ಫಿಡೆ ಮಹಿಳಾ ಚೆಸ್‌ ವಿಶ್ವಕಪ್‌ನಲ್ಲಿ ಕೊನೆರು ಹಂಪಿ ಮತ್ತು ದಿವ್ಯಾ ದೇಶ್‌ಮುಖ್‌ ನಡುವಿನ ಫೈನಲ್‌ನ ಮೊದಲ ಗೇಮ್‌ ಡ್ರಾಗೊಂಡಿದೆ. ಭಾನುವಾರದ ಎರಡನೇ ಗೇಮ್‌ನಲ್ಲಿ ಹಂಪಿ ಬಿಳಿ ಕಾಯಿಗಳೊಂದಿಗೆ ಆಡಲಿದ್ದಾರೆ. ಟೈ ಆದರೆ ಸೋಮವಾರ ಟೈಬ್ರೇಕರ್‌ ನಡೆಯಲಿದೆ.

ಬಟುಮಿ(ಜಾರ್ಜಿಯಾ): ಭಾರತದ ಗ್ರ್ಯಾಂಡ್‌ಮಾಸ್ಟರ್‌ ಕೊನೆರು ಹಂಪಿ ಹಾಗೂ ಯುವ ತಾರೆ ದಿವ್ಯಾ ದೇಶ್‌ಮುಖ್‌ ನಡುವೆ ಇಲ್ಲಿ ನಡೆಯುತ್ತಿರುವ 3ನೇ ಆವೃತ್ತಿಯ ಫಿಡೆ ಮಹಿಳಾ ಚೆಸ್‌ ವಿಶ್ವಕಪ್ ಫೈನಲ್‌ನ ಮೊದಲ ಗೇಮ್‌ ಡ್ರಾಗೊಂಡಿದೆ.

ದಿವ್ಯಾ ಬಿಳಿ, ಕೊನೆರು ಕಪ್ಪು ಕಾಯಿಗಳೊಂದಿಗೆ ಆಡಿದರು. ಮೊದಲ ಗೇಮ್‌ 41 ನಡೆಗಳ ಬಳಿಕ ಡ್ರಾಗೊಂಡಿತು. ಆರಂಭದಲ್ಲಿ ದಿವ್ಯಾ ಮೇಲುಗೈ ಸಾಧಿಸಿದರೂ, ಬಳಿಕ ಕೊನೆರು ಹಂಪಿ ಪ್ರತಿರೋಧ ತೋರಿದರು. ಭಾನುವಾರ ನಡೆಯಲಿರುವ 2ನೇ ಗೇಮ್‌ನಲ್ಲಿ ಕೊನೆರು ಬಿಳಿ ಕಾಯಿಗಳೊಂದಿಗೆ ಆಡಲಿದ್ದಾರೆ. ಅವರು ಟೂರ್ನಿಯುದ್ದಕ್ಕೂ ಬಿಳಿ ಕಾಯಿಗಳೊಂದಿಗೆ ಆಡಿದ್ದು, ಅಜೇಯ ದಾಖಲೆ ಕಾಯ್ದುಕೊಂಡಿದ್ದಾರೆ. ಭಾನುವಾರದ ಗೇಮ್‌ ಕೂಡಾ ಡ್ರಾ ಆದರೆ ಸೋಮವಾರ ಟೈ ಬ್ರೇಕರ್‌ ನಡೆಯಲಿದೆ.

ಇದೇ ಮೊದಲ ಬಾರಿಗೆ ಮಹಿಳಾ ಚೆಸ್‌ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಇಬ್ಬರು ಮಹಿಳಾ ಸ್ಪರ್ಧಿಗಳು ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಹೇಗೆ ನಡೆಯುತ್ತೆ ಫೈನಲ್‌ ಪಂದ್ಯ?

ಫೈನಲ್‌ನಲ್ಲಿ 2 ಕ್ಲಾಸಿಕಲ್‌ ಗೇಮ್‌ ಇರಲಿದೆ. ಶನಿವಾರ ಮೊದಲ ಗೇಮ್‌, ಭಾನುವಾರ 2ನೇ ಗೇಮ್‌ ನಡೆಯಲಿದೆ. ಅಂಕಗಳು ಸಮಬಲಗೊಂಡರೆ ಸೋಮವಾರ ಟೈ ಬ್ರೇಕರ್‌ ನಡೆಯಲಿದೆ. ಇದರಲ್ಲಿ 2 ಸುತ್ತಿನ, ತಲಾ 10 ನಿಮಿಷಗಳ ರ್‍ಯಾಪಿಡ್‌ ಗೇಮ್‌ ಆಡಿಸಲಾಗುತ್ತದೆ. ಅಲ್ಲೂ ಟೈ ಆದರೆ ತಲಾ 5 ನಿಮಿಷಗಳ ಮತ್ತೆರಡು ಗೇಮ್‌ ನಡೆಸಲಾಗುತ್ತದೆ. ಫಲಿತಾಂಶ ಬರದಿದ್ದರೆ ತಲಾ 3 ನಿಮಿಷಗಳ 2 ಬ್ಲಿಟ್ಜ್‌ ಗೇಮ್‌ ಆಡಿಸಲಾಗುತ್ತದೆ. ಅಗತ್ಯಬಿದ್ದರೆ ಫಲಿತಾಂಶ ಬರುವವರೆಗೂ 3+2 ಬ್ಲಿಟ್ಜ್‌ ಗೇಮ್‌ ನಡೆಸಲಾಗುತ್ತದೆ.

ಚೀನಾ ಬ್ಯಾಡ್ಮಿಂಟನ್‌ನಲ್ಲಿ ಭಾರತ ಅಭಿಯಾನ ಅಂತ್ಯ

ಚೆಂಗ್ಝೌ: ಚೀನಾ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಅಭಿಯಾನ ಅಂತ್ಯಗೊಂಡಿದೆ. ಶನಿವಾರ ತಾರಾ ಪುರುಷ ಡಬಲ್ಸ್‌ ಜೋಡಿ ಸಾತ್ವಿಕ್-ಚಿರಾಗ್‌ ಶೆಟ್ಟಿ ಸೆಮಿಫೈನಲ್‌ನಲ್ಲಿ ಸೋಲುಂಡರು.

ಮಲೇಷ್ಯಾದ 2ನೇ ಶ್ರೇಯಾಂಕಿತ ಜೋಡಿ ಆ್ಯರೊನ್‌ ಚಿಯಾ ಹಾಗೂ ಸೊಹ್‌ ವೂಯ್‌ ಯಿಕ್‌ ವಿರುದ್ಧದ ಪಂದ್ಯದಲ್ಲಿ ಏಷ್ಯನ್‌ ಗೇಮ್ಸ್ ಚಾಂಪಿಯನ್‌ ಸಾತ್ವಿಕ್‌-ಚಿರಾಗ್‌ 13-21, 17-21ರಲ್ಲಿ ಪರಾಭವಗೊಂಡಿತು. 2022ರ ವಿಶ್ವ ಚಾಂಪಿಯನ್‌ ಹಾಗೂ 2 ಬಾರಿ ಒಲಿಂಪಿಕ್‌ ಪದಕ ವಿಜೇತ ಆ್ಯರೊನ್‌-ಸೊಹ್‌ ಜೋಡಿ ಫೈನಲ್‌ನಲ್ಲಿ ಇಂಡೋನೇಷ್ಯಾದ ಫಜರ್‌ ಅಲ್ಫಿಯಾನ್‌-ಮುಹಮ್ಮದ್‌ ಶೋಯಿಬುಲ್‌ ಫಿಕ್ರಿ ವಿರುದ್ಧ ಸೆಣಸಾಡಲಿದೆ.

ಜೂ. ಏಷ್ಯಾ ಬ್ಯಾಡ್ಮಿಂಟನ್‌: ತಾನ್ವಿ, ವೆನ್ನಲಾಗೆ ಕಂಚು

ಸೊಲೊ(ಇಂಡೋನೇಷ್ಯಾ): ಬ್ಯಾಡ್ಮಿಂಟನ್‌ ಏಷ್ಯಾ ಜೂನಿಯರ್‌ ವೈಯಕ್ತಿಕ ಚಾಂಪಿಯನ್‌ಶಿಪ್‌ನಲ್ಲಿ ಭಾರತ 2 ಪದಕ ತನ್ನದಾಗಿಸಿಕೊಂಡಿದೆ. ಮಹಿಳಾ ಸಿಂಗಲ್ಸ್‌ನಲ್ಲಿ ತಾನ್ವಿ ಶರ್ಮಾ ಹಾಗೂ ವೆನ್ನಲಾ ಕಲಗೋಟ್ಲ ಕಂಚು ಗೆದ್ದರು. ವೆನ್ನಲಾ ಅವರು ಚೀನಾದ ಲಿಯು ಸಿ ಯಾ ವಿರುದ್ಧ 15-21, 18-21 ಗೇಮ್‌ಗಳಲ್ಲಿ ಪರಾಭವಗೊಂಡರೆ, 2ನೇ ಶ್ರೇಯಾಂಕಿತ ತಾನ್ವಿ ಚೀನಾದ 8ನೇ ಶ್ರೇಯಾಂಕಿತೆ, ಯಿನ್‌ ಯಿ ಕ್ವಿಂಗ್‌ ವಿರುದ್ಧ 13-21, 14-21 ಗೇಮ್‌ಗಳಲ್ಲಿ ಸೋಲನುಭವಿಸಿದರು. ಭಾರತ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಮಹಿಳಾ ಸಿಂಗಲ್ಸ್‌ನಲ್ಲಿ 2 ಪದಕ ಗೆದ್ದ ಸಾಧನೆ ಮಾಡಿದೆ.

ಡೇವಿಸ್‌ ಕಪ್‌: ಸುಮಿತ್‌, ಯೂಕಿ ಭಾರತ ತಂಡಕ್ಕೆ

ನವದೆಹಲಿ: ಸೆ.12ರಂದು ಸ್ವಿಜರ್‌ಲೆಂಡ್ ವಿರುದ್ಧ ನಡೆಯಲಿರುವ ಡೇವಿಸ್‌ ಕಪ್‌ ಟೆನಿಸ್‌ನ ವಿಶ್ವ ಗುಂಪು 1ರ ಪಂದ್ಯಕ್ಕೆ ಭಾರತ ತಂಡ ಪ್ರಕಟಗೊಂಡಿದೆ. ತಾರಾ ಆಟಗಾರರಾದ ಸುಮಿತ್‌ ನಗಾಲ್‌, ಯೂಕಿ ಭಾಂಬ್ರಿ ತಂಡಕ್ಕೆ ಮರಳಿದ್ದಾರೆ. ನಗಾಲ್‌ 2023ರ ಸೆಪ್ಟೆಂಬರ್‌ನಲ್ಲಿ ಕೊನೆ ಬಾರಿ ಭಾರತ ಪರ ಆಡಿದ್ದರು. ಇನ್ನು, ಸಿಂಗಲ್ಸ್‌ನಲ್ಲಿ ನಗಾಲ್‌ ಜೊತೆ ಕರಣ್‌ ಸಿಂಗ್‌, ಆರ್ಯನ್‌ ಶಾ, ಡಬಲ್ಸ್‌ನಲ್ಲಿ ಯೂಕಿ ಜೊತೆ ಶ್ರೀರಾಮ್‌ ಬಾಲಾಜಿ ಇದ್ದಾರೆ.