ಫೆಸಿಫಿಕ್ ಸಾಗರದಲ್ಲಿ ದೈತ್ಯ ವೈರಸ್ ಪತ್ತೆಯಾಗಿದ್ದು, ಇದು ಅಸಾಮಾನ್ಯವಾಗಿ ಉದ್ದವಾದ ಬಾಲವನ್ನು ಹೊಂದಿದೆ. ಈ ವೈರಸ್ ಪ್ಲ್ಯಾಂಕ್ಟನ್‌ಗೆ ಸೋಂಕು ತರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಫೆಸಿಫಿಕ್ ಸಾಗರದಲ್ಲಿ ಭಾರಿ ಉದ್ದದ ಬಾಲವನ್ನು ಹೊಂದಿರುವ ದೈತ್ಯ ವೈರಸ್ಸೊಂದು ಪತ್ತೆಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಉತ್ತರ ಪೆಸಿಫಿಕ್ ಉಪೋಷ್ಣವಲಯದ ಸಬ್‌ಟ್ರಾಫಿಕಲ್ ಗ್ಯಾರ್ ಅನ್ನು ಶೋಧಿಸುತ್ತಿದ್ದ ವಿಜ್ಞಾನಿಗಳ ಕಣ್ಣಿಗೆ ಹಿಂದೆಂದೂ ಕಂಡಿರದಷ್ಟು ಉದ್ದವಾದ ಬಾಲವನ್ನು ಹೊಂದಿರುವ ದೈತ್ಯ ವೈರಸ್ ಬಿದ್ದಿದೆ ಎಂದು ವರದಿಯಾಗಿದೆ.
PelV-1 ಎಂದು ಕರೆಯಲ್ಪಡುವ ಈ ವೈರಸ್, ಪೆಲಗೋಡಿನಿಯಮ್ ಎಂಬ ಒಂದು ರೀತಿಯ ಪ್ಲ್ಯಾಂಕ್ಟನ್‌ಗೆ (ಸಿಗಡಿಯಂತಿರುವ ಜೀವಿ) ಸೋಂಕು ತರುತ್ತದೆ ಮತ್ತು ಇದು 2.3 ಮೈಕ್ರೋಮೀಟರ್ ಉದ್ದದ ಬಾಲವನ್ನು ಹೊಂದಿದೆ, ಇದು COVID-19 ಗೆ ಕಾರಣವಾದ ಕರೋನಾ ವೈರಸ್‌ಗಿಂತ ಸರಿಸುಮಾರು 19 ಪಟ್ಟು ಉದ್ದವಾಗಿದೆ. ಇದರ 200 ನ್ಯಾನೋಮೀಟರ್ ಕ್ಯಾಪ್ಸಿಡ್ ಅನ್ನು ಹೊಂದಿದೆ. (ಕ್ಯಾಪ್ಸಿಡ್ ಎಂಬುದು ವೈರಸ್‌ನ ಪ್ರೋಟೀನ್ ಶೆಲ್ ಆಗಿದೆ) ಇದು ವೈರಸ್ ಆತಿಥೇಯ ಕೋಶಗಳಿಗೆ ಪ್ರವೇಶಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.
ಹೆಚ್ಚಿನ ವೈರಸ್‌ಗಳಿಗೆ ಬಾಲಗಳಿಲ್ಲ ಅಥವಾ ಚಿಕ್ಕವುಗಳಿದ್ದರೂ, PelV-1 ರ ರಚನೆಯು ವಿಶಿಷ್ಟವಾಗಿದೆ. ಸೋಂಕಿನ ಸಮಯದಲ್ಲಿ ಪ್ಲಾಂಕ್ಟನ್ ಕೋಶಗಳಿಗೆ ಬಾಲ ಅಂಟಿಕೊಳ್ಳುವುದನ್ನು ಟೈಮ್-ಲ್ಯಾಪ್ಸ್ ಇಮೇಜಿಂಗ್ ತೋರಿಸುತ್ತದೆ, ಆದರೆ ಜೀವಕೋಶಗಳ ಒಳಗೆ ಹೊಸದಾಗಿ ರೂಪುಗೊಂಡ ವೈರಸ್‌ಗಳು ಬಾಲವಿಲ್ಲದೆ ಕಾಣಿಸಿಕೊಳ್ಳುತ್ತವೆ.
ಹವಾಯಿಯ ಉತ್ತರಕ್ಕೆ ದೀರ್ಘಕಾಲೀನ ಮೇಲ್ವಿಚಾರಣಾ ತಾಣವಾದ ಸ್ಟೇಷನ್ ಅಲೋಹಾದಲ್ಲಿ ಪೆಲ್ವಿ-1(PelV-1) ಪತ್ತೆಯಾಗಿದೆ. ವಿಜ್ಞಾನಿಗಳು ಮೇಲ್ಮೈಯಿಂದ 25 ಮೀಟರ್ ಕೆಳಗೆ ಸಮುದ್ರದ ನೀರನ್ನು ಸಂಗ್ರಹಿಸಿ, ಪ್ಲ್ಯಾಂಕ್ಟನ್ ಅನ್ನು ಪ್ರತ್ಯೇಕಿಸಿದರು ನಂತರ ಈ ವೈರಲ್ ಹಿಚ್‌ಹೈಕರ್ ಅನ್ನು ಅನಿರೀಕ್ಷಿತವಾಗಿ ಗುರುತಿಸಲಾಯ್ತು ಎಂದು ವರದಿಯಾಗಿದೆ.
ಪೆಲಾಗೋಡಿನಿಯಮ್ ನಂತಹ ಡೈನೋಫ್ಲಾಜೆಲೇಟ್‌ಗಳಿಗೆ ಸೋಂಕು ತಗುಲಿಸುವ ವೈರಸ್‌ಗಳು ಅತ್ಯಂತ ವಿರಳ; ಈ ಗುಂಪನ್ನು ಗುರಿಯಾಗಿಸಿಕೊಂಡಿರುವುದು ಕೇವಲ ಎರಡು ದೊಡ್ಡ ಡಿಎನ್‌ಎ ವೈರಸ್‌ಗಳು ಮಾತ್ರ ಎಂದು ತಿಳಿದು ಬಂದಿದೆ. ಈ ವೈರಸ್‌ಗಳನ್ನು ಅರ್ಥಮಾಡಿಕೊಳ್ಳುವುದರಿಂದ ಶಕ್ತಿಯ ಹರಿವು, ಪೋಷಕಾಂಶಗಳ ಚಕ್ರಗಳು ಮತ್ತು ಸಾಗರ ಪರಿಸರ ವ್ಯವಸ್ಥೆಗಳಲ್ಲಿನ ಹಾನಿಕಾರಕ ಪಾಚಿಯ ಹೂವುಗಳ ಮೇಲೆ ಬೆಳಕು ಚೆಲ್ಲಬಹುದು ಎಂದು ವಿಜ್ಞಾನಿಗಳು ಊಹಿಸಿದ್ದಾರೆ.
ಪೆಲ್ವಿ-1 ರ ವೈರಸ್‌ಗೆ ಜೀನೋಮ್ ಬೃಹತ್ ಪ್ರಮಾಣದಲ್ಲಿದ್ದು, 459,000 ಬೇಸ್ ಜೋಡಿಗಳಲ್ಲಿ 467 ಜೀನ್‌ಗಳನ್ನು ಹೊಂದಿದೆ. ಗಮನಾರ್ಹವಾಗಿ ಈ ಜೀನ್‌ಗಳಲ್ಲಿ ಕೆಲವು ಸಾಮಾನ್ಯವಾಗಿ ಜೀವಂತ ಕೋಶಗಳಲ್ಲಿ ಮಾತ್ರ ಕಂಡುಬರುತ್ತವೆ ಇದರಲ್ಲಿ ಶಕ್ತಿ ಉತ್ಪಾದನಾ ಚಕ್ರಗಳ ಭಾಗಗಳು, ಬೆಳಕು ಸೆಳೆಯುವ ಪ್ರೋಟೀನ್‌ಗಳು ಮತ್ತು ಸೂರ್ಯನ ಬೆಳಕನ್ನು ಸೆರೆಹಿಡಿಯಲು ಸಹಾಯ ಮಾಡುವ ಬೆಳಕು-ಸೂಕ್ಷ್ಮ ಅಣುಗಳಾದ ರೋಡಾಪ್ಸಿನ್‌ಗಳು ಸೇರಿವೆ.
ಈ ಅಧ್ಯಯನದ ವೇಳೆ ವಿಜ್ಞಾನಿಗಳಿಗೆ ಕೋ-ಪೆಲ್ವಿ ಎಂಬ ಎರಡನೇ, ಅಪರೂಪದ ವೈರಸ್ ಸಿಕ್ಕಿದೆ ಇದು ಪೆಲ್ವಿ-1 ಗಿಂತ ಭಿನ್ನವಾಗಿದ್ದು, ಬಾಲವನ್ನು ಹೊಂದಿರುವುದಿಲ್ಲ ಆದರೆ ಅದರ ಆತಿಥೇಯ ಜೀವಿಯ ನಡವಳಿಕೆ ಮತ್ತು ಶಕ್ತಿಯ ಬಳಕೆಯನ್ನು ಬದಲಾಯಿಸಬಹುದಾದ ಚಯಾಪಚಯ ಜೀನ್‌ಗಳನ್ನು ಹೊಂದಿರುತ್ತದೆ. ಭವಿಷ್ಯದ ಸಂಶೋಧನೆಯು ಪೆಲ್ವಿ-1 ತನ್ನ ಬಾಲವನ್ನು ಹೇಗೆ ಜೋಡಿಸುತ್ತದೆ, ಸೋಂಕಿನಲ್ಲಿ ಅದು ವಹಿಸುವ ಪಾತ್ರ ಮತ್ತು ಸಾಗರಗಳಲ್ಲಿ ಇತರ ಉದ್ದ ಬಾಲದ ವೈರಸ್‌ಗಳು ಅಸ್ತಿತ್ವದಲ್ಲಿವೆಯೇ ಎಂಬುದನ್ನು ಅನ್ವೇಷಿಸಲಿದೆ.
