಟ್ಟಿ ಶುಭಾರಂಭ ಮಾಡಿದೆ. ಸಾತ್ವಿಕ್ -ಚಿರಾಗ್ 1ನೇ ಸುತ್ತಿನಲ್ಲಿ ತೈವಾನ್‌ನ ಚಿಯು ಹ್ಯಾಂಗ್ ಮತ್ತು ವಾಂಗ್ ಚಿ-ಲಿನ್‌ರನ್ನು 21-13, 18 -21, 21-10 ಗೇಮ್‌ಗಳಲ್ಲಿ ಸೋಲಿಸಿದರು. ಇದೇ ವೇಳೆ ಕಿರಣ್ ಜಾರ್ಜ್ ಅರ್ಹತಾ ಸುತ್ತಿನಲ್ಲಿ ಜಯಿಸಿ ಪ್ರಧಾನ ಸುತ್ತಿಗೆ ಪ್ರವೇಶಿಸಿದ್ದಾರೆ.

ವಿಶ್ವ ಬಾಕ್ಸಿಂಗ್ ಕೂಟ: ನಿಖತ್ ಕ್ವಾರ್ಟರ್‌ಗೆ ಲಗ್ಗೆ

ಲಿವರ್‌ಪೂಲ್: ಎರಡು ಬಾರಿಯ ವಿಶ್ವ ಚಾಂಪಿಯನ್ ನಿಖಿತ್ ಜರೀನ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 51 ಕೇಜಿ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಅಂತಿಮ 16ರ ಸುತ್ತಿನಲ್ಲಿನಿಖತ್, ಜಪಾನ್‌ನ ಯುಮಾ ನಿನಾಕಾ ವಿರುದ್ಧ 5-0 ಅಂತರದಲ್ಲಿ ಜಯಿಸಿ, ಅಂತಿಮ-8ರ ಸುತ್ತಿಗೆ ಪ್ರವೇಶಿಸಿದರು. ನಿಖತ್ ಮುಂದಿನ ಸುತ್ತಿನಲ್ಲಿ 2 ಬಾರಿ ಒಲಿಂಪಿಕ್ ಬೆಳ್ಳಿ ವಿಜೇತೆ ಟರ್ಕಿಯ ಬುಸೆ ನಾಜ್ ಕಾಕಿರೋಗ್ಲು ಅವರನ್ನು ಎದುರಿಸಲಿದ್ದಾರೆ. ಪುರುಷರ ವಿಭಾಗದಲ್ಲಿ ಭಾರತಕ್ಕೆ ಹಿನ್ನಡೆ ಉಂಟಾಯಿತು. ಸುಮಿತ್ ಕುಂಡು (75 ಕೆ.ಜಿ.), ಸಚಿನ್ ಸಿವಾಚ್ (60 ಕೆ.ಜಿ.) ಹಾಗೂ ನರೇಂದರ್‌ ಬೆರ್ವಾಲ್ (90+ ಕೆ.ಜಿ.) ಪ್ರಿ ಕ್ವಾರ್ಟ‌್ರನಲ್ಲಿ ಸೋತು ಹೊರಬಿದ್ದರು.

ಶೂಟಿಂಗ್ ವಿಶ್ವಕಪ್: ಭಾರತೀಯರಿಗೆ ನಿರಾಸೆ

ನಿನ್ನೊ(ಚೀನಾ): ಇಲ್ಲಿ ಮಂಗಳವಾರ ಆರಂಭಗೊಂಡ ಐಎಸ್‌ಎಸ್‌ಎಫ್‌ ಶೂಟಿಂಗ್ ವಿಶ್ವಕಪ್‌ನ ಮೊದಲ ದಿನ ಭಾರತೀಯರು ನಿರಾಸೆ ಅನುಭವಿಸಿದರು. 10 ಮೀ. ಏರ್ ಪಿಸ್ತೂಲ್ ಹಾಗೂ ರೈಫಲ್ ಮಿಶ್ರ ತಂಡ ವಿಭಾಗಗಳಲ್ಲಿ ಭಾರತ ಫೈನಲ್‌ಗೇರಲು ವಿಫಲವಾಯಿತು. ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಎರಡು ತಂಡಗಳು ಕ್ರಮವಾಗಿ 11 ಹಾಗೂ 13ನೇ ಸ್ಥಾನ ಪಡೆದರೆ, ಏರ್ ರೈಫಲ್‌ ವಿಭಾಗದಲ್ಲಿ ಭಾರತ ತಂಡಗಳು ಕ್ರಮವಾಗಿ 14 ಹಾಗೂ 34ನೇ ಸ್ಥಾನಕ್ಕೆ ತೃಪ್ತಿಪಟ್ಟವು.

ಆರ್ಚರಿ ವಿಶ್ವ ಕೂಟ: ಕಂಚಿಗೆ ಭಾರತ ಸೆಣಸು

ಗ್ಯಾಂಗ್ಲು (ದ.ಕೊರಿಯಾ): ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ನ ರೀಕರ್ವ್ ವಿಭಾಗದಲ್ಲಿ ಭಾರತದ ಮಹಿಳಾ ತಂಡ ಕಂಚಿನ ಪದಕದ ಪಂದ್ಯಕ್ಕೆ ಅರ್ಹತೆ ಪಡೆದಿದೆ. ದೀಪಿಕಾ, ಅಂಕಿತಾ ಹಾಗೂ 15ರ ಗಥಾ ಖಾಡೆ ಅವರನ್ನೊಳಗೊಂಡ ಮಹಿಳಾ ತಂಡ ಸೆಮಿ ಫೈನಲ್‌ನಲ್ಲಿ ಜಪಾನ್ ವಿರುದ್ಧ 2-6ರಲ್ಲಿ ಸೋಲುಂಡಿತು. ಕಂಚಿಗಾಗಿ ಭಾರತ, ದ.ಕೊರಿಯಾ ವಿರುದ್ಧ ಆಡಲಿದೆ.