ಗೂಗಲ್ ಎಲ್ಲಿಂದ ಬೇಕಾದರೂ ಕೆಲಸ ನೀತಿಯಲ್ಲಿ ಮಹತ್ವದ ಬದಲಾವಣೆ, ಹೊಸ ರೂಲ್ಸ್ ಜಾರಿ ಮಾಡಲಾಗಿದೆ. ಕೋವಿಡ್ ಸಮಯದಲ್ಲಿ ಜಾರಿಗೆ ಬಂದಿದ್ದ ವರ್ಕ್ ಫ್ರಮ್ ಎನಿವೇರ್ ನೀತಿಯಲ್ಲಿ ಆಗಿರುವ ಬದಲಾವಣೆ ಏನು?
ನವದೆಹಲಿ (ಅ.10) ಕೋವಿಡ್ ಬಳಿಕ ಹಲವು ಕಂಪನಿಗಳು ಮನೆಯಿಂದ ಕೆಲಸ (ವರ್ಕ್ ಫ್ರಮ್ ಹೋಮ್) ಅನುಮತಿ ನೀಡಿತ್ತು. ಹಲವು ಕಂಪನಿಗಳು ಕೋವಿಡ್ ಬಳಿಕವೂ ಈ ನೀತಿ ಮುಂದುವರಿಸಿತ್ತು. ಇದೀಗ ಬಹುತೇಕ ಎಲ್ಲಾ ಕಂಪನಿಗಳು ವರ್ಕ್ ಫ್ರಮ್ ಹೋಮ್ ರದ್ದು ಮಾಡಿದೆ. ಗೂಗಲ್ ಕೂಡ ವರ್ಕ್ ಫ್ರಮ್ ಹೋಮ್ ಅವಕಾಶ ಮಾಡಿಕೊಟ್ಟಿತ್ತು. ಇದರ ಜೊತೆಗೆ ವರ್ಕ್ ಫ್ರಮ್ ಏನಿವೇರ್ ( ಎಲ್ಲಿಂದ ಬೇಕಾದರೂ ಕೆಲಸ) ನೀತಿಯನ್ನು ಜಾರಿಗೊಳಿಸಿತ್ತು. ಕೋವಿಡ್ ಕಾಲದಿಂದ ಇಲ್ಲೀವರೆಗೆ ಚಾಲ್ತಿಯಲ್ಲಿದ್ದ ಈ ನಿಮಯದಲ್ಲಿ ಇದೀಗ ಗೂಗಲ್ ಮಹತ್ವದ ಬದಲಾವಣೆ ಮಾಡಿದೆ.
ಹೊಸ ನಿಯಮ ಏನು?
ಗೂಗಲ್ ತನ್ನ ಉದ್ಯೋಗಿಗಳಿಗೆ ವರ್ಷದಲ್ಲಿ ನಾಲ್ಕು ವಾರ ಅಂದರೆ ಒಂದು ತಿಂಗಳು ಎಲ್ಲಿಂದ ಬೇಕಾದರೂ ಕೆಲಸ ಮಾಡಲು ಅವಕಾಶ ನೀಡಿತ್ತು. ಅಂದರೆ ಮನೆಯಿಂದನೇ ಆಗಬೇಕಿಲ್ಲ, ಬೇರೆ ನಗರ, ಬೇರೆ ರಾಜ್ಯ ಸೇರಿದಂತೆ ಎಲ್ಲಿಂದ ಬೇಕಾದರೂ ನಾಲ್ಕು ವಾರ ಅವಕಾಶ ನೀಡಿತ್ತು. ಇದೀಗ ಒಂದು ದಿನ ಎಲ್ಲಿಂದ ಬೇಕಾದರೂ ಕೆಲಸ ಮಾಡಿದರೆ ಅದನ್ನು ಒಂದು ವಾರ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ವರ್ಷದಲ್ಲಿ ನಾಲ್ಕು ದಿನ ಮಾತ್ರ ಎಲ್ಲಿಂದ ಬೇಕಾದರೂ ಕೆಲಸಕ್ಕೆ ಅವಕಾಶವಿದೆ. ಆದರೆ ಸ್ಥಳದಲ್ಲಿ ನಿರ್ಬಂಧವಿದೆ. ಎಲ್ಲಿಂದ ಬೇಕಾದರೂ ಕೆಲಸದಲ್ಲಿ ಹೊಸ ನಿಯಮ ಪ್ರಕಾರ ಉದ್ಯೋಗಿಗಳ ಕಚೇರಿ ಅಥವಾ ಮನೆಯ ಸುತ್ತ ಮುತ್ತಲಿನ ಲೋಕೇಶನ್‌ನಿಂದ ಮಾತ್ರ ಕೆಲಸಕ್ಕೆ ಅವಕಾಶವಿದೆ. ಬೇರೆ ನಗರ, ಬೇರೆ ರಾಜ್ಯ ಅಥವಾ ಉದ್ಯೋಗಿಗಳ ಇಷ್ಟದ ಪ್ರವಾಸಿ ತಾಣಗಳಿಂದ ಕೆಲಸ ಮಾಡುವ ಅವಕಾಶವಿಲ್ಲ.
ಹೈಬ್ರಿಡ್ ನಿಯಮದಲ್ಲೂ ಬದಲಾವಣೆ
ಹೈಬ್ರಿಡ್ ಮಾಡೆಲ್‌ಗೆ ಅವಕಾಶ ನೀಡಲಾಗಿದೆ. ಆದರೂ ಇಲ್ಲೂ ಕೆಲ ಬದಲಾವಣೆ ಮಾಡಲಾಗಿದೆ. ವಾರದಲ್ಲಿ 2 ರಿಂದ ಮೂರು ದಿನ ಕಚೇರಿ ಹಾಗೂ ಇನ್ನುಳಿದ ದಿನ ಮನೆಯಿಂದ ಕೆಲಸ ಮಾಡಲು ಅವಕಾಶವಿತ್ತು. ಇದೀಗ ಇಲ್ಲೂ ಕೂಡ ದಿನಗಳ ಕಡಿತ ಮಾಡಲಾಗಿದೆ. ಕಚೇರಿಗೆ ಬಂದು ಕೆಲಸ ಮಾಡಲು ಸೂಚಿಸಲಾಗಿದೆ. ಪ್ರೊಡಕ್ಟೀವ್ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಕಚೇರಿಯಿಂದ ಕೆಲಸ ಮಾಡಿದರೆ ಉದ್ಯೋಗಿಗಳಿಗೂ ಉತ್ತಮ ಬೆಳವಣಿಗೆ ಆಗಲಿದೆ ಎಂದಿದೆ.
ಬೆಂಗಳೂರಿನಲ್ಲಿ ಜಾರಿಯಾಗಿದೆ ಹೊಸ ರೂಲ್ಸ್
ಬೆಂಗಳೂರಿನ ಎಲ್ಲಾ ಐಟಿ ಕಂಪನಿಗಳು ಸೇರಿದಂತೆ ಇತರ ಕಂಪನಿಗಳು ವರ್ಕ್ ಫ್ರಮ್ ಹೋಮ್, ಹೈಬ್ರಿಡ್ ಮಾಡೆಲ್ ಸೇರಿದಂತೆ ಇತರ ಎಲ್ಲಾ ಅವಕಾಶಗಳನ್ನು ಅಂತ್ಯಗೊಳಿಸಿದೆ. ಪ್ರತಿ ಉದ್ಯೋಗಿ ಕೂಡ ಅಕ್ಟೋಬರ್ 1 ರಿಂದ ಕಚೇರಿಯಿಂದ ಕೆಲಸ ಮಾಡಲು ಸೂಚಿಸಿದೆ. ಹೀಗಾಗಿ ಬೆಂಗಳೂರು ಇದೀಗ ತುಂಬಿ ತುಳುಕುತ್ತಿದೆ. ಕೆಲ ವರ್ಷಗಳಿಂದ ಬೆಂಗಳೂರಿನಿಂದ ದೂರದ ಊರು ಸೇರಿಕೊಂಡಿದ್ದ ಹಲವರು ಇದೀಗ ಬೆಂಗಳೂರಿನತ್ತ ಮುಖಮಾಡಿದ್ದಾರೆ. ಎಲ್ಲಾ ಕಂಪನಿಗಳು ಉದ್ಯೋಗಿಗಳಿಂದ ತುಂಬಿ ತುಳುಕುತ್ತಿದೆ. ಇತ್ತ ಬೆಂಗಳೂರಿನ ಟ್ರಾಫಿಕ್ ಕೂಡ ಹೆಚ್ಚಾಗಿದೆ.
