ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಎಚ್‌.ಎಸ್‌. ಪ್ರಣಯ್ 5 ಮ್ಯಾಚ್ ಪಾಯಿಂಟ್‌ಗಳನ್ನು ಉಳಿಸಿ ಜಯ ಸಾಧಿಸಿದರು. ಆದರೆ ಲಕ್ಷ್ಯ ಸೇನ್ ಮೊದಲ ಸುತ್ತಿನಲ್ಲೇ ಸೋತು ನಿರಾಸೆ ಅನುಭವಿಸಿದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಅನುಪಮಾ ಉಪಾಧ್ಯಾಯ ಸಹ ಸೋಲು ಕಂಡರು.

ಚಾಂಗ್ಝೌ: ಇಲ್ಲಿ ನಡೆಯುತ್ತಿರುವ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್‌ ಎಚ್‌.ಎಸ್‌ ಪ್ರಣಯ್ 5 ಮ್ಯಾಚ್‌ ಪಾಯಿಂಟ್‌ ಉಳಿಸಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದರು. ಆದರೆ ಯುವ ತಾರೆ ಲಕ್ಷ್ಯ ಸೇನ್ ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರ ಬಿದ್ದರು.

ವಿಶ್ವದ ನಂ.35 ಆಟಗಾರ ಪ್ರಣಯ್‌ ಜಪಾನ್‌ನ ವಟನಾಬೆಯನ್ನು 8- 21, 21-16, 23-21 ಅಂಕಗಳ ಅಂತರದಿಂದ ಸೋಲಿಸಿದರು. ಇತ್ತ ಲಕ್ಷ್ಯ ಚೀನಾದ ಲಿ ಶಿ ಫೆಂಗ್‌ ವಿರುದ್ಧ 21-14, 22-24, 11-21 ಅಂಕಗಳಲ್ಲಿ ಪರಾಭವಗೊಂಡು ಟೂರ್ನಿಯಿಂದ ಹೊರ ನಡೆದರು. ಮತ್ತೊಂದೆಡೆ ಮಹಿಳೆಯರ ಸಿಂಗಲ್ಸ್‌ನಲ್ಲಿ ಅನುಪಮಾ ಉಪಾಧ್ಯಾಯ ಚೈನೀಸ್‌ ತೈಪೆಯ ಲಿನ್ ಹ್ಸಿಯಾಂಗ್ ಟಿ ವಿರುದ್ಧ 23-21, 11-21, 10-21 ಅಂತರದಲ್ಲಿ ಸೋತರು. ಮಿಶ್ರ ಡಬಲ್ಸ್‌ನಲ್ಲಿ ಎ ಸೂರ್ಯ - ಎ ಪ್ರಮುತೇಶ್‌ ಮತ್ತು ರೋಹನ್‌ ಕಪೂರ್‌-ಋತ್ವಿಕಾ ಗಡ್ಡೆ ಜೋಡಿ ಆರಂಭಿಕ ಸುತ್ತಿನ ಪಂದ್ಯಗಳಲ್ಲಿ ಸೋತು ಹೊರಬಿತ್ತು.

ಪ್ರಮುಖವಾಗಿ ಮಾಜಿ ವಿಶ್ವ ನಂ.1 ಪುರುಷ ಡಬಲ್ಸ್‌ ಜೋಡಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ ಮುಂಬರುವ ವಿಶ್ವ ಚಾಂಪಿಯನ್‌ಶಿಪ್‌ಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಕಾತರದಲ್ಲಿದೆ. ವಿಶ್ವ ಚಾಂಪಿಯನ್‌ಶಿಪ್‌ ಆ.25ರಿಂದ 31ರ ವರೆಗೆ ಪ್ಯಾರಿಸ್‌ನಲ್ಲಿ ನಡೆಯಲಿದೆ. ಸದ್ಯ ವಿಶ್ವ ರ್‍ಯಾಂಕಿಂಗ್‌ನಲ್ಲಿ 15ನೇ ಸ್ಥಾನದಲ್ಲಿರುವ ಸಾತ್ವಿಕ್‌-ಚಿರಾಗ್‌ ಮೊದಲ ಪಂದ್ಯದಲ್ಲಿ ಜಪಾನ್‌ನ ಕಿನ್ಯಾ ಮಿಟ್ಸುಹಾಶಿ-ಹಿರೊಕಿ ಒಕಮುರಾ ವಿರುದ್ಧ ಆಡಲಿದ್ದಾರೆ.

ಜೂ. ಏಷ್ಯಾ ಬ್ಯಾಡ್ಮಿಂಟನ್‌: ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ಹೊರಬಿದ್ದ ಭಾರತ

ಸೊಲೊ(ಇಂಡೋನೆಷ್ಯಾ): ಇಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ಏಷ್ಯಾ ಜೂನಿಯರ್‌ ಮಿಶ್ರ ತಂಡ ಚಾಂಪಿಯನ್‌ಶಿಪ್‌ನಲ್ಲಿ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತ ತಂಡ ಜಪಾನ್ ವಿರುದ್ಧ ಸೋತು ಟೂರ್ನಿಯಿಂದ ಹೊರ ಬಿದ್ದಿತು. 

‘ಡಿ’ ಗುಂಪಿನಲ್ಲಿ ಹ್ಯಾಟ್ರಿಕ್ ಜಯದ ಮೂಲಕ ಅಗ್ರಸ್ಥಾನಕ್ಕೇರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದ ಭಾರತ ಜಪಾನ್ ಎದುರು 104-110 ಅಂಕಗಳ ಅಂತರದಲ್ಲಿ ಶರಣಾಗಿ ನಿರಾಸೆ ಅನುಭವಿಸಿತು. ಸದ್ಯ ಭಾರತದ ಬ್ಯಾಡ್ಮಿಂಟನ್‌ ತಾರೆಯರು ಜು.23ರಿಂದ ಆರಂಭವಾಗಲಿರುವ ವೈಯಕ್ತಿಕ ಪಂದ್ಯಗಳಲ್ಲಿ ಗೆಲ್ಲುವ ಕಾತರದಲ್ಲಿದ್ದಾರೆ.

ಅ.3ರಿಂದ ಭಾರತದಲ್ಲಿ ಪುರುಷರ ಚೆಸ್‌ ವಿಶ್ವಕಪ್‌

ನವದೆಹಲಿ: ಈ ಬಾರಿಯ ಫಿಡೆ ಪುರುಷರ ಚೆಸ್‌ ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸಲಿದ್ದು, ಅ.30ರಿಂದ ನ.27ರವರೆಗೆ ಟೂರ್ನಿ ನಡೆಯಲಿದೆ. ಈ ಬಗ್ಗೆ ಚೆಸ್‌ನ ಜಾಗತಿಕ ಆಡಳಿತ ಮಂಡಳಿ ಫಿಡೆ ಸೋಮವಾರ ಘೋಷಿಸಿದೆ. ಆದರೆ ಭಾರತದ ಯಾವ ನಗರದಲ್ಲಿ ಟೂರ್ನಿ ನಡೆಯಲಿದೆ ಎನ್ನುವುದನ್ನು ಬಹಿರಂಗಪಡಿಸಿಲ್ಲ. ಟೂರ್ನಿಯಲ್ಲಿ 206 ಮಂದಿ ಪಾಲ್ಗೊಳ್ಳಲಿದ್ದು, 2026ರ ಫಿಡೆ ಕ್ಯಾಂಡಿಡೇಟ್ಸ್‌ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಪೈಪೋಟಿ ನಡೆಸಲಿದ್ದಾರೆ.

ಈ ಹಿಂದೆ 2002ರಲ್ಲಿ ಹೈದರಾಬಾದ್‌ನಲ್ಲಿ ಚೆಸ್‌ ವಿಶ್ವಕಪ್‌ ಆಯೋಜಿಸಲಾಗಿತ್ತು. ಆಗ ವಿಶ್ವನಾಥನ್ ಆನಂದ್‌ ಪ್ರಶಸ್ತಿ ಗೆದ್ದಿದ್ದರು. ಅದಾದ ಬಳಿಕ ಭಾರತ ಈ ಟೂರ್ನಿಗೆ ಆತಿಥ್ಯ ವಹಿಸುತ್ತಿರುವುದು ಇದೇ ಮೊದಲು.

ಚೆಸ್‌ ವಿಶ್ವಕಪ್: ಕೊನೆರು, ದಿವ್ಯಾ ಮೊದಲ ಗೇಮ್‌ ಡ್ರಾ

ಬತೂಮಿ: ಫಿಡೆ ಮಹಿಳಾ ಚೆಸ್‌ ವಿಶ್ವಕಪ್‌ನಲ್ಲಿ ಬುಧವಾರ ನಡೆದ ಎರಡೂ ಸೆಮಿಫೈನಲ್‌ನ ಮೊದಲ ಗೇಮ್‌ ಡ್ರಾಗೊಂಡಿವೆ. ಭಾರತದ ಗ್ರ್ಯಾಂಡ್‌ಮಾಸ್ಟರ್‌ ಕೊನೆರು ಹಂಪಿ ಹಾಗೂ ಚೀನಾದ ಲೀ ಟಿಂಗ್‌ಜೀ ನಡುವಿನ ಪಂದ್ಯ, ಭಾರತದ ದಿವ್ಯಾ ದೇಶ್‌ಮುಖ್‌ ಹಾಗೂ ಚೀನಾದ ಟಾನ್‌ ಝೊಂಗ್ಯಿ ನಡುವಿನ ಮತ್ತೊಂದು ಪಂದ್ಯ ಡ್ರಾ ಆಯಿತು. ಬುಧವಾರ 2ನೇ ಗೇಮ್‌ ನಡೆಯಲಿದೆ.