Actress Sudha Rani Daughter Nidhi Education: ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟಿ ಸುಧಾರಾಣಿಗೆ ಬಿಪಿ, ಶುಗರ್ ಏನೇ ಸಮಸ್ಯೆ ಬಂದರೂ ಅದಕ್ಕೆ ಅವರ ಮಗಳೇ ಕಾರಣವಂತೆ, ಬರುವ ಡಿಸೆಂಬರ್‌ಗೆ ದೇಶಾಂತರ ಹೋಗೋ ಯೋಚನೆಯೂ ಇದೆಯಂತೆ. ಯಾಕೆ ಎಂದು ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಚಿತ್ರರಂಗದ ದಿಗ್ಗಜರ ಮಕ್ಕಳು ಯಾವಾಗ ಸಿನಿಮಾ ರಂಗಕ್ಕೆ ಬರುತ್ತಾರೆ ಎಂಬ ಪ್ರಶ್ನೆ ಇದ್ದೇ ಇರುತ್ತದೆ. ಈಗ ನಟಿ ಸುಧಾರಾಣಿ ( Sudha Rani ) ಮಗಳು ನಿಧಿ ಕೂಡ ಬಣ್ಣ ಹಚ್ಚುತ್ತಾರಾ ಎಂಬ ಪ್ರಶ್ನೆ ಕೆಲ ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ ಅವರ ಶಿಕ್ಷಣವೇ ಮುಗಿದಿಲ್ಲವಂತೆ. ಈ ಬಗ್ಗೆ ಸುಧಾರಾಣಿ ಅವರೇ “ನ್ಯೂಸೋ ನ್ಯೂಸು” ಎನ್ನುವ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಮಗಳಿಗೋಸ್ಕರ 3 ದಿನ ಬ್ರೇಕ್ ತಗೊಂಡ್ರು!
“ನನ್ನ ಮಗಳು ಲಾ ಓದಿ ಎರಡು ವರ್ಷ ಆಗಿದೆ. ಮುಂದೆ ಸಿಎಸ್ ಮಾಡ್ತೀನಿ ಅಂತ ಹೇಳುತ್ತಿದ್ದಾಳೆ. ಅವಳು ಮನೆಯಲ್ಲಿದ್ದರೆ ಇಡೀ ದಿನವೂ ಓದುತ್ತಿರುತ್ತಾಳೆ. ನನಗೆ ಇದೇ ಚಿಂತೆ ಆಗಿದೆ. ಹತ್ತನೇ ಕ್ಲಾಸ್‌ನಲ್ಲಿ 98% ಮಾರ್ಕ್ಸ್ ಬಂತು ಅಂತ ಸಿಕ್ಕಾಪಟ್ಟೆ ಅತ್ತಳು. ನಾನು ಅಂದು ಶೂಟಿಂಗ್‌ನಲ್ಲಿದ್ದೆ. ನಿರ್ದೇಶಕರ ಬಳಿ ಐದು ನಿಮಿಷ ತಗೊಂಡು ಇವಳ ಮಾರ್ಕ್ಸ್ ಎಷ್ಟು ಬಂದಿದೆ ಅಂತ ನೋಡೋಣ ಅಂದುಕೊಂಡೆ. ಆಗ ಇವಳ ಫೋನ್ ಬಂತು. ಇವಳು ಅಳೋದು ನೋಡಿ ನಾನು ಫೇಲ್ ಆಗಿರಬಹುದಾ ಅಂದುಕೊಂಡೆ. 98% ಅಂಕ ಬಂತು ಅಂತ ಅವಳು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಇವಳ ಅಳು ಕೇಳಿ ಶೂಟಿಂಗ್ ಸೆಟ್‌ನಲ್ಲಿದ್ದವರು 3 ಗಂಟೆ ಬ್ರೇಕ್ ತಗೊಂಡು ಇವಳಿಗೆ ಸಮಾಧಾನ ಮಾಡಿದ್ದಾರೆ, ಅಂಥ ಮಗಳು ಇವಳು” ಎಂದು ಸುಧಾರಾಣಿ ಹೇಳಿದ್ದಾರೆ.
ಮಾಸ್ಟರ್ಸ್ ಮಾಡ್ತೀನಿ ಅಂದ್ರೆ ಬೇಡ ಅಂತಾರೆ!
“ಇವಳ ಪರೀಕ್ಷೆ ಟೆನ್ಶನ್ ನೋಡಿ ನನಗೆ ಎಸಿಡಿಟಿ ಬಂದಿರೋದು. ನನಗೆ ಏನೇ ಆದರೂ ಇವಳೇ ಕಾರಣ” ಎಂದು ಅವರು ಮಗಳ ಬಗ್ಗೆ ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಅಂದಹಾಗೆ ನಿಧಿ ಕೂಡ ಮಾತನಾಡಿ, “ನಾನು ಮಾಸ್ಟರ್ಸ್ ಮಾಡ್ತೀನಿ ಅಂತ ಅಂದರೆ ಅಮ್ಮ ಬೇಡ ಎನ್ನುತ್ತಾಳೆ” ಎಂದಿದ್ದಾರೆ.
ಇಡೀ ದಿನ ರೂಮ್‌ನಲ್ಲೇ ಇರ್ತಾಳೆ
“ಪರೀಕ್ಷೆ ಬಂದರೆ ಇಡೀ ದಿನ ರೂಮ್‌ನಲ್ಲೇ ಇರುತ್ತಾಳೆ. ಬೆಡ್ ಮೇಲೆ ಪುಸ್ತಕ, ಲ್ಯಾಪ್‌ಟಾಪ್ ಎಲ್ಲವೂ ಹರಡಿಕೊಂಡಿರುತ್ತದೆ. ಅವಳು ರಾತ್ರಿಯೇ ಸ್ನಾನ ಮಾಡುತ್ತಾಳೆ. ಕಾಫಿ, ಟೀ ಏನೇ ಕುಡಿದರೂ ಅಲ್ಲೇ ಇರುತ್ತದೆ. ನಿನ್ನ ರೂಮ್‌ನಾದರೂ ಕ್ಲೀನ್ ಮಾಡಿಕೋ, ಸೂರ್ಯ ಹೇಗಿದ್ದಾನೆ ಅಂತ ಮನೆ ಹೊರಗಡೆ ಬಂದು ನೋಡು ಅಂತ ನಾನು ಹೇಳ್ತೀನಿ. ಡಿಸೆಂಬರ್‌ನಲ್ಲಿ ಪರೀಕ್ಷೆ ಇದೆ, ನಾನು ದೇಶಾಂತರ ಹೋಗೋಣ ಅಂದುಕೊಂಡಿದ್ದೇನೆ” ಎಂದು ಸುಧಾರಾಣಿ ಅವರು ತಮಾಷೆಯಿಂದ ಹೇಳಿದ್ದಾರೆ.
ಟೆನ್ಶನ್ ಬಂದಿದ್ದು ಎಲ್ಲಿಂದ?
“ನನ್ನ ತಂದೆ ಓದುವ ಟೈಮ್‌ನಲ್ಲಿ ಅವರ ತಾಯಿ ಓದುತ್ತಿದ್ದರಂತೆ, ಅದನ್ನು ಅವರು ಕೇಳಿಸಿಕೊಳ್ಳುತ್ತಿದ್ದರು. ಹೀಗಾಗಿ ಅವರಿಂದಲೇ ನನಗೆ ಎಕ್ಸಾಮ್ ಟೆನ್ಶನ್ ಬಂದಿರೋದು. ನನ್ನ ಅಜ್ಜಿ ತುಂಬ ಬುದ್ಧಿವಂತೆ” ಎಂದು ನಿಧಿ ಹೇಳಿದ್ದಾರೆ.
ಅಮ್ಮ-ಮಗಳ ಜುಗಲ್‌ಬಂಧಿ!
“ಪರೀಕ್ಷೆ ಟೈಮ್‌ನಲ್ಲಿ ನನ್ನ ಮಗಳಿಗೆ ಸಿಕ್ಕಾಪಟ್ಟೆ ಟೆನ್ಶನ್ ಆಗುವುದು. ಎಕ್ಸಾಮ್ ಶೀಟ್ ಎಷ್ಟು ಕೊಟ್ಟರೂ ಸಾಕಾಗೋದಿಲ್ಲ” ಎಂದು ಅವರು ಮಗಳನ್ನು ಕಾಲೆಳೆದಿದ್ದಾರೆ. ಒಟ್ಟಿನಲ್ಲಿ ಅಮ್ಮ-ಮಗಳು ಕಾಲೆಳೆದುಕೊಂಡು ಮಾತನಾಡಿರೋ ಈ ಸಂದರ್ಶನ ಅನೇಕರಿಗೆ ಇಷ್ಟ ಆಗಿದೆ.
ಚಿತ್ರರಂಗಕ್ಕೆ ಬರೋದು ಯಾವಾಗ?
ಅಂದಹಾಗೆ ಸುಧಾರಾಣಿ ಮಗಳು ನಿಧಿ ಭರತನಾಟ್ಯ ಪ್ರವೀಣೆ. ಮಗಳ ಭರತನಾಟ್ಯದ ಫೋಟೋ, ವಿಡಿಯೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಹಂಚಿಕೊಂಡಿದ್ದರು. ಅಂದಹಾಗೆ ನಿಧಿ ಯಾವಾಗ ಸ್ಯಾಂಡಲ್‌ವುಡ್‌ಗೆ ಬರ್ತಾರೆ ಎಂದು ಕಾದು ನೋಡಬೇಕಿದೆ.
2000ರಲ್ಲಿ ಸುಧಾರಾಣಿ ಹಾಗೂ ಗೋವರ್ಧನ್ ಅವರು ಮದುವೆಯಾದರು. 2001ರಲ್ಲಿ ಈ ಜೋಡಿಗೆ ನಿಧಿ ಎಂಬ ಮಗಳು ಜನಿಸಿದ್ದಾಳೆ.

