ಬೆಂಗಳೂರು ಮೆಟ್ರೋ ದರ ಇಳಿಕೆಗೆ ಪಟ್ಟು ಹಿಡಿದಿರುವ ಸಂಸದ ತೇಜಸ್ವಿ ಸೂರ್ಯ, ರಾಜ್ಯ ಸರ್ಕಾರದ ಬಳಿ ದರ ನಿಗದಿ ವರದಿ ಇರುವುದೇ ಅನುಮಾನ ಎಂದು ಹೇಳಿದ್ದಾರೆ. ಬಿಎಂಆರ್‌ಸಿಎಲ್ ಹಾರಿಕೆ ಉತ್ತರ ನೀಡುತ್ತಿದೆ, ಸರ್ಕಾರ ಕೋರ್ಟ್‌ನಲ್ಲಿ ಛೀಮಾರಿ ಹಾಕಿಸಿಕೊಳ್ಳಲಿದೆ ಎಂದು ಅವರು ಆರೋಪಿಸಿದ್ದಾರೆ.
ಬೆಂಗಳೂರು (ಸೆ.4): ಮನಸೋಇಚ್ಛೆ ಬೆಂಗಳೂರು ಮೆಟ್ರೋ ದರವನ್ನು ಇಳಿಕೆ ಮಾಡಲೇಬೇಕು ಎನ್ನುವ ನಿಟ್ಟಿನಲ್ಲಿ ಪಣ ತೊಟ್ಟಂತಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ರಾಜ್ಯ ಸರ್ಕಾರದ ಬಳಿ ನಮ್ಮ ಮೆಟ್ರೋ ಫೇರ್ ಫಿಕ್ಸೇಷನ್ ರಿಪೋರ್ಟ್ ಇರುವುದೇ ಅನುಮಾನ ಎಂದು ಹೇಳಿದ್ದಾರೆ. ಈಗಾಗಲೇ ಹಲವು ಬಾರಿ ಫೇರ್ ಫಿಕ್ಸೇಷನ್ ರಿಪೋರ್ಟ್‌ಅನ್ನು ನೀಡಿ ಎಂದು ಕೇಳಲಾಗಿದೆ. ಇಲ್ಲಿಯವರೆಗೂ ಬಿಎಂಆರ್‌ಸಿಎಲ್ ಅಧಿಕಾರಿಗಳು ಹಾರಿಕೆ ಉತ್ತರವನ್ನೇ ನೀಡುತ್ತಿದ್ದಾರೆ. ಮೆಟ್ರೋ ಎನ್ನುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾಲುದಾರಿಕೆ ಆಗಿದ್ದರೂ, ಮೆಟ್ರೋ ದರ ನಿಗದಿಯ ಸಂಪೂರ್ಣ ಹಕ್ಕು ಇರುವುದು ರಾಜ್ಯ ಸರ್ಕಾರಕ್ಕೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ವಿನಾಕಾರಣ ದೂರುತ್ತಿದ್ದಾರೆ ಎಂದು ಆರೋಪಿಸಿದರು.
ಮೆಟ್ರೋ ದರ ಏರಿಕೆ ವಿಚಾರದ ಬಗ್ಗೆ ಎರಡು ದಿನದ ಹಿಂದೆ ಕೋರ್ಟ್‌ನಲ್ಲಿ ವಿಚಾರಣೆ ಆಗಿದೆ. ರಾಜ್ಯ ಸರ್ಕಾರ ಅಫಿಡೆವಿಟ್ ಸಲ್ಲಿಸಿದ್ದು, ಫೇರ್ ಫಿಕ್ಸೇಷನ್ ರಿಪೋರ್ಟ್‌ಅನ್ನು ಪಬ್ಲಿಶ್ ಮಾಡುತ್ತೇವೆ ಎಂದು ಹೇಳಿದೆ. ಆದರೆ, ಈವರೆಗೂ ಮಾಡಿಲ್ಲ. ಸೆ. 22ಕ್ಕೆ ಕೊನೇ ವಿಚಾರಣೆ ಇದೆ. ಅಷ್ಟರೊಳಗೆ ಸರ್ಕಾರ ರಿಪೋರ್ಟ್‌ಅನ್ನು ಪಬ್ಲಿಶ್ ಮಾಡಿದರೆ ಬಚಾವ್ ಆಗುತ್ತದೆ. ಇಲ್ಲದೇ ಇದ್ದಲ್ಲಿ ಕೋರ್ಟ್‌ನಿಂದ ಸರ್ಕಾರ ಛೀಮಾರಿ ಹಾಕಿಸಿಕೊಳ್ಳಲಿದೆ. ನನಗೆ ಯಾಕೋ ಸರ್ಕಾರದ ಬಳಿ ಫೇರ್ ಪಿಕ್ಸೆಷನ್ ರಿಪೋರ್ಟ್ ಇರುವ ಬಗ್ಗೆಯೇ ಅನುಮಾನವಿದೆ. ಈಗ ಹಳೆ ಡೇಟ್ ಹಾಕಿ ರಿಪೋರ್ಟ್ ಪಬ್ಲಿಶ್ ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಿದ್ದಾರೆ.
ದಿನಕ್ಕೆ 200 ರೂಪಾಯಿ ಕೊಟ್ಟು ಮೆಟ್ರೋ ಪ್ರಯಾಣ ಸಾಧ್ಯವಿಲ್ಲ
ರಾಜ್ಯ ಸರ್ಕಾರದಲ್ಲಿ ಯಾವುದೇ ಆದಾಯ ಇಲ್ಲ. ಇವರಿಂದ ಯಾವ ರೀತಿಯ ಆಡಳಿತ ನಿರೀಕ್ಷಿಸಲು ಸಾಧ್ಯ? ಬಸ್ ಫ್ರೀ ಕೊಟ್ಟು ಮೆಟ್ರೋ ದರ ಏರಿಸಿ ಬಡವರ ಪರ ಸರ್ಕಾರ ಎಂದು ಬಿಂಬಿಸ್ತಾ ಇದ್ದಾರೆ. ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ಬಳಸುವವರ ಮೇಲೆ ರಾಜ್ಯ ಸರ್ಕಾರ ಹೊರೆ ಹಾಕಿದೆ. ದಿನಕ್ಕೆ 200 ರೂ. ಕೊಟ್ಟು ಮೆಟ್ರೋದಲ್ಲಿ ಯಾರಿಗೆ ಹೋಗಲು ಆಗುತ್ತದೆ. ರಾಜ್ಯ ಸರ್ಕಾರ ದಯವಿಟ್ಟು ಮೆಟ್ರೋ ದರ ಇಳಿಸಲಿ. ಮೆಟ್ರೋ ದರ ಏರಿಕೆ ಬಗ್ಗೆ ನಾನು ಕೋರ್ಟ್ ಗೆ ಹೋಗಿದ್ದೆ. ರಾಜ್ಯ ಸರ್ಕಾರ ಕೋರ್ಟ್‌ಗೆ ಅಫಿಡವಿಟ್ ಹಾಕಿದೆ. ದೆಹಲಿ ಮೆಟ್ರೋದಲ್ಲಿ 2-3 ರೂಪಾಯಿ ದರ ಏರಿಕೆ ಮಾಡಿದ್ದಾರ. ನಮ್ಮಲ್ಲಿ 20 ರೂಪಾಯಿ ಏರಿಕೆ ಮಾಡಿದ್ದಾರೆ. ಮೆಟ್ರೋ ದರ ಏರಿಕೆ ಕೇವಲ ರಾಜ್ಯ ಸರ್ಕಾರದ ನಿರ್ಧಾರ. ಬೇರೆ ಬೇರೆ ದೇಶಕ್ಕೆ ಹೋಗಿ ಅಧ್ಯಯನ ಮಾಡಿಕೊಂಡು ಬಂದು ರಿಪೋರ್ಟ್ ಕೊಟ್ಟಿದ್ದೇವೆ ಎಂದಿದ್ದಾರೆ. ಅವರುಗಳು ಈ ದೇಶಕ್ಕೆ ಹೋಗಿ ಏನೆಲ್ಲಾ ಜ್ಞಾನಾರ್ಜನೆ ಮಾಡಿಕೊಂಡು ಬಂದಿದ್ದಾರೆ ಅನ್ನೋ ಕುತೂಹಲ ನಮಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಳ್ಳಬೇಕಾಗುತ್ತದೆ
ರಾಜ್ಯ ಸರ್ಕಾರದ ಬಳಿ ದರ ನಿಗದಿ ವರದಿ ಇದೆಯೋ ಇಲ್ಲವೋ ಅಂತಾ ಅನುಮಾನ ಇದೆ. ವರದಿ ಇದ್ದರೆ ಯಾಕೆ ಬಹಿರಂಗ ಮಾಡುತ್ತಿಲ್ಲ? BMRCL ದರ ನಿಗದಿ ವರದಿ ಬಹಿರಂಗ ಮಾಡಲು ಅನುಮತಿ ಕೇಳಿ ಪತ್ರ ಬರೆದಿದೆ. ಆನ್ ಲೈನ್ ನಲ್ಲಿ ಪಬ್ಲಿಷ್ ಮಾಡುವಂತೆ ಜುಲೈನಲ್ಲೇ ರಾಜ್ಯ ಸರ್ಕಾರ ಅನುಮೋದನೆ ಕೊಟ್ಟಿದೆ. ಈಗ ಸೆಪ್ಟೆಂಬರ್ ತಿಂಗಳು ಆಗಿದೆ, ಇನ್ನಾದರೂ BMRCL ರಾಜ್ಯ ಸರ್ಕಾರದ ಪತ್ರವನ್ನು ತೆಗೆದು ನೋಡಿ ವರದಿ ಪಬ್ಲಿಷ್ ಮಾಡುತ್ತದೋ ನೋಡಬೇಕು. ಇಲ್ಲದಿದ್ದರೆ ಸೆ. 22 ರಂದು ಕೋರ್ಟ್ ನಲ್ಲಿ ಮುಂದಿನ ವಿಚಾರಣೆ ವೇಳೆ ಛೀಮಾರಿ ಹಾಕಿಸಿಕೊಂಡು ದರ ನಿಗದಿ ವರದಿ ಬಹಿರಂಗ ಮಾಡಬೇಕಾಗುತ್ತದೆ ಎಂದಿದ್ದಾರೆ.
