ಜ್ಯುರಿಚ್‌ನಲ್ಲಿ ನಡೆದ ಡೈಮಂಡ್‌ ಲೀಗ್‌ ಫೈನಲ್‌ನಲ್ಲಿ ನೀರಜ್‌ ಚೋಪ್ರಾ 2ನೇ ಸ್ಥಾನ ಗಳಿಸಿದರು. 2022ರಲ್ಲಿ ಚಾಂಪಿಯನ್‌ ಆಗಿದ್ದ ನೀರಜ್‌, ಈ ಬಾರಿ ಚಿನ್ನ ಗೆಲ್ಲುವಲ್ಲಿ ವಿಫಲರಾದರು. ಜರ್ಮನಿಯ ಜೂಲಿಯನ್‌ ವೆಬೆರ್‌ ಚಾಂಪಿಯನ್‌ ಪಟ್ಟ ಅಲಂಕರಿಸಿದರು.

ಜ್ಯುರಿಚ್‌: ಭಾರತದ ತಾರಾ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಈ ಬಾರಿ ಡೈಮಂಡ್‌ ಲೀಗ್‌ ಫೈನಲ್‌ ಗೆಲ್ಲಲು ವಿಫಲರಾಗಿದ್ದಾರೆ. 2022ರಲ್ಲಿ ಚಾಂಪಿಯನ್‌ ಆಗಿದ್ದ ನೀರಜ್‌, ಸ್ವಿಜರ್‌ಲೆಂಡ್‌ನ ಜ್ಯುರಿಚ್‌ನಲ್ಲಿ ನಡೆದ 2025ರ ಫೈನಲ್‌ನಲ್ಲಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇದು ಅವರಿಗೆ ಸತತ 3ನೇ ಡೈಮಂಡ್‌ ಲೀಗ್‌ ಬೆಳ್ಳಿ.

2022ರ ಫೈನಲ್‌ ಜ್ಯುರಿಚ್‌ನಲ್ಲೇ ನಡೆದಿತ್ತು. ಅದರಲ್ಲಿ ನೀರಜ್‌ ಚಿನ್ನ ಗೆದ್ದಿದ್ದರು. ಬಳಿಕ 2023, 2024ರ ಫೈನಲ್‌ಗಳಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಈ ಬಾರಿ ಚಿನ್ನದ ನಿರೀಕ್ಷೆ ಇತ್ತಾದರೂ, ಅದು ಕೈಗೂಡಲಿಲ್ಲ.

Scroll to load tweet…

8 ಮಂದಿಯಿಂದ ಸ್ಪರ್ಧೆಯ ಮೊದಲ ಪ್ರಯತ್ನದಲ್ಲಿ 84.35 ಮೀ. ದೂರಕ್ಕೆ ಜಾವೆಲಿನ್‌ ಎಸೆದ ನೀರಜ್‌, 2ನೇ ಪ್ರಯತ್ನದಲ್ಲಿ 82 ಮೀ. ದಾಖಲಿಸಿದರು. ಬಳಿಕ 3, 4, 5ನೇ ಎಸೆತ ಫೌಲ್‌ ಆಯಿತು. ಕೊನೆ ಎಸೆತದಲ್ಲಿ 85.01 ಮೀ. ದಾಖಲಿಸಿ 2ನೇ ಸ್ಥಾನಕ್ಕೇರಿದರು. ನೀರಜ್ ಚೋಪ್ರಾ ಈ ಬಾರಿ 86 ಮೀಟರ್ ಗಡಿ ದಾಟಲೂ ಸಾಧ್ಯವಾಗಲಿಲ್ಲ. 2 ಬಾರಿ 90 ಮೀ. ಗಡಿ ದಾಟಿದ ಜರ್ಮನಿಯ ಜೂಲಿಯನ್‌ ವೆಬೆರ್‌ ಚಾಂಪಿಯನ್‌ ಆದರು. ಅವರು 2ನೇ ಪ್ರಯತ್ನದಲ್ಲಿ 91.51 ಮೀ. ದಾಖಲಿಸಿದರು. ಟ್ರೆನಿಡಾಡ್‌ನ ವಾಲ್ಕೊಟ್‌ ಕೆಶೋನ್‌(84.95 ಮೀ.) ಕಂಚು ಜಯಿಸಿದರು.

ಕಾಮನ್ವೆಲ್ತ್‌ ವೇಟ್‌ಲಿಫ್ಟಿಂಗ್‌: 2 ವಿಶ್ವ ದಾಖಲೆಯೊಂದಿಗೆ ಬಂಗಾರ ಗೆದ್ದ ಕೋಯಲ್‌

ಅಹಮದಾಬಾದ್‌: ಕಾಮನ್‌ವೆಲ್ತ್‌ ವೇಟ್‌ಲಿಫ್ಟಿಂಗ್‌ ಚಾಂಪಿಯ್‌ಶಿಪ್‌ನಲ್ಲಿ ಭಾರತದ ಕೋಯೆಲ್‌ ಬರ್‌ 2 ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ. ಯೂತ್‌ ಹಾಗೂ ಜೂನಿಯರ್‌ ಎರಡೂ ವಿಭಾಗದಲ್ಲಿ ಸ್ಪರ್ಧಿಸಿದ ಕೋಯಲ್‌, ಮಹಿಳೆಯರ 53 ಕೆ.ಜಿ. ಸ್ಪರ್ಧೆಯಲ್ಲಿ ಒಟ್ಟು 192 ಕೆ.ಜಿ. ಭಾರ ಎತ್ತಿದರು. ಸ್ನ್ಯಾಚ್‌ನಲ್ಲಿ 85 ಕೆ.ಜಿ. ಹಾಗೂ ಕ್ಲೀನ್ ಆ್ಯಂಡ್‌ ಜರ್ಕ್‌ನಲ್ಲಿ 107 ಕೆ.ಜಿ. ಭಾರ ಎತ್ತಿದರು. ಸ್ನ್ಯಾಚ್‌ನಲ್ಲಿ ಯೂತ್‌ ವಿಶ್ವದಾಖಲೆ ಸರಿಗಟ್ಟಿದ ಅವರು, ಬಳಿಕ ಕ್ಲೀನ್‌ ಆ್ಯಂಡ್‌ ಜರ್ಕ್‌ನಲ್ಲಿ ದಾಖಲೆ(105 ಕೆ.ಜಿ.) ಮುರಿದರು. ಒಟ್ಟಾರೆ ಕೆ.ಜಿ.ಯಲ್ಲೂ ಅವರು ಯೂತ್‌ ವಿಶ್ವ ದಾಖಲೆ ಅಳಿಸಿ ಹಾಕಿದರು. ಈ ಹಿಂದೆ 188 ಕೆ.ಜಿ. ಭಾರ ಎತ್ತಿದ್ದು ದಾಖಲೆಯಾಗಿತ್ತು.

ಏಷ್ಯನ್‌ ಶೂಟಿಂಗ್‌: ರಾಜ್ಯದ ಅನುಷ್ಕಾ ಬಂಗಾರ ಸಾಧನೆ

ಶಿಮ್ಕೆಂಟ್‌: ಕರ್ನಾಟಕದ ಅನುಷ್ಕಾ ತೋಕೂರ್‌ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ನ ಕಿರಿಯರ ವಿಭಾಗದ 50 ಮೀ. ರೈಫಲ್‌ 3 ಪೊಸಿಷನ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

ಅನುಷ್ಕಾ 460.7 ಅಂಕದಿಂದ ಚಿನ್ನ, ದ.ಕೊರಿಯಾದ ಓ ಸಿಹೀ (455.7) ಬೆಳ್ಳಿ, ಸಿಮ್‌ ಯೋಜಿನ್‌ (443.9) ಕಂಚಿನ ಪದಕ ಗಳಿಸಿದರು. ತಂಡ ವಿಭಾಗದಲ್ಲಿ ಅನುಷ್ಕಾ (583), ಪ್ರಾಚಿ (588) ಮತ್ತು ಸಂಧು (587) ಚಿನ್ನ ಜಯಿಸಿದರು. ಇನ್ನು 25 ಮೀ. ಪುರುಷರ ಕಿರಿಯರ ವಿಭಾಗದಲ್ಲಿ ಸಮೀರ್‌ ಅವರು ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಹಿರಿಯರ ವಿಭಾಗದ 50 ಮೀ. ರೈಫಲ್‌ 3 ಪೊಸಿಷನ್‌ನಲ್ಲಿ ಸಿಫ್ತ್‌ ಕೌರ್‌ ಸಾಮ್ರಾ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಅವರು 459.2 ಅಂಕದೊಂದಿಗೆ ಚೀನಾದ ಯಂಗ್‌ ಯುಜೈ (458.8) ಅವರನ್ನು ಹಿಂದಿಕ್ಕಿ ಚಿನ್ನ ಗಳಿಸಿದರು. ಸಿಫ್ತ್‌ ಅವರು ಅಂಜುಮ್‌ ಮೌದ್ಗಿಲ್‌, ಆಶಿ ಚೋಕ್ಸಿ ಜೊತೆಗೂಡಿ ತಂಡ ವಿಭಾಗದಲ್ಲೂ ಚಿನ್ನಕ್ಕೆ ಕೊರಳೊಡ್ಡಿದರು.

ಭಾರತ ಕೂಟದಲ್ಲಿ 39 ಚಿನ್ನ, 14 ಬೆಳ್ಳಿ, 17 ಕಂಚು ಸೇರಿ ಒಟ್ಟು 70 ಪದಕ ಗೆದ್ದಿದ್ದು, ಅಗ್ರಸ್ಥಾ ಕಾಯ್ದುಕೊಂಡಿದೆ.