ಪ್ರೊ ಕಬಡ್ಡಿ ಲೀಗ್‌ನ ಮಿನಿ ಕ್ವಾಲಿಫೈಯರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ತೆಲುಗು ಟೈಟನ್ಸ್ ವಿರುದ್ಧ 32-37 ಅಂಕಗಳಿಂದ ವೀರೋಚಿತ ಸೋಲನುಭವಿಸಿತು. ಈ ಸೋಲಿನಿಂದಾಗಿ ಬುಲ್ಸ್ ನೇರವಾಗಿ ಎಲಿಮಿನೇಟರ್ 3ಕ್ಕೆ ಅರ್ಹತೆ ಪಡೆಯುವ ಅವಕಾಶವನ್ನು ಕಳೆದುಕೊಂಡಿದೆ.

ನವದೆಹಲಿ: ಅಂತಿಮ ಕ್ಷಣದ ಒತ್ತಡವನ್ನು ನಿಭಾಯಿಸುವಲ್ಲಿ ವಿಫಲಗೊಂಡ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 12ನೇ ಆವೃತ್ತಿಯ ತನ್ನ ಮಿನಿ ಕ್ವಾಲಿಫೈಯರ್‌ ಪಂದ್ಯದಲ್ಲಿ ತೆಲುಗು ಟೈಟನ್ಸ್‌ ವಿರುದ್ಧ 5 ಅಂಕಗಳ ವೀರೋಚಿತ ಸೋಲನುಭವಿಸಿತು. ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿಭಾನುವಾರ ನಡೆದ ದ್ವಿತೀಯ ಪಂದ್ಯದಲ್ಲಿ ಬುಲ್ಸ್‌ ತಂಡ 32-37 ಅಂಕಗಳಿಂದ ಟೈಟನ್ಸ್‌ ಎದುರು ಪರಾಭವಗೊಂಡಿತು. ಹೀಗಾಗಿ ನೇರವಾಗಿ ಎಲಿಮಿನೇಟರ್‌ 3ಕ್ಕೆ ಅರ್ಹತೆ ಗಳಿಸುವ ಅವಕಾಶವನ್ನು ಬುಲ್ಸ್‌ ತಂಡ ಕೈಚೆಲ್ಲಿತು. ಈ ಸೋಲಿನಿಂದಾಗಿ ಬುಲ್ಸ್‌ ತಂಡವು ಅಕ್ಬೋಬರ್‌ 27ರಂದು ಎಲಿನೇಟರ್‌ 2ರಲ್ಲಿ ಪಾಟ್ನಾ ಪೈರೇಟ್ಸ್‌ ತಂಡವನ್ನು ಎದುರಿಸಲಿದೆ.

ಮೊದಲಾರ್ಧದಲ್ಲಿ ಅಲಿರೇಜಾ ನಿರಾಸೆ

ಬುಲ್ಸ್‌ ತಂಡದ ಪರ ಅಲಿರೇಜಾ ಮಿರ್ಜಾಯಿನ್‌ ಮೊದಲಾರ್ಧದಲ್ಲಿ ನಿರಾಸೆ ಮೂಡಿಸಿದರೂ ಅಂತಿಮವಾಗಿ 11 ಅಂಕ ಗಳಿಸಿ ತಂಡದ ಹೋರಾಟಕ್ಕೆ ಬಲ ತುಂಬಿದರೆ, ಆಶಿಶ್‌, ಆಕಾಶ್‌ ಮತ್ತು ಸತ್ಯಪ್ಪ ತಲಾ 4 ಅಂಕ ಗಳಿಸಿದರು. ಅತ್ತ ಟೈಟನ್ಸ್‌ ತಂಡದ ಪರ ವಿಜಯ್‌ ಮಲಿಕ್‌ ಮತ್ತು ಭರತ್‌ ಕ್ರಮವಾಗಿ 10 ಮತ್ತು 12 ಅಂಕ ಗಳಿಸಿ ತಂಡದ ರೋಚಕ ಗೆಲುವಿಗೆ ಕಾರಣರಾದರು.

ಮೊದಲ 30 ನಿಮಿಷಗಳ ಆಟದಲ್ಲಿಉಭಯ ತಂಡಗಳು ಜಿದ್ದಾಜಿದ್ದಿನ ಆಟ ತೋರಿದ ಕಾರಣ ಕೊನೆಯ ಹತ್ತು ನಿಮಿಷಗಳ ಆಟ ರೋಚಕತೆಗೆ ಕಾರಣವಾಯಿತು. ಪ್ರತಿ ರೇಡ್‌ ಮತ್ತು ಟ್ಯಾಕಲ್‌ ಪ್ರೇಕ್ಷಕರ ಕರತಾಡತನಕ್ಕೆ ಸಾಕ್ಷಿಯಾಯಿತು. ಆದರೆ 34ನೇ ನಿಮಿಷದಲ್ಲಿ ಬುಲ್ಸ್‌ ತಂಡವನ್ನು ಆಲೌಟ್ ಮಾಡಿದ ಟೈಟನ್ಸ್‌ ಮೇಲುಗೈ ಸಾಧಿಸಿ ಎದುರಾಳಿ ತಂಡದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಯಿತು. ಇದರಿಂದ ಬುಲ್ಸ್‌ ಆಟಗಾರರು ಹೊರಬರಲು ಶ್ರಮಿಸಿದರೂ ಸಾಧ್ಯವಾಗಲಿಲ್ಲ.

ದ್ವಿತಿಯಾರ್ಧದಲ್ಲಿ ಆಕ್ರಮಣಕಾರಿ ಆಟವಾಡಿದ ಬುಲ್ಸ್

ಹಿನ್ನಡೆ ತಗ್ಗಿಸುವ ನಿಟ್ಟಿನಲ್ಲಿ ಬೆಂಗಳೂರು ಬುಲ್ಸ್‌ ತಂಡ ದ್ವಿತೀಯಾರ್ಧ ಆರಂಭಿಸಿತು. ಚುರುಕಿನ ರೇಡಿಂಗ್‌ ಮೂಲಕ ಎದುರಾಳಿ ತಂಡದಲ್ಲಿ ಗೊಂದಲ ಮೂಡಿಸಿತು. ಜತೆಗೆ 26ನೇ ನಿಮಿಷದಲ್ಲಿ ಟೈಟನ್ಸ್‌ ತಂಡವನ್ನು ಆಲೌಟ್‌ ಮಾಡಿದ ಬುಲ್ಸ್‌ ತಂಡ 21-20ರಲ್ಲಿ ಮೇಲುಗೈ ಸಾಧಿಸಿತು. ರೇಡಿಂಗ್‌ಗೆ ಇಳಿದ ವಿಜಯ್‌ ಮಲಿಕ್‌ ಅವರನ್ನು ಅದ್ಭುತವಾಗಿ ಟ್ಯಾಕಲ್‌ ಮಾಡಿದ ಸತ್ಯಪ್ಪ ಮಟ್ಟಿ, ಪಂದ್ಯದಲ್ಲಿ ಮೊದಲ ಸಲ ಬುಲ್ಸ್‌ಗೆ ಮೇಲುಗೈ ತಂದುಕೊಟ್ಟರು. ಟೈಟನ್ಸ್‌ ಸಹ ಪ್ರಬಲ ಪ್ರತಿರೋಧ ನೀಡದ ಕಾರಣ 30 ನಿಮಿಷಗಳ ಅಂತ್ಯಕ್ಕೆ 24-24ರಲ್ಲಿ ಸಮಬಲದ ಹೋರಾಟ ಸಂಘಟಿಸಿತು.

ಇದಕ್ಕೂ ಮುನ್ನ ನಡೆದ ಎಲಿಮಿನೇಟ‌ರ್ -1 ಪಂದ್ಯದಲ್ಲಿ ಜೈಪುರ ವಿರುದ್ಧ ಪಾಟ್ನಾ 48-32 ಅಂಕಗಳಿಂದ ಜಯಗಳಿಸಿ, ಎಲಿಮಿನೇಟರ್-2 ಪ್ರವೇಶಿಸಿತು. ಜೈಪುರ ಟೂರ್ನಿಯಿಂದಲೇ ಹೊರಬಿತ್ತು.

ಇಂದಿನ ಪಂದ್ಯಗಳ ವೇಳಾಪಟ್ಟಿ

ಎಲಿಮಿನೇಟರ್-2: ಬೆಂಗಳೂರು ಬುಲ್ಸ್ - ಪಾಟ್ನಾ ಪೈರೇಟ್ಸ್‌: ರಾತ್ರಿ 8

ಕ್ವಾಲಿಫೈರ್ -1: ಪುಣೇರಿ ಪಲ್ಟಾನ್- ಡೆಲ್ಲಿ ಕ್ಯಾಪಿಟಲ್ಸ್: ರಾತ್ರಿ 9