ಕಾಂತಾರ ಚಾಪ್ಟರ್ 1 ಸಿನಿಮಾದ ಬಳಿಕ ತಾವು ಈ ಮೊದಲೇ ಒಪ್ಪಿಕೊಂಡಿದ್ದ 'ಹನುಮಾನ್' ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಾಗಿ ರಿಷಬ್ ಶೆಟ್ಟಿ ಹೇಳಿದ್ದಾರೆ. ಅದಕ್ಕೆ ತಾವೀಗ ಸೂಕ್ತ ತಯಾರಿ ಮಾಡಿಕೊಳ್ಳುತ್ತಿದ್ದು, ಸಿಕ್ಕಿರುವ ಗ್ಯಾಪ್‌ನಲ್ಲಿ ದೇವಾಲಯಗಳಿಗೆ ಭೇಟಿ ನೀಡಿ ತಮ್ಮ ಭಕ್ತಿ ಸಮರ್ಪಿಸುತ್ತಿದ್ದಾರೆ.
ಕಾಶಿ-ವಾರಣಾಸಿ ಗಂಗಾರತಿಯಲ್ಲಿ ಪಾಲ್ಗೊಂಡ ರಿಷಬ್ ಶೆಟ್ಟಿ
ಕನ್ನಡದ ಹೆಮ್ಮೆಯ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು (Rishab Shetty) ಇಂದು, ಅಂದರೆ 18 ಅಕ್ಟೋಬರ್ 2025ರಂದು ಕಾಶಿಗೆ ಭೇಟಿ ನೀಡಿದ್ದು, ಅಲ್ಲಿ ವಾರಣಾಸಿಯ ಗಂಗಾ ಆರತಿಯಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದಿದ್ದಾರೆ. ಕಾಂತಾರ ಚಾಪ್ಟರ್ 1 ಸಿನಿಮಾದ (Kantara Chapter 1) ಅಭೂತಪೂರ್ವ ವಿಜಯಕ್ಕೆ, ಅಮೋಘ ಎನ್ನಿಸುವ ಗಳಿಕೆಗೆ ರಿಷಬ್ ಶೆಟ್ಟಿಯವರು ತಾವು ನಂಬಿದ ದೈವ-ದೇವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗಷ್ಟೇ ರಿಷಬ್ ಶೆಟ್ಟಿಯವರು ಮೈಸೂರಿನ ಚಾಮುಂಡೇಶ್ವರಿ ದೇವಿಯ ಸನ್ನಿಧಿಗೆ ಹೋಗಿ ನಮಿಸಿ, ತಮಗೆ ಹಾಗೂ ಕಾಂತಾರ ಸಿನಿಮಾ ತಂಡಕ್ಕೆ ಸಿಕ್ಕ ಯಶಸ್ಸಿಗೆ ದೇವಿ ಮುಂದೆ ತಲೆಬಾಗಿ ನಮಸ್ಕರಿಸಿ ಬಂದಿದ್ದಾರೆ.
ಜಾಗತಿಕ ಕಲೆಕ್ಷನ್ ರೂ. 717.50 ಕೋಟಿ
ಕಾಂತಾರ ಸಿನಿಮಾ ಇಂದು ಜಗತ್ತಿನೆಲ್ಲೆಡೆ ಸಖತ್ ಸೌಂಡ್ ಮಾಡುತ್ತಿದೆ. ಈಗಾಗಲೇ ಕಾಂತಾರ ಸಿನಿಮಾ ಜಾಗತಿಕ ಕಲೆಕ್ಷನ್ ರೂ. 717.50 ಕೋಟಿ ಗಳಿಕೆ ಮಾಡಿ ನಾಗಾಲೋಟದಿಂದ ಮುನ್ನುಗ್ಗುತ್ತಿದೆ. ಈ ಸಿನಿಮಾದ ಗಳಿಕೆ ಇದೀಗ ಯಾವಮಟ್ಟದಲ್ಲಿ ಇದೆ ಎಂದರೆ ಬಿಡುಗಡೆಯಾಗಿ ಕೇವಲ 15 ದಿನಕ್ಕೆ ಬರೋಬ್ಬರಿ 717.50 ಕೋಟಿ ಗಳಿಸಿ ಈ ವರ್ಷದ ಎರಡನೇ ಅತೀ ದೊಡ್ಡ ಚಿತ್ರವಾಗಿ ಹೊರಹೊಮ್ಮಿದೆ. ಹೀಗೇ ಈ ಚಿತ್ರದ ಗಳಿಕೆ ಮುಂದುವರಿದರೆ, ಇದು 'ಕೆಜಿಎಫ್ 2' ಗಳಿಕೆಯನ್ನೂ ಮೀರಿ 'ನಂಬರ್ ಒನ್' ಸ್ಥಾನದಲ್ಲಿ ಕುಳಿತುಕೊಳ್ಳುವುದು ಪಕ್ಕಾ ಎನ್ನಬಹುದು.
ಅಂದಹಾಗೆ, ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು ಸದ್ಯ ತಮ್ಮ ಸಿನಿಮಾದ ಸಕ್ಸಸ್ ಸಂಭ್ರಮವನ್ನು ದೇಶದ ವಿವಿಧ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಆಚರಿಸುತ್ತಿದ್ದಾರೆ. ಸದ್ಯ ಅವರು ಕಾಶಿಯಲ್ಲಿ ಇದ್ದಾರೆ. ಮುಂದೆ ಅವರು ಯಾವ ಟೆಂಟಪ್‌ಗೆ ಹೋಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ, ಕನ್ನಡ ಸಿನಿಮಾ ಕಾಂತಾರ ಚಾಪ್ಟರ್ 1 ಇದೀಗ ಜಾಗತಿಕ ಮಟ್ಟದಲ್ಲಿ ಕನ್ನಡ-ಕರ್ನಾಟಕದ ಕೀರ್ತಿಪತಾಕೆಯನ್ನು ಹಾರಿಸಿ ಮೆರೆಯುತ್ತಿದೆ.
ಮುಂದಿನದು ಹನುಮಾನ್ ಸಿನಿಮಾ
ಕಾಂತಾರ ಚಾಪ್ಟರ್ 1 ಸಿನಿಮಾದ ಬಳಿಕ ತಾವು ಈ ಮೊದಲೇ ಒಪ್ಪಿಕೊಂಡಿದ್ದ 'ಹನುಮಾನ್' ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಾಗಿ ರಿಷಬ್ ಶೆಟ್ಟಿ ಹೇಳಿದ್ದಾರೆ. ಅದಕ್ಕೆ ತಾವೀಗ ಸೂಕ್ತ ತಯಾರಿ ಮಾಡಿಕೊಳ್ಳುತ್ತಿರುವುದಾಗಿ ಹೇಳಿರುವ ಅವರು, ಸಿಕ್ಕಿರುವ ಗ್ಯಾಪ್‌ನಲ್ಲಿ ದೇವಾಲಯಗಳಿಗೆ ಭೇಟಿ ನೀಡಿ ತಮ್ಮ ಭಕ್ತಿ ಹಾಗೂ ಸಂಸ್ಕಾರ ಮೆರೆಯುತ್ತಿದ್ದಾರೆ. ಏನೇ ಆಗಲಿ, ಕನ್ನಡದ ಸಿನಿಮಾವೊಂದು ಇಂದು ಈ ಮಟ್ಟಕ್ಕೆ ವಿಶ್ವಮಟ್ಟದಲ್ಲಿ ಸುದ್ದಿ ಮಾಡುತ್ತಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆ ಮೂಡಿಸಿದೆ.
