ಮೋದಿ ಅವರು ಪ್ರಧಾನಿಗಳಾಗಿ ಬರುವುದಕ್ಕೂ ಹಿಂದಿನ ಭಾರತ; ಮೋದಿ ಅವರು ಬಂದ ನಂತರದ ಭಾರತ; ವ್ಯತ್ಯಾಸ ಸ್ಪಷ್ಟವಾಗಿದೆ. ಈಗ ಭಾರತವು ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳಲ್ಲಿ ತಾನೂ ಒಂದಾಗಿ ವಿರಾಜಮಾನವಾಗಿದೆ.
ಎಚ್.ಡಿ.ಕುಮಾರಸ್ವಾಮಿ, ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು, ಭಾರತ ಸರಕಾರ
ಮೋದಿ ಅವರು ಪ್ರಧಾನಿಗಳಾಗಿ ಬರುವುದಕ್ಕೂ ಹಿಂದಿನ ಭಾರತ; ಮೋದಿ ಅವರು ಬಂದ ನಂತರದ ಭಾರತ; ವ್ಯತ್ಯಾಸ ಸ್ಪಷ್ಟವಾಗಿದೆ. ಈಗ ಭಾರತವು ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳಲ್ಲಿ ತಾನೂ ಒಂದಾಗಿ ವಿರಾಜಮಾನವಾಗಿದೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ, ಆರ್ಥಿಕವಾಗಿ ಕ್ಷಿಪ್ರಗತಿಯ ಮುನ್ನಡೆ ಸಾಧಿಸುತ್ತಿರುವ ದೇಶವಾಗಿದೆ. ಭಾರತವು ಜಗತ್ತಿನ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಮುಂದಿನ ಎರಡೂವರೆ ಅಥವಾ ಮೂರು ವರ್ಷಗಳಲ್ಲಿ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮವ ಸಾಧ್ಯತೆ ನಿಚ್ಚಳವಾಗಿದೆ. ಪ್ರಸ್ತುತ ಭಾರತದ ಆರ್ಥಿಕತೆ 4 ಟ್ರಿಲಿಯನ್ ಡಾಲರ್ ಮೀರುತ್ತಿದೆ!
ಹನ್ನೊಂದು ವರ್ಷಗಳಲ್ಲಿ ಭಾರತ ಕಂಡ ಪರಿವರ್ತನಾತ್ಮಕ ಬೆಳವಣಿಯ ಒಂದು ಪ್ರಮುಖ ಅಂಶ ಇದು. ಈ ಸಾಧನೆ ದೇಶದ ಎಲ್ಲಾ ಕ್ಷೇತ್ರಗಳ ಸಮುಷ್ಠಿ ಅಭಿವೃದ್ಧಿಯನ್ನು ಹಾಗೂ ದೇಶದ ಬಲಿಷ್ಠ ನಾಯಕತ್ವವನ್ನು ಸಂಕೇತಿಸುತ್ತದೆ ಎನ್ನುವುದು ನನ್ನ ಸ್ಪಷ್ಟ ಪ್ರತಿಪಾದನೆ. ಅಂಗೈ ನೋಡಲು ಕನ್ನಡಿ ಬೇಕೇ? ಅಗತ್ಯವಿಲ್ಲ. ಇಷ್ಟು ಸಾಧನೆ ಸಾಕಾರವಾಗಿದ್ದು ಹೇಗೆ? ಮೂರು ಅಂಶಗಳನ್ನು ನಾನು ಉಲ್ಲೇಖಿಸಬಯಸುತ್ತೇನೆ. ಬಲಿಷ್ಠ ನಾಯಕತ್ವ, ಪ್ರಖರ ದೂರದೃಷ್ಟಿ, ಕ್ಷಿಪ್ರವಾಗಿ ನಿರ್ಧಾರಗಳನ್ನು ಕೈಗೊಳ್ಳುವ ದಿಟ್ಟತೆ; ಈ ಮೂರೂ ಅಂಶಗಳು ಮೋದಿ ಅವರಲ್ಲಿವೆ.
ಹಾಗೆ ನೋಡಿದರೆ ನರೇಂದ್ರ ಮೋದಿ ಅವರು ತಮ್ಮ ಬದುಕಿನ ‘ಅಮೃತ ಕಾಲʼದಲ್ಲಿದ್ದಾರೆ. ಭಾರತವೂ ‘ಅಮೃತಕಾಲʼವನ್ನು ದಾಟಿ ‘ಶತಮಾನದ ಸಮೃದ್ಧತೆʼಯತ್ತ ನಾಗಾಲೋಟದಲ್ಲಿ ಮುನ್ನಡೆಯುತ್ತಿದೆ. 2047ಕ್ಕೆ ಆತ್ಮನಿರ್ಭರತೆಯ ಮೂಲಕ ‘ವಿಕಸಿತ ಭಾರತʼ (ಅಭಿವೃದ್ಧಿ ಹೊಂದಿದ ಭಾರತ) ಸಾಕಾರ ಆಗಲೇಬೇಕೆನ್ನುವ ದೃಢ ಸಂಕಲ್ಪದೊಂದಿಗೆ ಪ್ರಧಾನಿಗಳು ವಿರತವಾಗಿ ಕೆಲಸ ಮಾಡುತ್ತಿದ್ದಾರೆ. ಇದು ವಿಧಿ ಲಿಖಿತವೋ ಅಥವಾ ಭಾರತೀಯರ ಸುಕೃತವೋ ನನಗೆ ತಿಳಿಯದು. ಆದರೆ; ಬಲಿಷ್ಠ ನಾಯಕತ್ವದ ಶ್ರೇಷ್ಠ ಸರಕಾರದಲ್ಲಿ ನಾನೂ ಒಂದು ಭಾಗವಾಗಿದ್ದೇನೆ ಎಂಬ ಹೆಮ್ಮೆ ನನಗಿದೆ. ಇದು ನನ್ನ ಪಾಲಿಗೆ ಸಾರ್ಥಕತೆ ಮತ್ತು ಧನ್ಯತೆ.
ದಿಟ್ಟ ರಾಜತಾಂತ್ರಿಕತೆ: ಭಾರತದ ಆರ್ಥಿಕತೆ ಇಷ್ಟೊಂದು ವೇಗ ಪಡೆಯಲು ಕಾರಣವೇನು? ಎಂದು ಯಾರಾದರೂ ಅಚ್ಚರಿಪಡಬಹುದು. ಮೋದಿ ಅವರ ನಾಯಕತ್ವ ಹಾಗೂ ಅನುಕೂಲಕರವಾದ ಭೌಗೋಳಿಕ ರಾಜಕೀಯ ಹಾಗೂ ಆರ್ಥಿಕ ಪರಿಸ್ಥಿತಿಗಳ ಯಶಸ್ವಿ, ಪರಿಣಾಮಕಾರಿ ನಿರ್ವಹಣೆ, ದಿಟ್ಟ ರಾಜತಾಂತ್ರಿಕತೆ ಹಾಗೂ ಉತ್ಪಾದಕತೆಗೆ ಹೆಚ್ಚು ಒತ್ತು ನೀಡಿದ್ದೇ ಇದಕ್ಕೆ ಕಾರಣ ಎಂದು ತಜ್ಞರು ಒತ್ತಿ ಹೇಳುತ್ತಿದ್ದಾರೆ. ಕಳೆದ ಹನ್ನೊಂದು ವರ್ಷಗಳ ಭಾರತದ ಯಶೋಗಾಥೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನರೇಂದ್ರ ಮೋದಿ ಅವರ ದಿಟ್ಟಹೆಜ್ಜೆಗಳು ನಮಗೆ ಉತ್ತರ ಕೊಡುತ್ತವೆ. ಅನ್ಯರಾಷ್ಟ್ರಗಳ ಸುಂಕ ಸಮರದ ನಡುವೆಯೂ ಭಾರತದ ಆರ್ಥಿಕತೆ ಗಟ್ಟಿಯಾಗಿ ನಿಂತಿದೆ ಮತ್ತು ಸತತ ಬೆಳವಣಿಗೆಯನ್ನು ಕಾಯ್ದುಕೊಂಡಿದೆ. ಪ್ರಧಾನಿಗಳ ಕಾರ್ಯಕ್ರಮಗಳನ್ನು ಒಮ್ಮೆ ಸ್ಥೂಲವಾಗಿ ಅವಲೋಕನ ಮಾಡೋಣ. ರಾಷ್ಟ್ರದ ಅಭಿವೃದ್ಧಿಯಲ್ಲಿ ಅವೆಲ್ಲವೂ ಎಷ್ಟು ಆಳವಾಗಿ ಪರಿವರ್ತನಾತ್ಮಕ ಕೊಡುಗೆ ನೀಡಿವೆ ಎಂಬುದನ್ನು ನಾವು ಗಮನಿಸಬಹುದು. ನಾನು ಕೆಲವನ್ನಷ್ಟೇ ಇಲ್ಲಿ ಉಲ್ಲೇಖಿಸುತ್ತೇನೆ.
‘ಸ್ವಚ್ಛ ಭಾರತʼ ಎನ್ನುವ ಪರಿಕಲ್ಪನೆಯೇ ಪರಿವರ್ತನೆಗೆ ಒಂದು ದೊಡ್ಡ ಸಾಕ್ಷಿ ಮತ್ತು ಪ್ರೇರಣೆ. ಈ ಹಿಂದೆ ಅನೇಕರು ಸ್ವಚ್ಛತೆ, ನೈರ್ಮಲ್ಯದ ಬಗ್ಗೆ ಸಾರಿ ಸಾರಿ ಹೇಳಿದ್ದಾರೆ. ಆದರೆ, ನಮ್ಮ ವ್ಯವಸ್ಥೆ ಅವರ ಮಾತುಗಳಿಗೆ ಎಷ್ಟರಮಟ್ಟಿಗೆ ಕಿವಿಗೊಟ್ಟಿತ್ತು ಎಂಬುದನ್ನು ನಾವು-ನೀವೂ ನೋಡಿದ್ದೇವೆ. ಆದರೆ, ಮೋದಿ ಅವರು ಪ್ರಥಮ ಅವಧಿಗೆ ಪ್ರಧಾನಿಗಳಾದ ಕೂಡಲೇ ಸ್ವಚ್ಛತೆ ಬಗ್ಗೆ ಮಾತನಾಡಿದರು. ‘ನಮ್ಮ ಪೂರ್ವಜರು ನಮಗೆ ಸ್ವಾತಂತ್ರ್ಯ ತಂದು ಕೊಟ್ಟರು, ನಾವು ಅವರಿಗೆ ಏನು ಕೊಟ್ಟಿದ್ದೇವೆ? ನಾವು- ನೀವೆಲ್ಲರೂ ಸೇರಿ ಸ್ವಚ್ಛ ಭಾರತವನ್ನು ನೀಡೋಣ’ ಎಂಬ ಮೋದಿ ಅವರ ಮಾತನ್ನು ಇಡೀ ದೇಶವೇ ಕೇಳಿಸಿಕೊಂಡಿತು. ಹೀಗೆ ಅನುಷ್ಠಾನಕ್ಕೆ ಬಂದ ಸ್ವಚ್ಛ ಭಾರತ ಕಾರ್ಯಕ್ರಮ ದಶಕವನ್ನು ದಾಟಿ ಭಾರತದ ಪಾಲಿಗೆ ಸ್ವರ್ಣಶಖೆಯನ್ನು ನಿರ್ಮಾಣ ಮಾಡಲು ದಾಪುಗಾಲಿಡುತ್ತಿದೆ. ಇಂದು ರೇಲ್ವೆ, ಬಸ್ಸು ನಿಲ್ದಾಣಗಳ ಚಹರೆಯನ್ನು ನೋಡಿದರೆ ಮೋದಿ ಅವರ ಮಾತಿನ ಸಮ್ಮೋಹಕ ಶಕ್ತಿ ಎಂಥದ್ದು ಎಂಬುದು ಅರ್ಥವಾಗುತ್ತದೆ. ಭಾರತವನ್ನು ಬಯಲುಶೌಚದಿಂದ ಮುಕ್ತಗೊಳಿಸಿದ ಹೆಗ್ಗಳಿಕೆ ನಮ್ಮ ಪ್ರಧಾನಿಗಳಿಗೇ ಸಲ್ಲಬೇಕು.
ತಾಯಂದಿರ ಕೃತಜ್ಞತೆ
ಉಜ್ವಲ ಯೋಜನೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಪ್ರತೀ ನಿತ್ಯವೂ ಒಲೆಯ ಮುಂದೆ ಕೂತು ಹೊಗೆ ಕುಡಿಯುತ್ತ ಅನ್ನ ಬೇಯಿಸುತ್ತಿದ್ದ ಕೋಟ್ಯಂತರ ತಾಯಂದಿರು ಇಂದು ಮೋದಿ ಅವರಿಗೆ ಕೃತಜ್ಞರಾಗಿದ್ದಾರೆ. ದೇಶದ ಉದ್ದಗಲಕ್ಕೂ 12 ಕೋಟಿಗೂ ಹೆಚ್ಚು ಮನೆಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ದೊರೆತಿದೆ! ಇದು ಸಾಧಾರಣ ಸಾಧನೆಯೇ? ಹೆದ್ದಾರಿ ಮತ್ತು ಸಾರಿಗೆ, ದೇಶದ ಪ್ರತೀ ಮೂಲೆಗೂ ವಿಮಾನ ಸಂಪರ್ಕ ಕಲ್ಪಿಸಿದ ಉಡಾನ್ ಯೋಜನೆ, ಪ್ರತೀ ಹಳ್ಳಿಗೂ ಬೆಳಕು ಕೊಟ್ಟ ಸೌರಭಾಗ್ಯ, ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ, ವಿಮಾನ ನಿಲ್ದಾಣ ಮತ್ತು ಬಂದರುಗಳ ನಿರ್ಮಾಣ, ಜಲಜೀವನ್ ಮಿಷನ್ ಹಾಗೂ ಸುಮಾರು 55 ಕೋಟಿಗೂ ಹೆಚ್ಚು ಬಡಜನರ ಆರ್ಥಿಕ ಶಕ್ತಿಯನ್ನು ವೃದ್ಧಿಸಿದ ಜನಧನ್ ಯೋಜನೆ.. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅದೇ ಒಂದು ಮಹಾಯೋಜನೆಗಳ ಬೃಹತ್ ಸಂಪುಟವಾಗುತ್ತದೆ.
ಪರಿವರ್ತನೆಯ ನಿಜ ಅರ್ಥ ಇರುವುದು ಇಲ್ಲಿಯೇ. ಪರಿವರ್ತನೆ ಎಂದರೆ ಮೇಲ್ಮಟ್ಟದಲ್ಲಿ ಅಲ್ಲ, ಅತ್ಯಂತ ತಳಮಟ್ಟದಿಂದ ಕಂಡುಬರಬೇಕು ಎಂದು ಮೋದಿ ಅವರ ಪ್ರತಿಪಾದನೆ. ಅದರಂತೆಯೇ ಅವರು ನಡೆದಿದ್ದಾರೆ. ನುಡಿದಂತೆ ನಡೆಯುವುದು ಹಾಗೂ ಪರಿವರ್ತನೆಗೆ ಶ್ರೀಕಾರ ಹಾಡುವುದು ಎಂದರೆ ಹೀಗೆ. ವಿವಿಧ ಯೋಜನೆಗಳಡಿ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಹಾಕುವ ಪದ್ಧತಿ ಆರಂಭಿಸಿದವರು ಮೋದಿ ಅವರು. ಇದರಿಂದ ಮಧ್ಯವರ್ತಿಗಳ ಹಾವಳಿ ನಿಂತು ಹೋಯಿತು. ಯೋಜನೆಗಳ ಸಂಪೂರ್ಣ ಪ್ರಯೋಜನ ಫಲಾನುಭವಿಗಳಿಗೇ ಧಕ್ಕುತ್ತಿದೆ. ಹಿಂದಿನ ಸರಕಾರಗಳ ಅವಧಿಯಲ್ಲಿ ಯೋಜನೆಗಳ ಹಣವು ಮಧ್ಯವರ್ತಿಗಳ ಮೂಲಕ ಸೋರಿ ಹೋಗುತ್ತಿತ್ತು. ಈಗ ಅಂಥ ಪರಿಸ್ಥಿತಿಯನ್ನು ಎಲ್ಲಾದರೂ ನೋಡಲು ಸಾಧ್ಯವೇ?
ಹಿಂದಿನ ಸರ್ಕಾರದ ಅವಧಿಯಲ್ಲಿ ಶೇ.8.2ರಷ್ಟು ಇದ್ದ ಹಣದುಬ್ಬರ ಈಗ ಶೇ.5ಕ್ಕೆ ಇಳಿದಿದೆ. ಇದು ಸಾರ್ವಕಾಲಿಕ ದಾಖಲೆ. 2 ಕೋಟಿಯಷ್ಟು ಇದ್ದ ಉದ್ಯೋಗ ಸೃಷ್ಟಿ 17 ಕೋಟಿಗೂ ಮೀರಿ ಹೆಚ್ಚಿದೆ. ಬಹು ಆಯಾಮದ ಬಡತನದ ಪ್ರಮಾಣ ಶೇ.29.2ರಿಂದ ಶೇ.11.3ಕ್ಕೆ ಇಳಿಕೆಯಾಗಿದೆ. 248 ಕಿ.ಮೀ. ಇದ್ದ ಮೆಟ್ರೋ 1,013 ಕಿ.ಮೀ.ಗೆ ಏರಿಕೆಯಾಗಿದೆ. ಈ ಅಂಕಿ ಅಂಶಗಳು ಏನನ್ನು ಹೇಳುತ್ತವೆ? ಏನನ್ನು ಧ್ವನಿಸುತ್ತವೆ ಎಂಬುದನ್ನು ಭಾರತದ ಅರಿತಿದೆ. ಏಕೆಂದರೆ, ಭಾರತ ಬದಲಾಗಿದೆ. ಮೋದಿ ಅವರದ್ದು ಸುಧಾರಣಾ ಮಾದರಿಯ ಆಡಳಿತ. ಪರಿವರ್ತನೆ ಅವರ ಆಡಳಿತದ ನಿಯಮ. ‘ಬದಲಾಗಬೇಕು, ಭಾರತ ಬದಲಾಗಿ ಬೃಹತ್ ಶಕ್ತಿಯಾಗಿ ಬೆಳೆದು ನಿಲ್ಲಬೇಕುʼ ಅನ್ನುವುದು ಅವರ ನಂಬಿಕೆ. ಅದಕ್ಕೆ ಪೂರಕವಾಗಿ ಜನರಿಗೆ ದುಡಿಯುವ ಶಕ್ತಿ, ಅವಕಾಶಗಳು ಹೆಚ್ಚಿವೆ.
ಅದಕ್ಕೆ ಸಮಾನಾಂತರವಾಗಿ ತೆರಿಗೆ ಸಲ್ಲಿಸಿ ರಾಷ್ಟ್ರದ ಅಭಿವೃದ್ಧಿಯಲ್ಲಿ ಭಾಗಿದಾರರಾಗುವ ಪ್ರಜೆಗಳ ಸಂಖ್ಯೆಯೂ ಹೆಚ್ಚಾಗಿದೆ. ದಶಕದ ಹಿಂದೆ ಕೇವಲ 4 ಕೋಟಿ ಆದಾಯ ತೆರಿಗೆದಾರರಷ್ಟೇ ಇದ್ದ ಭಾರತದಲ್ಲಿ ಈಗ 9.2 ಕೋಟಿ ತೆರಿಗೆ ಪಾವತಿದಾರರು ಇದ್ದಾರೆ. ಅಂದರೆ; ರಾಷ್ಟ್ರ ನಿರ್ಮಾಣದಲ್ಲಿ ಪ್ರತಿಯೊಬ್ಬರು ಭಾಗಿದಾರರು ಎಂಬುದನ್ನು ಮೋದಿ ಅವರು ಒತ್ತಿ ಹೇಳುತ್ತಲೇ ಇದ್ದಾರೆ. ಏಕೀಕೃತ ಅಥವಾ ಏಕಪಕ್ಷೀಯವಾಗಿದ್ದ ಜಾಗತಿಕ ರಾಜತಾಂತ್ರಿಕತೆಯಲ್ಲಿ ಮಹತ್ತರ ಪರಿವರ್ತನೆಗೆ ಕಾರಣೀಭೂತರಾಗಿದ್ದು ಮೋದಿ ಅವರು. ಭಾರತದ ಕುರಿತು ಅಗ್ರದೇಶಗಳ ವರಸೆಗಳು ಬದಲಾಗಿವೆ. ಅವರ ನೀತಿಗಳು ಆಮೂಲಾಗ್ರವಾಗಿ ತಿದ್ದುಪಡಿ ಆಗುತ್ತಿವೆ. ಭಾರತದ ಮೂಲಕ ಜಗತ್ತಿನ ರಾಜಕೀಯವನ್ನು ನೋಡುವ ಸ್ಥಿತಿ ಸೃಷ್ಟಿಯಾಗಿದೆ. ವಿಶ್ವಗುರು ಸ್ಥಾನದ ಪಂರಂಪರೆ ಎಂದರೆ ಇದುವೇ.
