ನನಗೆ ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕು ಎಂಬ ಆಸೆಯಿತ್ತು. ಆದರೆ, ಈಗ ಅಂಥ ಆಸೆ ಇಲ್ಲ. ಇನ್ನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ, ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ವಿಧಾನಸಭೆ (ಆ.14): ಈ ಹಿಂದೆ ಎರಡು ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದೇನೆ. ಆಗ ನನಗೆ ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕು ಎಂಬ ಆಸೆಯಿತ್ತು. ಆದರೆ, ಈಗ ಅಂಥ ಆಸೆ ಇಲ್ಲ. ಇನ್ನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ, ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ರಸಗೊಬ್ಬರ ಕೊರತೆ ಕುರಿತ ಚರ್ಚೆ ವೇಳೆ ನಡೆದ ಗದ್ದಲದ ನಂತರ ಸದನ ಸಮಾವೇಶಗೊಂಡಾಗ, ಕಲಾಪದಲ್ಲಿ ಶಾಸಕರು ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂಬ ಬಗ್ಗೆ ಪಾಠ ಮಾಡಿದರು.

ಈ ವೇಳೆ ನಾನು 13 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದು, 9 ಬಾರಿ ಗೆದ್ದಿದ್ದೇನೆ. ನನ್ನ ಸೋಲಿನ ಪಟ್ಟಿಯಲ್ಲಿ 2 ಲೋಕಸಭಾ ಚುನಾವಣೆಯೂ ಇದೆ. ಇನ್ನು ಮುಂದೆ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲ್ಲ ಎಂದರು. ಆಗ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಮತ್ತೊಂದು ಸಲ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ದೆಹಲಿ ರಾಜಕಾರಣಕ್ಕೆ ಹೋಗುವ ಯೋಚನೆ ಮಾಡಿ. ಈ ಹಿಂದೆ ನೀವು ನನ್ನೊಂದಿಗೆ ಮಾತನಾಡುವಾಗ ಸಂಸತ್‌ಗೆ ಹೋಗಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದೀರಿ ಎಂದು ಸ್ಮರಿಸಿದರು.

ಅದಕ್ಕೆ ಸಿದ್ದರಾಮಯ್ಯ, ನನ್ನನ್ನು ಇಲ್ಲಿಂದ ಕಳಿಸಬೇಕೆಂದಿದ್ದೀಯಾ ನೀನು ಎಂದು ಪ್ರಶ್ನಿಸಿದರು. ಜತೆಗೆ, 1980 ಮತ್ತು 1991ರಲ್ಲಿ ಲೋಕಸಭೆ ಚುನಾವಣೆ ಸ್ಪರ್ಧಿಸಿದ್ದೆ. ಆಗ ಜನ ನನ್ನನ್ನು ತಿರಸ್ಕರಿಸಿದರು. ಹೀಗಾಗಿ ಮತ್ತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದು ಸರಿಯಲ್ಲ ಎಂದು ಆಗಲೇ ತೀರ್ಮಾನಿಸಿಬಿಟ್ಟೆ. ರಾಜ್ಯ ರಾಜಕಾರಣದಲ್ಲಿರುವವರಿಗೂ ಲೋಕಸಭೆಗೆ ಹೋಗಿ ಎಂದು ಯಾರಿಗೂ ಸಲಹೆ ನೀಡುವುದೂ ಇಲ್ಲ ಎಂದು ಅವರು ಈ ವೇಳೆ ಸ್ಪಷ್ಟಪಡಿಸಿದರು. ಆಗ ಬಿಜೆಪಿ ಶಾಸಕ ಸಿ.ಸಿ. ಪಾಟೀಲ್‌, ನೀವು ದೆಹಲಿಗೆ ಹೋಗಿದ್ದರೆ ನಾವು ನೆಮ್ಮದಿಯಾಗಿರುತ್ತಿದ್ದೆವು ಎಂದು ಕಾಲೆಳೆದರು.

ಕಾಲ್ತುಳಿತ ಘಟನೆ ವಿವರಿಸಿದ ಸಿದ್ದರಾಮಯ್ಯ: ಆರ್‌ಸಿಬಿ ವಿಜಯೋತ್ಸವ ವೇಳೆ ಉಂಟಾದ ಕಾಲ್ತುಳಿತ ಹಾಗೂ ಸಾವಿನ ಬಗ್ಗೆ ಪೊಲೀಸ್‌ ಅಧಿಕಾರಿಗಳು ಸೂಕ್ತ ಸಮಯದಲ್ಲಿ ಮಾಹಿತಿ ನೀಡಲಿಲ್ಲ. ಹೀಗಾಗಿಯೇ ಪೊಲೀಸ್‌ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕಾಯಿತು ಎಂದು ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಸದಸ್ಯರಿಗೆ ವಿವರಣೆ ನೀಡಿದ್ದಾರೆ. ಪ್ರತಿಪಕ್ಷಗಳು ವಿಧಾನಮಂಡಲ ಉಭಯ ಸದನಗಳಲ್ಲಿ ಆರ್‌ಸಿಬಿ ವಿಜಯೋತ್ಸವ ವೇಳೆ ಉಂಟಾದ ದುರಂತ ಪ್ರಸ್ತಾಪಿಸಿವೆ. ಈ ಬಗ್ಗೆ ಸರ್ಕಾರವು ಬುಧವಾರ ಉತ್ತರ ನೀಡಲಿದೆ. ಈ ವೇಳೆ ಕಾಂಗ್ರೆಸ್‌ ಶಾಸಕರು ಗಟ್ಟಿಯಾಗಿ ಸರ್ಕಾರದ ಜತೆ ನಿಲ್ಲಬೇಕು ಎಂದು ತಿಳಿಸಿದರು ಎನ್ನಲಾಗಿದೆ.

ಇದೇ ವೇಳೆ ದುರ್ಘಟನೆ ಬಗ್ಗೆ ಸ್ಪಷ್ಟ ಚಿತ್ರ ನೀಡಿದ ಸಿದ್ದರಾಮಯ್ಯ ಅವರು, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಆಗಿರುವ ಬಗ್ಗೆ ಹಾಗೂ ಸಾವು ಸಂಭವಿಸಿರುವ ಬಗ್ಗೆ ಅಧಿಕಾರಿಗಳು ನಮಗೆ ಮಾಹಿತಿ ನೀಡಿರಲಿಲ್ಲ. ಮೊದಲ ಸಾವು ಸಂಭವಿಸಿದಾಗಲೇ ಮಾಹಿತಿ ನೀಡಿದ್ದರೆ ವಿಧಾನಸೌಧ ಭವ್ಯ ಮೆಟ್ಟಿಲ ಮೇಲಿನ ಕಾರ್ಯಕ್ರಮವನ್ನು ರದ್ದು ಮಾಡುತ್ತಿದ್ದೆವು. ಕಾರ್ಯಕ್ರಮ ಮುಗಿದ ಬಳಿಕವೂ ನಮಗೆ ಸಾವಿನ ಬಗ್ಗೆ ಮಾಹಿತಿ ಇರಲಿಲ್ಲ. ಸಂಜೆ 5.30 ಗಂಟೆಗೆ ಎ.ಎಸ್‌. ಪೊನ್ನಣ್ಣ ಅವರು ನನಗೆ ಮಾಹಿತಿ ನೀಡಿದರು. ಬಳಿಕ ನಾನು ನಗರ ಪೊಲೀಸ್‌ ಆಯುಕ್ತರನ್ನು ವಿಚಾರಿಸಿದರೆ ಆಗ ಅವರು ಸಾವು ಖಚಿತಪಡಿಸಿದರು. ಆಗಲೂ ನನಗೆ ಸರಿಯಾದ ಸಾವಿನ ಸಂಖ್ಯೆ ನೀಡಿರಲಿಲ್ಲ. ಹೀಗಾಗಿ ಪೊಲೀಸ್‌ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕಾಯಿತು ಎಂದು ವಿವರಣೆ ನೀಡಿದರು ಎಂದು ಮೂಲಗಳು ತಿಳಿಸಿವೆ.