ಸ್ಯಾಂಡಲ್‌ವುಡ್‌ನಲ್ಲಿ ಪೋಷಕ ನಟನಾಗಿ ಭಾರಿ ಮೆಚ್ಚುಗೆ ಗಳಿಸಿದ್ದ ಖ್ಯಾತ ಹಿರಿಯ ನಟ ದಿನೇಶ್ ಮಂಗಳೂರು ನಿಧನರಾಗಿದ್ದಾರೆ. ಕುಂದಾಪುರ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿನೇಶ್ ಮಂಗಳೂರು ಇಂದು ನಿಧನರಾಗಿದ್ದಾರೆ.
ಉಡುಪಿ (ಆ.25) ಖ್ಯಾತ ಕಲಾ ನಿರ್ದೇಶಕ, ಸ್ಯಾಂಡಲ್‌ವುಡ್ ನಟ ದಿನೇಶ್ ಮಂಗಳೂರು ಇಂದು (ಆ.25) ನಿಧನರಾಗಿದ್ದಾರೆ. ಕುಂದಾಪುರ ಕೋಟೇಶ್ವರದ ಸರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿನೇಶ್ ಮಂಗಳೂರು, ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಿದ್ದಾರೆ. ಕೆಜಿಎಫ್, ಹರಿಕಥೆ ಅಲ್ಲ ಗಿರಿಕಥೆ, ರಿಕ್ಕಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ನಟರಾಗಿ ನಟಿಸಿದ್ದ ದಿನೇಶ್ ಮಂಗಳೂರು ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ.
ಕುಂದಾಪುರದ ಬಳಿ ಬಾಡಿಗೆ ಮನೆಯಲ್ಲಿದ್ದ ದಿನೇಶ್ ಮಂಗಳೂರು, ಅನಾರೋಗ್ಯದ ಕಾರಣ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಬಳಿಕ ಕುಂದಾಪುರದಲ್ಲಿ ನೆಲೆಸಿದ್ದರು. ಆದರೆ ಮತ್ತೆ ಕಳೆದ ವಾರ ತೀವ್ರ ಅಸ್ವಸ್ಥರಾಗಿದ್ದ ದಿನೇಶ್ ಮಂಗಳೂರು ಅವರನ್ನು ಕುಂದಾಪುರದ ಸರ್ಜನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮಂಜಾನೆ ಸರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸಿದೆ ಮೃತಪಟ್ಟಿದ್ದಾರೆ. ಅಪಾರ ಅಭಿಮಾನಿಗಳ ಬಳಗ ಹೊಂದಿದ್ದ ದಿನೇಶ್ ಮಂಗಳೂರು, ಹಲವು ನಟ ನಟಿಯರ ಆತ್ಮೀಯರಾಗಿದ್ದರು.
ಕಲಾಭಿಮಾನಿಗಳ ಅಂತಿಮ ದರ್ಶನಕ್ಕೆ ಪಾರ್ಥೀವ ಶರೀರ ಬೆಂಗಳೂರಿಗೆ ರವಾನೆ ಮಾಡುವ ಸಾಧ್ಯತೆ ಇದೆ. ಈ ಕುರಿತು ದಿನೇಶ್ ಮಂಗಳೂರು ಕುಟುಂಬಸ್ಥರ ಜೊತೆ ಚರ್ಚಿಸಿ ನಿರ್ಧಾರ ಘೋಷಣೆಯಾಗಲಿದೆ. ಮಾಹಿತಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು, ಆಪ್ತರು, ಅಭಿಮಾನಿಗಳು ಕುಂದಾಪುರ ಸರ್ಜನ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
